'ಪಣಿಯಮ್ಮ' ಕಾದಂಬರಿಯಲ್ಲಿ ಬಾಲ ವಿಧವೆಯ ನೈಜ ಚಿತ್ರಣ: ಎ.ಪಿ.ಮಾಲತಿ
ಕಾಂತಾವರ: ಪಣಿಯಮ್ಮ ಎನ್ನುವ ಬಾಲ ವಿಧವೆಯ ನೈಜ ಜೀವನದ ಕಥಾವಸ್ತುವನ್ನು ಹೊಂದಿರುವ ಎಂ.ಕೆ. ಇಂದಿರಾ ಅವರ ಪಣಿಯಮ್ಮ ಕಾದಂಬರಿಯು ಅವರಿಗೆ ಹೆಸರು, ಕೀರ್ತಿ, ಖ್ಯಾತಿ ತಂದುಕೊಟ್ಟ ಕೃತಿಯಾಗಿದೆ. 1976ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಪಡೆದುಕೊಂಡದ್ದಲ್ಲದೆ ನಂತರ ಪ್ರೇಮಾ ಕಾರಂತರ ನಿರ್ದೇಶನದಲ್ಲಿ ಚಲನಚಿತ್ರವಾಗಿಯೂ ಅಪಾರ ಜನಮನ್ನಣೆ ಗಳಿಸಿತ್ತು ಎಂದು ಪುತ್ತೂರಿನ ಮಹಿಳಾ ಲೇಖಕಿ ಎ.ಪಿ. ಮಾಲತಿ ತಿಳಿಸಿದರು. ಕಾಂತಾವರ ಕನ್ನಡ ಸಂಘದ ಕನ್ನಡದ ಮರೆಯಬಾರದ ಕಾದಂಬರಿಗಳ ಮರು ಓದು ಕಾರ್ಯಕ್ರಮದಲ್ಲಿ ಎಂ.ಕೆ. ಇಂದಿರಾ ಅವರ ಪಣಿಯಮ್ಮ ಕಾದಂಬರಿ ಬಗ್ಗೆ ಅವರು ಮಾತನಾಡಿದರು. ಬಾಲವಿಧವೆಯರ ನೋವು, ಕಷ್ಟ, ಹಿಂಸೆ, ದೌರ್ಜನ್ಯ, ಪುರುಷ ಸಮಾಜದ ಕ್ರೌರ್ಯವನ್ನು ತನ್ನ ತಾಯಿ ಬನಶಂಕರಮ್ಮನ ಬಾಯಿಯಿಂದಲೇ ಕೇಳಿದ ಎಂ.ಕೆ. ಇಂದಿರಾ ಅವರಿಗೆ ವಾಸ್ತವ ಎಷ್ಟು ಕಠೋರ ಎಂಬ ಅರಿವಾಗಿ ಈ ಕಾದಂಬರಿ ರಚನೆಗೆ ಪ್ರೇರಣೆಯಾಯಿತು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎ.ಪಿ. ಮಾಲತಿಯವರನ್ನು ಗೌರವಿಸಲಾಯಿತು.
ಡಾ.ನಾ. ಮೊಗಸಾಲೆ ಮತ್ತು ಸಿ.ಕೆ.ಪಡಿವಾಳ್ ಇದ್ದರು. ಬಾಬು ಶೆಟ್ಟಿ ನಾರಾವಿ ಕಾರ್ಯಕ್ರಮ ನಿರ್ವಹಿಸಿದರು.
ರಾಮಕೃಷ್ಣ ಹೆಗಡೆ ಸ್ವಾಗತಿಸಿ, ಸದಾನಂದ ನಾರಾವಿ ವಂದಿಸಿದರು.