ಸ್ನೇಹಿತರ ಜತೆ ಕಡಲಿಗೆ ಈಜಲು ಹೋದ ಯುವಕ ನೀರುಪಾಲು
ಮೂಲ್ಕಿ: ಮೂಲ್ಕಿ ಕೊಳಚಿಕಂಬಳದ ಬಪ್ಪತೋಟದ ಬಳಿ ನದಿ ಮತ್ತು ಸಮುದ್ರ ಸೇರುವ ಅಳಿವೆ ಪ್ರದೇಶಕ್ಕೆ ಸ್ನೇಹಿತರೊಂದಿಗೆ ಈಜಲು ಹೋದ ವಿದ್ಯಾರ್ಥಿ ಜಿಗ್ನೇಶ್ (18) ಎಂಬಾತ ನೀರುಪಾಲಾದ ಘಟನೆ ಭಾನುವಾರ ನಡೆದಿದೆ.
ಮೂಲ್ಕಿಯ ಸೇಂಟ್ ಆ್ಯನ್ಸ್ ನರ್ಸಿಂಗ್ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿಗಳಾದ, ಗುಜರಾತ್ ಮೂಲದ ಜಿಗ್ನೇಶ್, ವಿರಾಲ್, ಪ್ರಕಾಶ್, ಸುಮರ್ ಲಂಗ್, ಮಹೀಂದ್ರ ರಾಣಾ, ಜಿಗ್ನೇಶ್ ಸೇರಿದಂತೆ ಆರು ಮಂದಿ ಭಾನುವಾರ ಮಧ್ಯಾಹ್ನ ನೀರಲ್ಲಿ ಈಜಲು ತೆರಳಿದ್ದರು.
ಜಿಗ್ನೇಶ್ ಮತ್ತು ವಿರಾಲ್ (19) ಈಜಾಡಿಕೊಂಡು ಅಳಿವೆ ಮೂಲಕ ಸಮುದ್ರ ಬದಿಗೆ ತೆರಳಿದ್ದು, ಈ ಸಂದರ್ಭ ನೀರಿನ ಸೆಳೆತಕ್ಕೆ ಸಿಕ್ಕ ಇವರಲ್ಲಿ ವಿರಾಲ್‌ನನ್ನು ಉಳಿದವರು ರಕ್ಷಿಸಿದರು. ಆದರೆ, ಜಿಗ್ನೇಶ್ ನಾಪತ್ತೆಯಾಗಿದ್ದಾನೆ. ತೀವ್ರ ಅಸ್ವಸ್ಥಗೊಂಡ ವಿರಾಲ್‌ನನ್ನು ಮುಕ್ಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ. ಹಿಂದೆಯೂ ಈ ಪ್ರದೇಶದಲ್ಲಿ ಇಂತಹ ಘಟನೆಗಳು ನಡೆದಿತ್ತು. ಹೀಗಾಗಿ ಇಲ್ಲಿ ಈಜಾಡಬಾರದು ಎಂಬ ಎಚ್ಚರಿಕೆಯ ಫಲಕವನ್ನೂ ಹಾಕಲಾಗಿದೆ. ಆದರೂ, ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬುವ ಯುವಕರಿಗೆ ಸ್ಥಳೀಯರು ಎಚ್ಚರಿಕೆ ನೀಡಿದರೂ ಕ್ಯಾರೇ ಎನ್ನುತ್ತಿಲ್ಲ. ಮೂಲ್ಕಿ ಪೊಲೀಸರು, ಅಗ್ನಿ ಶಾಮಕ ದಳ, ಕರಾವಳಿ ಪೊಲೀಸ್ ಪಡೆ ಹಾಗೂ ನುರಿತ ಈಜುಗಾರರು ಸ್ಥಳದಲ್ಲಿ ಹುಡುಕಾಟ ನಡೆಸುತ್ತಿದ್ದು, ಈವರೆಗೆ ಯುವಕ ಪತ್ತೆಯಾಗಿಲ್ಲ. ಮೂಲ್ಕಿ ಪೊಲೀಸ್ ಠಾಣಾಧಿಕಾರಿ ರಾಮಚಂದ್ರ ನಾಯಕ್ ಸ್ಥಳದಲ್ಲಿದ್ದು, ಹುಡುಕಾಟ ಮುಂದುವರಿದಿದೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.