ಆಕಸ್ಮಿಕ ಬೆಂಕಿ: 30 ಎಕ್ರೆ ಜಾಗದ ಮರಗಳು ಸಂಪೂರ್ಣ ಭಸ್ಮ
ಮೂಲ್ಕಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ 3ರ ಭಟ್ಟಕೋಡಿಯ ಕಂಬ್ಳದಲ್ಲಿ ಭಾನುವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ತಗಲಿ ಸುಮಾರು 30 ಎಕ್ರೆಯಷ್ಟು ಜಾಗದಲ್ಲಿದ್ದ ಮರ ಮಟ್ಟುಗಳು ಬೆಂಕಿಗೆ ಸಂಪೂರ್ಣ ಆಹುತಿಯಾಗಿದೆ.
ಬೆಂಕಿಯ ಜ್ವಾಲೆ ಹರಡುತ್ತಿರುವುದನ್ನು ಕಂಡ ಸ್ಥಳೀಯರು ಕೂಡಲೇ ನೀರು ಸಿಂಪಡಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದು, ಬಳಿಕ ಅಗ್ನಿ ಶಾಮಕದಳವು ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ.
ಈ ಪರಿಸರದಲ್ಲಿ ಪ್ರತಿವರ್ಷ ಅಗ್ನಿ ಆಕಸ್ಮಿಕ ಸಂಭವಿಸುತ್ತಿದ್ದು ಗುಡ್ಡೆ ಪ್ರದೇಶದಲ್ಲಿ ಒಣ ಕಟ್ಟಿಗೆಗಳು ರಾಶಿಯಿದೆ.
ಜೊತೆಗೆ ತರಗೆಲೆಗಳು ಹರಡಿರುವುದರಿಂದ ಬೆಂಕಿಯು ಕೂಡಲೇ ಎಲ್ಲ ಕಡೆ ಹರಡುವ ಸಾಧ್ಯತೆಯಿದೆ. ಹೀಗಾಗಿ ಸ್ಥಳೀಯ ಆಡಳಿತ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.