ಅನಧಿಕೃತ ದೀರ್ಘ ರಜೆ: ಮುಖ್ಯ ಶಿಕ್ಷಕನ ವಜಾ
ಸುಳ್ಯ: ಅನಧಿಕೃತವಾಗಿ ದೀರ್ಘಕಾಲದಿಂದ ಕರ್ತವ್ಯಕ್ಕೆ ಹಾಜರಾಗದಿರುವುದು, ಹಣ ದುರುಪಯೋಗ ಹಾಗೂ ಕರ್ತವ್ಯ ಲೋಪಗಳ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅರಂತೋಡು ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ ಜಿ.ಪಿ. ಎಂಬವರನ್ನು ಸೇವೆಯಿಂದ ಕಡ್ಡಾಯವಾಗಿ ನಿವೃತ್ತಗೊಳಿಸಿ ದ.ಕ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಆದೇಶಿಸಿದ್ದಾರೆ.
ಬಂಟ್ವಾಳ ತಾಲೂಕಿನವರಾದ ಚಂದ್ರಶೇಖರ ಜಿ.ಪಿ.ಯವರು ಮೂಡುಬಿದಿರೆಯಲ್ಲಿ ಮುಖ್ಯೋಪಾಧ್ಯಾಯ ರಾಗಿರುವಾಗಲೂ ಕರ್ತವ್ಯ ಲೋಪದ ಕಾರಣಕ್ಕಾಗಿ ಅಮಾನತುಗೊಂಡಿದ್ದರು. ಬಳಿಕ ಕಡೇಶಿವಾಲ್ಯ ಶಾಲೆಗೆ ಮರು ನೇಮಕಗೊಂಡ ಅವರು ಅಲ್ಲಿಯ ಹಣ ದುರುಪಯೋಗ, ಕೆಲಸಕ್ಕೆ ಅನಧಿಕೃತವಾಗಿ ಗೈರು ಹಾಜರಾಗುವುದು ಮೊದಲಾದ ಆರೋಪಕ್ಕೆ ಒಳಗಾಗಿ ಅಮಾನತುಗೊಂಡರು.
ನಂತರ ಅರಂತೋಡು ಸ.ಹಿ.ಪ್ರಾ. ಶಾಲಾ ಮುಖ್ಯೋಪಾಧ್ಯಾಯರಾಗಿ ಬಂದರು. ಕೆಲವು ತಿಂಗಳು ಮಾತ್ರ ಕೆಲಸಕ್ಕೆ ಬರುತ್ತಿದ್ದ ಅವರು, ಈಗ ಎರಡು ವರ್ಷಗಳಿಂದ ಕರ್ತವ್ಯಕ್ಕೆ ಅನಧಿಕೃತ ಗೈರು ಹಾಜರಾಗಿದ್ದರು.
ನೋಟಿಸ್‌ನ ಮೇಲೆ ನೋಟಿಸ್ ಜಾರಿಗೊಂಡರೂ ಕೆಲಸಕ್ಕೆ ಹಾಜರಾಗದಿದ್ದುದರಿಂದ ಇಲಾಖಾ ತನಿಖೆ ನಡೆದು ಕೆಲಸದಿಂದ ವಜಾಕ್ಕೆ ಶಿಫಾರಸುಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಫೆ. 1ರಂದು ಕಡ್ಡಾಯ ನಿವೃತ್ತಿಯ ಆದೇಶವನ್ನು ಡಿ.ಡಿ.ಪಿ.ಐ. ಮಂಜೂರು ಮಾಡಿದ್ದಾರೆ.
ಕಾರ್ಮಿಕ ಆತ್ಮಹತ್ಯೆ
ಕಾರ್ಕಳ: ಇಲ್ಲಿ ಕುಕ್ಕುಂದೂರು ಗ್ರಾಮದ ಗುಂಡ್ಯಡ್ಕ ಎಂಬಲ್ಲಿ ಕಲ್ಲುಕ್ವಾರಿ ಕಾರ್ಮಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ.
ಮೃತರು ರಜಾಕ್ (40), ಅವರು ವೃಷಭರಾಜ ಕಡಂಬ ಎಂಬವರ ಮಾಲೀಕತ್ವದ ಕಲ್ಲಿನ ಕ್ವಾರಿಯಲ್ಲಿ ಕೆಲಸಕ್ಕಿದ್ದು ಒಬ್ಬರೇ ವಾಸವಾಗಿದ್ದರು.
ಇದೇ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ತಾನು ವಾಸ ಮಾಡುತ್ತಿರುವ ಶೆಡ್ಡಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕಡಂಬ ಅವರ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.