ಮಧ್ಯವಯಸ್ಕನ ಶವ ಪತ್ತೆ: ಅಸಹಜ ಸಾವು?
ಮಂಗಳೂರು: ನಗರದ ಕುಂಟಿಕಾನ ಬಳಿ ಮಧ್ಯವಯಸ್ಕನ ಶವ ಭಾನುವಾರ ಪತ್ತೆಯಾಗಿದೆ. ಶವದ ದೇಹದ ಮೇಲೆ ಗಾಯದ ಗುರುತು ಕಂಡುಬಂದಿದ್ದು, ಇದು ಕೊಲೆಯೋ ಆತ್ಮಹತ್ಯೆಯೋ ಎಂದು ನಿಖರವಾಗಿಲ್ಲ. ಆದರೆ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ.
ಮೃತ ಶರೀರ ಬಾರೆಬೈಲು ನಿವಾಸಿ ಸಿರಿಲ್ ಆಂಟನಿ ಪಿಂಟೋ(51)ಎಂಬವರದ್ದು ಎಂದು ಹೇಳಲಾಗಿದೆ. ಶನಿವಾರ ರಾತ್ರಿ ಡಿನ್ನರ್ಗೆ ತೆರಳಿದ್ದ ಇವರು ನಾಪತ್ತೆಯಾಗಿದ್ದರು. ಮರುದಿನ ಬೆಳಗ್ಗೆ ಮನೆ ಸಮೀಪದ ಕೆರೆಯಲ್ಲಿ ಶವ ಪತ್ತೆಯಾಗಿದೆ. ಶವದ ಮೇಲೆ ಗಾಯದ ಗುರುತು ಕಂಡು ಬಂದಿದ್ದು ರಕ್ತ ಹರಿದಿತ್ತು. ಅಪರಿಚಿತರು ಕೊಲೆ ಮಾಡಿರಬಹುದೇ ಎಂಬ ಶಂಕೆ ವ್ಯಕ್ತವಾಗಿದ್ದು, ಆದರೆ ಉರ್ವ ಪೊಲೀಸರು ಈ ಬಗ್ಗೆ ಯಾವುದೇ ತೀರ್ಮಾನ, ಮಾಹಿತಿ ಲಭ್ಯವಾಗಿಲ್ಲ ಎಂದಿದ್ದಾರೆ. ಪೊಲೀಸ್ ಮೂಲದ ಪ್ರಕಾರ, ಮಾನಸಿಕವಾಗಿ ಅಸ್ವಸ್ಥರಾಗಿದ್ದ ಪಿಂಟೋ ಆತ್ಮಹತ್ಯೆ ಮಾಡಿರಬೇಕು ಎನ್ನಲಾಗಿದೆ. ಶವದ ಮರಣೋತ್ತರ ಪರೀಕ್ಷೆ ವರದಿ ಬಳಿಕವೇ ಸಾವಿನ ಪ್ರಕರಣ ನಿಖರವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.