ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನೇತ್ರಾವತಿ ಹರಿದರೂ ಬಂಟ್ವಾಳಕ್ಕೆ ನೀರಿಲ್ಲ!

Mainashree
Updated On : 10 Feb 2014, 9:50 am

ಬಂಟ್ವಾಳ: ಒಡಲಲ್ಲೇ ನೇತ್ರಾವತಿ ಹರಿದರೂ ಬಂಟ್ವಾಳಕ್ಕೇನು ಬರ ಬಾರದು ಎಂದಿಲ್ಲ. ಜನವರಿ ಕಳೆಯುತ್ತಿದ್ದಂತೆಯೇ ನೀರಿಲ್ಲ... ನೀರಿಲ್ಲ.. ಎನ್ನುವ ಕೂಗು ತಾಲೂಕಿನೆಲ್ಲೆಡೆ ಕೇಳಿಬರುತ್ತಿದ್ದು, ವರ್ಷದಿಂದ ವರ್ಷಕ್ಕೆ ಈ ಪರಿಸ್ಥಿತಿ ಬಿಗಡಾಯಿಸುತ್ತಲೇ ಇದೆ.
ದಾನಶೂರರಂತೆ ನೇತ್ರಾವತಿಯ ನೀರಿನಿಂದ ವರ್ಷವಿಡೀ ಜಿಲ್ಲೆಗೆ ವಿದ್ಯುತ್, ನೀರು ಒದಗಿಸುವ ಬಂಟ್ವಾಳದವರ ಬೇಸಿಗೆಯ ನೀರ ರೋಧನ ಯಾರಿಗೂ ಕೇಳಿಸದು.
ಕಳೆದ ಕೆಲವರ್ಷಗಳಿಂದೀಚೆಗೆ ಬೇಸಿಗೆಯಲ್ಲಿ ಗ್ರಾಮದ ಜನತೆಗೆ ಕುಡಿಯುವ ನೀರು ಒದಗಿಸಲು ಕೆಲವು ಪಂಚಾಯಿತಿಗಳು ಹರಸಾಹಸಪಡುತ್ತಿದೆ. ಕಳೆದ ವರ್ಷ ತಾಲೂಕಿನಲ್ಲಿ ಫೆಬ್ರವರಿ ಕಳೆಯುತ್ತಿದ್ದಂತೆಯೇ ಸುಮಾರು 30 ಗ್ರಾಮ ಪಂಚಾಯಿತಿಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಿತು. ಅಲ್ಲದೆ ಬೇಸಿಗೆಯಲ್ಲಿ ಕರೋಪಾಡಿ, ನರಿಂಗಾನ, ಪಜೀರು, ಬಾಳೆಪುಣಿ, ಅಮ್ಟಾಡಿ, ಕೊಳ್ನಾಡು, ಇರಾ ಕುರ್ನಾಡು ಹಾಗೂ ಪುಣಚ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರ ಬವಣೆ ಹೆಚ್ಚಾದ್ದರಿಂದ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿತ್ತು.
ಈಗ ಮತ್ತೆ ಬಂಟ್ವಾಳ ಪುರಸಭಾ ವ್ಯಾಪ್ತಿ ಸೇರಿದಂತೆ ತಾಲೂಕಿನ ವಿವಿಧಡೆಗಳಲ್ಲಿ ನೀರ ಹಾಹಾಕಾರ ಕೇಳಿಬರುತ್ತಿದ್ದು, ಮಾರ್ಚ್ ಬಳಿಕ ಇದು ಇನ್ನೂ ಹೆಚ್ಚಾಗಬಹುದು. ಬಂಟ್ವಾಳ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು, ಪಲ್ಲಮಜಲು, ಕಾಮಾಜೆ, ಗಾಣದಕೋಡಿ, ಬಾರೆಕಾಡು ಆಶ್ರಯ ಕಾಲೋನಿ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಗೋಚರಿಸುತ್ತಿದೆ. ಇರುವ ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ, ಕುಡಿಯುವ ನೀರಿನ ಪೂರೈಕೆಗೆ ಬಂಟ್ವಾಳ ಪುರಸಭೆ ಆದಾಯಕ್ಕಿಂತಲೂ ದುಪ್ಪಟ್ಟು ವೆಚ್ಚ ಮಾಡುತ್ತಿದ್ದು, ಕೆಲದಿನಗಳ ಹಿಂದಿನ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದಲೇ ಛೀಮಾರಿ ಹಾಕಿಸಿಕೊಂಡಿತ್ತು.
ಬರಕ್ಕೇನು ಕಾರಣ..: ಕೆಲವು ಪಂಚಾಯಿತಿಗಳಲ್ಲಿ ನೀರು ಸರಬರಾಜು ವ್ಯವಸ್ಥೆಯಲ್ಲಿ ಉಂಟಾಗಿರುವ ಲೋಪ ಈ ಬರಕ್ಕೆ ಕಾರಣವಾಗುತ್ತಿದ್ದರೆ, ಇನ್ನೂ ಕೆಲವೆಡೆ ಪಂಪ್ ಹಾಳಾಗಿರುವುದು, ನಿರ್ವಹಣೆಯಲ್ಲಿನ ಲೋಪ, ನಿರ್ಲಕ್ಷ್ಯ, ನೀರಿನ ಅತಿಬಳಕೆಯೂ ಕಾರಣವಾಗುತ್ತಿದೆ. ಅಂತರ್ಜಲಮಟ್ಟ ವರ್ಷದಿಂದ ವರ್ಷಕ್ಕೆ ಪಾತಾಳಕ್ಕೆ ಇಳಿಯುತ್ತಿರುವುದೂ ಬರಕ್ಕೆ ಮೂಲ ಕಾರಣ ಎಂಬುದು ಜಲತಜ್ಞರ ಅಭಿಪ್ರಾಯ.
ಮರುಭೂಮಿಯಲ್ಲೊಂದು ಓಯಸಿಸ್..: ನೀರಿನ ಅಂತರ್ಜಲ ಮಟ್ಟ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿರುವುದರಿಂದ ಈ ವಾರ್ಷಿಕ ಸಮಸ್ಯೆ ಮರುಕಳಿಸುತ್ತಲೇ ಇದೆ. ಕಳೆದ ವರ್ಷದಿಂದ ಕೊಳವೆ ಬಾವಿಗಳ ನಿರ್ಮಾಣಕ್ಕೆ  ಜಿಲ್ಲಾಧಿಕಾರಿಗಳು ಅಂಕುಶ ಹಾಕಿದ್ದಾರಾದರೂ, ನಿರೀಕ್ಷಿತ ಯಶಸ್ಸು ಕಂಡಿಲ್ಲ. ಆದರೆ, ಕೊಳವೆ ಬಾವಿಗಳ ನಾಗಲೋಟಕ್ಕೆ ಬ್ರೇಕ್ ಹಾಕಿರುವುದಂತೂ ಸತ್ಯ.
ಮತ್ತೊಂದೆಡೆ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಮನೆಗೊಂದು ಬಾವಿ ಕಲ್ಪನೆಯಡಿ ತಾಲೂಕಿನಲ್ಲಿ  ಸಾವಿರಕ್ಕೂ ಅಧಿಕ ಬಾವಿಗಳು ನಿರ್ಮಾಣಗೊಂಡಿರುವುದು, ಮರುಭೂಮಿಯಲ್ಲಿ ಓಯಸಿಸ್ ಕಂಡಂತಾಗಿದೆ.
ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಕೈಗಳಿಗೆ ಕೆಲಸ ಕೊಡುವುದರ ಜೊತೆಗೆ ಜಲಮರುಪೂರಣದ  ಕಾರ್ಯ ನಡೆಸಬೇಕು ಎನ್ನುವ ದ.ಕ. ಜಿಲ್ಲಾ ಪಂಚಾಯಿತಿನ ಯೋಜನೆ ಬಂಟ್ವಾಳದಲ್ಲಿ ಭರ್ಜರಿ ಜಾರಿಯ ಹಂತದಲ್ಲಿದೆ.
ಈಗಾಗಲೇ ತಾಲೂಕಿನ 47 ಗ್ರಾಮ ಪಂಚಾಯಿತಿಗಳ ಪೈಕಿ ಪೆರ್ನೆ ಅನಂತಾಡಿ ಗ್ರಾಮ ಪಂಚಾಯಿತಿಗಳನ್ನು ಹೊರತು ಪಡಿಸಿ ಉಳಿದ 45 ಗ್ರಾಮ ಪಂಚಾಯಿತಿಗಳು ಜನವರಿ ಅಂತ್ಯದವರೆಗೆ ಒಟ್ಟು 1,612 ಬಾವಿ ತೋಡಲು ಕ್ರಿಯಾ ಯೋಜನೆ ತಯಾರಿಸಲಾಗಿದೆ. ನೂರಾರು ಬಾವಿಗಳ ನಿರ್ಮಾಣಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಇವುಗಳ ಪೈಕಿ ಬಾಳೆಪುಣಿ 280, ಕಾವಳಮೂಡೂರು 100, ಕುರ್ನಾಡು 75, ಇರಾ 60, ಸಜಿಪಮೂಡ 65 ಇಡ್ಕಿದು, ಸಂಗಬೆಟ್ಟು, ಸಜಿಪಮುನ್ನೂರು ಹಾಗೂ ಸಂಗಬೆಟ್ಟು ಗ್ರಾ.ಪಂ.ಗಳು ತಲಾ 50 ಬಾವಿ ನಿರ್ಮಾಣಕ್ಕೆ ಮುಂದಾಗಿದೆ. ಮುಂದಿನ ವರ್ಷಗಳಲ್ಲಿ ಈ ಬಾವಿಗಳ ಮೂಲಕ ಅಂತರ್ಜಲ ಮಟ್ಟ ಏರಿಕೆಯಾಗುವುದರ ಜೊತೆಯಲ್ಲಿ ಊರಬರ ದೂರವಾಗುವ ಆಶಯಗಳನ್ನಿರಿಸಲಾಗಿದೆ.
ಮತ್ತೊಂದೆಡೆ ಅಂತರ್ಜಲ ಮಟ್ಟ ಹೆಚ್ಚಿಸಲು ಜಲಾನಯನ ಇಲಾಖೆ ವಿವಿಧ ಯೋಜನೆಗಳನ್ನು ಗ್ರಾಮಗಳಲ್ಲಿ ಅನುಷ್ಠಾನಗೊಳಿಸುತ್ತಿದೆ. ಕಿಂಡಿ ಅಣೆಕಟ್ಟು, ತಡೆಗೋಡೆ, ಕೃಷಿಹೊಂಡ, ಕೊಳವೆ ಬಾವಿಗಳ ಜಲಮರುಪೂರಣದಂತಹಾ ಕಾರ್ಯಕ್ರಮಗಳನ್ನು ಇಲಾಖೆ ನಡೆಸುತ್ತಿದೆ.
ಬಹುಗ್ರಾಮ ಈ ಬಾರಿ ಜಾರಿ ಖಚಿತ..: ಬಂಟ್ವಾಳ ಕ್ಷೇತ್ರದ ಬಹುವರ್ಷಗಳ ಬೇಡಿಕೆಯಾಗಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪ್ರಸಕ್ತ ವರ್ಷವೇ ಜಾರಿಯಾಗುವ ಲಕ್ಷಣಗಳು ಗೋಚರಿಸುತ್ತಿರುವುದು, ವಾರ್ಷಿಕ ಬರದ ಶಾಪಕ್ಕೆ ತುತ್ತಾಗುವ ಗ್ರಾಮಸ್ಥರಿಗೆ ಖುಷಿ ತಂದಿದೆ.  ಸುಮಾರು ರು. 109 ಕೋಟಿ ವೆಚ್ಚದಲ್ಲಿ 21 ಗ್ರಾ.ಪಂ. ವ್ಯಾಪ್ತಿಯ ಜನರಿಗೆ ಕುಡಿಯುವ ನೀರು ಒದಗಿಸುವ ಬೃಹತ್ ಯೋಜನೆ ಟೆಂಡರ್ ಹಂತದಲ್ಲಿದೆ.
ಒಟ್ಟಿನಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಬಾವಿ, ಕೋಟ್ಯಂತರ ವೆಚ್ಚದ ಬಹುಗ್ರಾಮ ಕುಡಿಯುವ ನೀರು ಯೋಜನೆ ಮೊದಲಾದ ಆಶಾಭಾವನೆಗಳನ್ನು ಇರಿಸಿಕೊಂಡಿರುವ ಬಂಟ್ವಾಳ ತಾಲೂಕಿನ ಜನತೆ ನೇತ್ರಾವತಿ ಬರಿದಾದರೆ ಆಗುವ ಅಪಾಯಗಳನ್ನು ನದಿ ತಿರುಗುವ ಮುನ್ನವೇ ಅನುಭವಿಸುತ್ತಿದ್ದಾರೆ. ಒಂದು ವೇಳೆ ನೇತ್ರಾವತಿ ತಿರುಗಿದರೆ.. ಜಲದೊಂದಿಗೆ ಜನರೂ ನಾಶವಾದೀತು...

ಮೌನೇಶ ವಿಶ್ವಕರ್ಮ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement