ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಯುಪಿಸಿಎಲ್ ಯೋಜನಾ ಪ್ರದೇಶದಲ್ಲಿ ಸಿಮೆಂಟ್ ಘಟಕ ಆರಂಭ

Mainashree
Updated On : 10 Feb 2014, 9:53 am

ಪಡುಬಿದ್ರಿ: ಎಲ್ಲೂರು ಬಳಿ ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದಿಸುತ್ತಿರುವ ಯುಪಿಸಿಎಲ್ ಯೋಜನಾ ಪ್ರದೇಶದಲ್ಲಿ ಅದರ ಹಾರುಬೂದಿ ಬಳಸಿ ಸಿಮೆಂಟ್ ತಯಾರಿಸುವ ಎಸಿಸಿ ಸಿಮೆಂಟ್ ಲೆಂಡಿಂಗ್ ಘಟಕ ಭಾನುವಾರ ಆರಂಭಗೊಂಡಿದೆ.
ಎಸಿಸಿ ಕಂಪನಿಯ ದಕ್ಷಿಣ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಪಿ.ಎನ್. ಅಯ್ಯರ್ ಘಟಕಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಯುಪಿಸಿಎಲ್ 1200 ಮೆ.ವ್ಯಾ ವಿದ್ಯುತ್ ಉತ್ಪಾದಿಸುತ್ತಿದ್ದು ಅದಕ್ಕೆ ಬಳಸುವ ಕಲ್ಲಿದ್ದಲಿನ ಬೂದಿ ಬಳಸಿ ಸಿಮೆಂಟ್ ತಯಾರಿಸಲು ಎಸಿಸಿ ಈ ಹಿಂದೆಯೇ ಆಸಕ್ತಿ ವಹಿಸಿದ್ದು, ಯೋಜನಾ ಪ್ರದೇಶದ ಹೊರಭಾಗ (ಪಾದೆಬೆಟ್ಟು ಬಳಿ)ದಲ್ಲಿ ಸಿಮೆಂಟ್ ಘಟಕ ಸ್ಥಾಪನೆಗೆ ಮುಂದಡಿ ಇಟ್ಟಿತ್ತು. ಆದರೆ ಸ್ಥಳೀಯರ ತೀವ್ರ ವಿರೋಧ ಕಂಡು ಬಂದ ಹಿನ್ನೆಲೆಯಲ್ಲಿ ಯೋಜನೆ ಕೈಬಿಡಲಾಗಿತ್ತು. ಬಳಿಕ ಯುಪಿಸಿಎಲ್ ಆಸಕ್ತಿವಹಿಸಿ ಯೋಜನಾ ಘಟಕದ ಒಳ ಭಾಗದಲ್ಲಿ ಲಭ್ಯವಿರುವ ಸ್ಥಳಾವಕಾಶ ಒದಗಿಸಿ ಎಸಿಸಿ ಸಿಮೆಂಟ್ ಕಂಪನಿಗೆ ಘಟಕ ಆರಂಭಿಸಲು ಹಸಿರು ನಿಶಾನೆ ತೋರಿಸಿತ್ತು.
ಈ ಹಿನ್ನೆಲೆಯಲ್ಲಿ ಸುಮಾರು 50 ಕೋಟಿ ವೆಚ್ಚದ ಎಸಿಸಿ ಸಿಮೆಂಟ್ ತಯಾರಿಕಾ ಘಟಕ ಆರಂಭಗೊಂಡಿದೆ. ಎಸಿಸಿ ಗ್ಯಾಶ್ ಟೆಕ್ ಕಂಪೆನಿ ಈ ಘಟಕದ ಉಸ್ತುವಾರಿ ವಹಿಸಿಕೊಂಡಿದ್ದು, ಪ್ರತಿ ದಿನ 1500 ಟನ್ ಸಿಮೆಂಟ್ ತಯಾರಿಕೆಗೆ ಸಿದ್ಧತೆ ನಡೆಸಿದೆ. 50 ಕೆಜೆಯ ಬ್ಯಾಗ್ ಮೂಲಕ ಅವಿಭಜಿತ ದ.ಕ. ಜಿಲ್ಲೆಯಾದ್ಯಂತ 90ಕ್ಕೂ ಅಧಿಕ ವಿತರಕರಿಗೆ ಸಿಮೆಂಟ್ ವಿತರಣೆಗೆ ಕಂಪೆನಿ ಸಿದ್ಧತೆ ನಡೆಸಿದೆ.
ಇದೇ ಸಂದರ್ಭ ಯೋಜನೆಯ ಎರಡನೇ ಘಟಕ ಪಾದೆಬೆಟ್ಟುವಿನ ಎನ್‌ಟಿಪಿಸಿಗಾಗಿ ಕಾದಿರಿಸಿದ ಜಾಗದಲ್ಲಿ ಆರಂಭಗೊಳ್ಳಲಿದ್ದು, ಈ ಬಗ್ಗೆ ಯೋಜನೆ ಸಿದ್ಧಗೊಂಡಿದೆ ಎಂದು ಎಸಿಸಿ ಮೂಲಗಳು ತಿಳಿಸಿವೆ. ಪ್ರಸ್ತುತ ಯುಪಿಸಿಎಲ್ ಮುಖ್ಯ ದ್ವಾರದಿಂದಲೇ ಎಸಿಸಿ ಘಟಕಕ್ಕೆ ಒಳ- ಹೊರ ಹೋಗಬೇಕಿದ್ದು ಕಾರ್ಗೋ ಗೇಟ್‌ನಿಂದ ನೇರ ದಾರಿ ನಿರ್ಮಿಸಲೂ ಕಂಪನಿ ಸಿದ್ಧತೆ ನಡೆಸಿದೆ.
ಉದ್ಘಾಟನೆ ವೇಳೆ ಎಸಿಸಿ ಅಧಿಕಾರಿಗಳಾದ ರಾಜೀವ್ ಕುಮಾರ್, ಸಿ.ಆರ್. ಬೈಂದೂರು, ಸತೀಶ್ಚ್‌ಂದ್ರನ್, ರಾಜೀವ್ ಠಾಕೂರ್, ಕೆ.ಕೆ. ರಾಜೀವ್, ರಜತ್, ಎಸ್.ಬಿ. ಸಿಂಗ್, ಬಿಜು ಜಾಕಬ್, ಘಟಕದ ರೆಸಿಡೆಂಟ್ ಮ್ಯಾನೇಜರ್ ವೆಂಕಟೇಶ್ ಕುಲಕರ್ಣಿ, ಪ್ಲಾಂಟ್ ಉಸ್ತುವಾರಿ ನರೇಶ್ ಶರ್ಮಾ ಇದ್ದರು.
ಘಟಕದಲ್ಲಿ 145 ಕಾರ್ಮಿಕರಿದ್ದು 30 ಸ್ಥಳೀಯರಿಗೆ ಅವಕಾಶ ಕಲ್ಪಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement