ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಜಾಗತಿಕರಣಕ್ಕೆ ತುಳು ರಂಗಭೂಮಿ ಸೆಡ್ಡು

Mainashree
Updated On : 10 Feb 2014, 9:53 am

ಉಡುಪಿ: ತುಳು ರಂಗಭೂಮಿ ತನ್ನ ವೈಚಾರಿಕಾ ರಂಗ ಪ್ರಯೋಗಗಳ ಮೂಲಕ ಜಾಗತೀಕರಣಕ್ಕೆ ಸೆಡ್ಡು ಹೊಡೆಯುತ್ತಿದೆ ಎಂದು ಚಿಂತಕ ಪ್ರೊ.ಕೆ. ಫಣಿರಾಜ್ ಸಂತಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಇಲ್ಲಿಗೆ ಸಮೀಪದ ಪಟ್ಲದ ಯು.ಎಸ್. ನಾಯಕ್ ಬಯಲು ರಂಗಮಂದಿರದಲ್ಲಿ ಭೂಮಿಗೀತ ಸಾಂಸ್ಕೃತಿಕ ವೇದಿಕೆ ವತಿಯಿಂದ 3 ದಿನಗಳ 'ರಂಗಹಬ್ಬ - 2014' ಉದ್ಘಾಟಿಸಿ ಅವರು ಮಾತನಾಡಿದರು.
ರಂಗಭೂಮಿ ಜಾಗತೀಕರಣದ ಪ್ರಭಾವಕ್ಕೊಳಗಾಗುತ್ತಿದೆ. ಇಂಗ್ಲಿಷ್ ನಾಟಕಗಳಿಂದ ಪ್ರೇರಿತವಾಗಿದೆ ಎನ್ನುವ ಆರೋಪಗಳಿವೆ. ಆದರೆ ತುಳು ರಂಗಭೂಮಿ ಅತ್ಯಂತ ಪ್ರಯೋಗಶೀಲತೆಯನ್ನು ಮೈಗೂಡಿಸಿಕೊಳ್ಳುತ್ತ, ಸ್ಥಳೀಯ ಮತ್ತು ತೀರ ಆತಂಕಿತ ವಿಷಯಗಳನ್ನೇ ಎತ್ತಿಕೊಳ್ಳುತ್ತ ಈ ಆರೋಪಗಳನ್ನು ಸುಳ್ಳು ಮಾಡುತ್ತಿದೆ. ವಿಶಾಲ ಪ್ರೇಕ್ಷಕ ಸಮುದಾಯವೇ ಇರುವ ಕನ್ನಡ ರಂಗಭೂಮಿಯಲ್ಲಿ ಪ್ರಯೋಗವಾಗುವುದಕ್ಕೆ ಹಿಂದೇಟು ಹಾಕುತ್ತಿರುವಂತಹ ನಾಟಕಗಳು ಇಂದು ತುಳು ರಂಗಭೂಮಿಯಲ್ಲಿ ಪ್ರಯೋಗಗೊಳ್ಳುತ್ತಿವೆ. ಇದು ಅತ್ಯಂತ ಆಪೇಕ್ಷಿತ ಬೆಳವಣಿಗೆಯಾಗಿದೆ ಎಂದು ಫಣಿರಾಜ್ ಅಭಿಪ್ರಾಯಪಟ್ಟರು.
ರಂಗಭೂಮಿಯಲ್ಲಿ ಸವಾಲಿನ ನಾಟಕಗಳ ಪ್ರದರ್ಶನ ಆಗುತ್ತಿಲ್ಲ, ಹೊಸ ಪ್ರಯೋಗಗಳು ಆಗುತ್ತಿಲ್ಲ, ಈಗಲೂ ಗಿರೀಶ್ ಕಾರ್ನಾಡ್, ಲಂಕೇಶ್ ಅವರ ನಾಟಕಗಳನ್ನು ನೆಚ್ಚಿಕೊಳ್ಳಬೇಕಾಗಿದೆ. ನಾಟಕಗಳಿಗೆ ಪ್ರೇಕ್ಷಕರ ಕೊರತೆ ಇದೆ ಎನ್ನುವ ಕಾರಣಗಳನ್ನು ನೀಡಲಾಗುತ್ತಿದೆ. ಆದರೆ ಇದು ಸುಳ್ಳು ಎನ್ನುವುದನ್ನು ಉಡುಪಿ ಮತ್ತು ಸುತ್ತಮುತ್ತಲು ನಡೆಯುತ್ತಿರುವ ರಂಗಪ್ರಯೋಗಳೇ ಸಾಕ್ಷಿ ಎಂದವರು ಹೇಳಿದರು. ಈ ಹಿನ್ನೆಲೆಯಲ್ಲಿ ಪಟ್ಲದಂತಹ ಗ್ರಾಮೀಣ ಪ್ರದೇಶದಲ್ಲಿ ವೈಚಾರಿಕ ನಾಟಕಗಳ ಪ್ರದರ್ಶನ ಮಾಡುತ್ತಿರುವ ಭೂಮಿಗೀತದ ಧೈರ್ಯ ಮೆಚ್ಚಬೇಕಾದ್ದು ಎಂದರು.
ಮುಖ್ಯ ಅತಿಥಿಯಾಗಿದ್ದ ಯುವ ಕಾಂಗ್ರೆಸ್ ನಾಯಕ ಅಮೃತ ಶೆಣೈ, ಇಂದು ಯುವ ಜನತೆಯಲ್ಲಿ ಅಪರಾಧ ಮನೋಭಾವ, ವ್ಯಸನ, ಅನೈತಿಕ ಚಟುವಟಿಕೆಗಳು ಹೆಚ್ಚುತ್ತಿವೆ. ಇದನ್ನು ದೂರ ಮಾಡುವುದಕ್ಕೆ ಯುವ ಸಮಾಜದಲ್ಲಿ ಒಂದು ನೈತಿಕ ತಳಹದಿಯನ್ನು ಒದಗಿಸಬೇಕಾಗಿದೆ. ರಂಗಭೂಮಿ ಇದಕ್ಕೆ ಅತ್ಯಂತ ಪ್ರಶಸ್ತವಾದದ್ದು ಎಂದು ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆಯನ್ನು ಭೂಮಿಗೀತದ ಗೌರವಾಧ್ಯಕ್ಷ ಪಿ. ನಾಗೇಶ್ ನಾಯಕ್ ವಹಿಸಿದ್ದರು. ಅಧ್ಯಕ್ಷ ಎಚ್.ಎನ್. ನಟರಾಜ್  ಅತಿಥಿಗಳನ್ನು ಸ್ವಾಗತಿಸಿದರು. ನಿರ್ದೇಶಕ ಸಂತೋಷ್ ನಾಯಕ್ ಪಟ್ಲ ಕಾರ್ಯಕ್ರಮ ಸಂಯೋಜಿಸಿದ್ದರು. ಕಾರ್ಯದರ್ಶಿ ಸುಧೀರ್ ಕುಮಾರ್ ವಂದಿಸಿದರು.
ರಂಗಹಬ್ಬ- 2014ರ ಮೊದಲ ದಿನ ಶುಕ್ರವಾರ ಮಣಿಪಾಲದ ಸಂಗಮ ಕಲಾವಿದೆರ್ ತಂಡದ 'ಮೋಹನದಾಸೆ' ಮತ್ತು ಶನಿವಾರ ಹಾರಾಡಿಯ ಭೂಮಿಕಾ ತಂಡದ 'ಅಗ್ನಿಲೋಕ' ನಾಟಕಗಳು ಪ್ರದರ್ಶನಗೊಂಡವು. ಕೊನೆಯ ದಿನವಾದ ಭಾನುವಾರ ಅತಿಥೇಯ ಭೂಮಿಗೀತ ತಂಡದ 'ವಿನಶನ' ನಾಟಕ ಪ್ರದರ್ಶನಗೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement