ಬಾವಿಗೆ ಬಿದ್ದು ಕಾರ್ಮಿಕ ಸಾವು
ಪಡುಬಿದ್ರಿ: ಆಟೋ ಸರ್ವಿಸ್ ಸೆಂಟರ್ನ ಬಾವಿಗೆ ಪಂಪ್ ಅಳವಡಿಕೆ ಸಂದರ್ಭ ಸೆಂಟರ್ನ ಕಾರ್ಮಿಕನೊಬ್ಬ ಕಾಲು ಜಾರಿ ಬಿದ್ದು ಮೃತಪಟ್ಟ ಇಲ್ಲಿನ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.
ಹಳೇ ಗುರುದೇವ್ ಟಾಕೀಸ್ ಮುಂಭಾಗ ಇತ್ತೀಚೆಗೆ ಕಾರ್ಯಾರಂಭಗೊಂಡ ಆಟೋ ಸರ್ವಿಸ್ ಸೆಂಟರ್ನ ಉದ್ಯೋಗಿ ಮಹಾರಾಷ್ಟ್ರ - ನಾಗ್ಪುರದ ಮುರ್ಧಾಳ ವಾಸಿ ಪಂಕಜ್ ಶಿವಶಂಕರ್ ಉಪವಂಶಿ (32) ಮೃತರು.
ಸರ್ವಿಸ್ ಸೆಂಟರ್ನ ಬೋರ್ವೆಲ್ ಹಾಳಾದ ಕಾರಣ ಪಕ್ಕದ ಮನೆಯ ಬಾವಿಗೆ ಪಂಪ್ ಅಳವಡಿಸಲು ಸರ್ವಿಸ್ ಸೆಂಟರ್ ಮಾಲೀಕರು ಸೂಚಿಸಿದ್ದರಿಂದ ಪಂಕಜ್ ಗೆಳೆಯ ಸಂತೋಷ್ ಜೊತೆ ತೆರಳಿದ್ದರು. ಬಾವಿಕಟ್ಟೆ ಮೇಲೆ ನಿಂತು ಪಂಪ್ ಅನ್ನು ಬಾವಿಗೆ ಇಳಿಸುತ್ತಿದ್ದಾಗ ಆಯ ತಪ್ಪಿದ ಪಂಕಜ್ ಬಾವಿಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಈ ಸಂಬಂಧ ಪಂಕಜ್ ಸಂಬಂಧಿ ಮೋರೇಶ್ವರ ಗರಡೆ ಎಂಬವರು ಪಡುಬಿದ್ರಿ ಠಾಣೆಗೆ ದೂರು ನೀಡಿದ್ದು, ಪೊಲೀಸರು ಕೇಸು ದಾಖಲಿಸಿದ್ದಾರೆ.
ಮುರ್ಧಾಳದ ವೈದ್ಯರೊಬ್ಬರ ಮಗನಾಗಿರುವ ಪಂಕಜ್ ಪ್ಯಾರಾ ಮೆಡಿಕಲ್ ಕೋರ್ಸ್ ಮುಗಿಸಿ, ಕೆಲಸವಿಲ್ಲದ ಕಾರಣ ಪಡುಬಿದ್ರಿಗೆ ಆಗಮಿಸಿ ಸರ್ವಿಸ್ ಸೆಂಟರ್ನಲ್ಲಿ ಕೆಲಸಕ್ಕೆ ಸೇರಿದ್ದನು. ಮೃತ ಶರೀರವನ್ನು ಮುರ್ಧಾಳಕ್ಕೆ ಆ್ಯಂಬುಲೆನ್ಸ್ ಮೂಲಕ ಕೊಂಡೊಯ್ಯಲಾಗಿದೆ.