ತೆರಿಗೆ ಸರಿಯಾಗಿ ಪಾವತಿಸಿದ್ರೂ ದಂಡ!
ಮಂಗಳೂರು: ಮಾಹಿತಿ ಕೊರತೆ ಹಾಗೂ ಖಜಾನೆ ಅಧಿಕಾರಿಗಳ ವಿಳಂಬ ನೀತಿಯಿಂದ ಕ್ಲಪ್ತ ಸಮಯಕ್ಕೆ ತೆರಿಗೆ ಪಾವತಿಸಿದರೂ ಸರ್ಕಾರಿ ನೌಕರರು ಆದಾಯ ತೆರಿಗೆ ಇಲಾಖೆಗೆ ದಂಡ ತೆರುತ್ತಿದ್ದಾರೆ.
2007-08 ಅವಧಿಯಲ್ಲಿ ಆದಾಯ ತೆರಿಗೆ ಪಾವತಿಸಿದ ಹಲವು ಮಂದಿ ನೌಕರರಿಗೆ ಆದಾಯ ತೆರಿಗೆ ಇಲಾಖೆಯಿಂದ ದಂಡ ಪಾವತಿಸುವಂತೆ ನೋಟಿಸ್ ಬಂದಾಗಲೇ ವಿಷಯ ಅರಿವಿಗೆ ಬಂದಿದೆ.
ನೌಕರರು ಕ್ಲಪ್ತ ಸಮಯದಲ್ಲಿ ತೆರಿಗೆ ಪಾವತಿಸಿದರೂ ಆದಾಯ ತೆರಿಗೆ ಖಾತೆಗೆ ತಡವಾಗಿ ಜಮೆ ಆಗುತ್ತಿತ್ತು. ಈ ವಿಚಾರ ನೌಕರರಿಗೆ ಗೊತ್ತಿರಲಿಲ್ಲ. ಈಗ ಐದಾರು ವರ್ಷದಿಂದ ಈ ರೀತಿ ವಿಳಂಬವಾಗಿರುವ ಬಗ್ಗೆ ಇಲಾಖೆಯಿಂದ ನೌಕರರಿಗೆ ನೋಟಿಸ್ ಬರುತ್ತಿದೆ. ವೇತನ ಲೆಕ್ಕಾಚಾರ ಹಾಕಿ ದಂಡ ವಿಧಿಸಲಾಗಿದೆ.
ಈ ಬಗ್ಗೆ ಖಜಾನೆಯಲ್ಲಿ ಪ್ರಶ್ನಿಸಿದರೆ, ಸಿಬ್ಬಂದಿ ಕೊರತೆ ಇದೆ. ಆದರೂ, ನಿಗದಿತ ಸಮಯದೊಳಗೆ ಆದಾಯ ತೆರಿಗೆ ಇಲಾಖೆ ಖಾತೆಗೆ ಜಮೆ ಮಾಡುತ್ತೇವೆ ಎಂದು ಉತ್ತರಿಸುತ್ತಾರೆ. ಹಾಗಾದರೆ ಇಲಾಖೆ ಸುಮ್ಮನೆ ನೋಟಿಸ್ ಕಳುಹಿಸಿದೆಯೇ ಎಂದು ಪ್ರಶ್ನಿಸುತ್ತಾರೆ ನೊಂದ ನೌಕರರು.
ದಂಡ ಪಾವತಿಸುವಂತೆ ಅರಣ್ಯ, ಕಂದಾಯ, ಶಿಕ್ಷಣ, ಸಾರಿಗೆ ಇಲಾಖೆ ಸೇರಿದಂತೆ ಬಹುತೇಕ ಸರ್ಕಾರಿ ಇಲಾಖೆ ನೌಕರರಿಗೆ ನೋಟಿಸ್ ಬಂದಿದೆ. ಇವರೆಲ್ಲರೂ ಆದಾಯ ತೆರಿಗೆ ಇಲಾಖೆಗೆ, ಖಜಾನೆ ಅಧಿಕಾರಿಗಳಿಗೆ ದೂರು ನೀಡಿದರೂ ಪರಿಸ್ಥಿತಿ ಸರಿಯಾಗಿಲ್ಲ.
ಇ- ಫೈಲಿಂಗ್ ವಿಳಂಬಕ್ಕೂ ದಂಡ: ಪ್ರತಿ ಮೂರು ತಿಂಗಳಿಗೊಮ್ಮೆ ಇ-ಫೈಲಿಂಗ್ ಮಾಡದಿದ್ದರೂ ದಂಡ ವಿಧಿಸುತ್ತಾರೆ. ಆದಾಯ ತೆರಿಗೆ ಕಾನೂನಿನ ಸೆಕ್ಷನ್ 234ಇಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಇ-ಫೈಲಿಂಗ್ ಮಾಡದಿದ್ದರೆ ಅಂಥ ಸರ್ಕಾರಿ ನೌಕರರಿಗೆ ದಿನಕ್ಕೆ ರು. 200ರಂತೆ ದಂಡ ವಿಧಿಸುವ ಕಾನೂನು 2012 ಜುಲೈನಿಂದ ಜಾರಿಗೆ ಬಂದಿದೆ.
ವೇತನದಿಂದ ಆದಾಯ ತೆರಿಗೆ ಖಜಾನೆ ಮೂಲಕ ಅಥವಾ ಬ್ಯಾಂಕ್ ಮೂಲಕ ಪಾವತಿಸುತ್ತಿರುವ ಸಂಸ್ಥೆಗಳು ಇ-ಫೈಲಿಂಗ್ ಮಾಹಿತಿಯನ್ನು 3 ತಿಂಗಳ ನಂತರ 15 ದಿನದೊಳಗೆ ಆದಾಯ ತೆರಿಗೆ ಇಲಾಖೆಗೆ ಸ್ವತಃ ಸಲ್ಲಿಸಬೇಕು.
ಸರ್ಕಾರಿ ಕಚೇರಿಗಳಲ್ಲಿ ಹಿರಿಯ ಅಧಿಕಾರಿಗಳು ಇದಕ್ಕೆ ಜವಾಬ್ದಾರರು. ಇದಕ್ಕೆ ತಪ್ಪಿದರೆ ದೊಡ್ಡ ಮೊತ್ತದ ದಂಡ ತೆರಬೇಕಾಗುತ್ತದೆ. ಈಗಾಗಲೇ ರು. 60 ಸಾವಿರದಿಂದ ರು. 1.50 ಲಕ್ಷ ವರೆಗೆ ದಂಡ ವಿಧಿಸಿದ ಉದಾಹರಣೆ ಇದೆ ಎನ್ನುತ್ತಾರೆ ಸರ್ಕಾರಿ ನೌಕರರೊಬ್ಬರು.
ಖಜಾನೆ ಅಧಿಕಾರಿಗಳು ಹೇಳೋದೇನು?: 'ಕಚೇರಿಯಲ್ಲಿ ನೌಕರರ ಕೊರತೆ ಇರುವುದು ನಿಜ. ಆದರೆ ನೌಕರರಿಗೆ ತೊಂದರೆಯಾಗದಂತೆ ಸಮಯಕ್ಕೆ ಸರಿಯಾಗಿ ವೇತನ ಬಟವಾಡೆ ಮಾಡುತ್ತೇವೆ. ವೇತನದಲ್ಲಿ ಕಡಿಗೊಳಿಸಿದ ಮೊತ್ತವನ್ನು ಪ್ರತಿ ತಿಂಗಳ 10ರೊಳಗೆ ಆದಾಯ ತೆರಿಗೆ ಇಲಾಖೆಗೆ ಪಾವತಿಸಿ, ನಂತರ ವಿವರ ಸರ್ಕಾರಕ್ಕೆ ಸಲ್ಲಿಸುತ್ತೇವೆ. ನಮಗೆ ಸರ್ಕಾರದ ನಿರ್ದೇಶನ ಇರುವುದೇ ಹಾಗೆ' ಎನ್ನುತ್ತಾರೆ ಖಜಾನೆ ಅಧಿಕಾರಿಗಳು.
'ಆದಾಯ ತೆರಿಗೆ ಕ್ಲಪ್ತ ಸಮಯದಲ್ಲಿ ಖಾತೆಗೆ ಇನ್ನಾದರೂ ಜಮೆ ಮಾಡಿ, ಅಲ್ಲದೆ ಇ-ಫೈಲಿಂಗ್ಗೆ ದಂಡ ವಿಧಿಸುವಲ್ಲಿ ವಿನಾಯ್ತಿ ನೀಡಬೇಕು.
ಆದಾಯ ತೆರಿಗೆ ಇಲಾಖೆ ನಿಯಮಗಳನ್ನು ಕೇವಲ ವೆಬ್ಸೈಟ್ನಲ್ಲಿ ಮಾತ್ರ ಪ್ರಕಟಿಸುತ್ತದೆ. ಇದು ಸರ್ಕಾರಿ ನೌಕರರ ಗಮನಕ್ಕೆ ಬರುವುದಿಲ್ಲ. ಆದ್ದರಿಂದ ನೌಕರರಿಗೆ ಸರಿಯಾದ ತಿಳುವಳಿಕೆ ನೀಡಲು ಇಲಾಖೆ ಮುಂದಾಗಬೇಕು' ಎಂದು ಜಗಜೀವನದಾಸ ಭಂಡಾರಿ ಆಗ್ರಹಿಸುತ್ತಾರೆ.
ಆತ್ಮಭೂಷಣ್