ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಫಾಸ್ಟ್‌ಫುಡ್ ಅಂಗಡಿ ತೆರವು: ಮಕ್ಕಳ ಸಂಸತ್ತಿನಲ್ಲಿ ಆಗ್ರಹ

Rashmi Kasaragodu
Updated On : 11 Feb 2014, 2:33 am

ಬಂಟ್ವಾಳ: ಬಿ.ಸಿ.ರೋಡಿನ ಫಾಸ್ಟ್ ಫುಡ್ ಅಂಗಡಿಗಳು ಇದೀಗ ಮತ್ತೆ ಸುದ್ದಿಯಾಗಿವೆ. ಇಲ್ಲಿನ ಮೇಲ್ಸೇತುವೆ ಅಡಿಭಾಗದಲ್ಲಿ ಸೇರಿದಂತೆ ಪೇಟೆಯ ವಿವಿಧೆಡೆಯ ಫಾಸ್ಟ್‌ಫುಡ್ ಅಂಗಡಿಗಳಿಂದಾಗಿ ಜನತೆಗೆ ಆಹಾರ ಭದ್ರತೆಯೇ ಇಲ್ಲ ಎಂಬ ಪ್ರಶ್ನೆಯನ್ನು ವಿದ್ಯಾರ್ಥಿನಿಯೋರ್ವಳು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮುಂದಿಟ್ಟಿದ್ದಾಳೆ.
ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ, ಬಂಟ್ವಾಳ ಶಿಕ್ಷಣ ಸಂಪನ್ಮೂಲ ಕೇಂದ್ರ ಹಾಗೂ ಪಡಿ ವೆಲೊರೆಡ್ ಆಶ್ರಯದಲ್ಲಿ ಸೋಮವಾರ ಬಿ.ಸಿ.ರೋಡಿನ ಕೊಡಂಗೆ ಶಾಲೆಯಲ್ಲಿ ನಡೆದ  ತಾಲೂಕು ಮಟ್ಟದ ಮಕ್ಕಳ ಸಂಸತ್ತಿನಲ್ಲಿ  ಭಾಗವಹಿಸಿದ್ದ ವಿದ್ಯಾರ್ಥಿಗಳು ಸಚಿವ ರೈ ಎದುರು ಪ್ರಶ್ನೆಗಳ ಸರಮಾಲೆಯಗಳನ್ನೇ ಮುಂದಿಟ್ಟರು.
ವಿದ್ಯಾರ್ಥಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೈ, ಫಾಸ್ಟ್‌ಫುಡ್ ಸೆಂಟರ್‌ಗಳ ಬಗ್ಗೆ ಕ್ರಮಕೈಗೊಳ್ಳಲು ಬಂಟ್ವಾಳ ಪುರಸಭೆಗೆ ಸೂಚಿಸುವುದಾಗಿ ತಿಳಿಸಿದರು.
ಕೊಡಂಗೆ ಶಾಲೆಯ ಹಿಂದಿ ಶಿಕ್ಷಕರನ್ನು ಬೇರೆ ಶಾಲೆಗೆ ವರ್ಗಾಯಿಸಿದ್ದಾರೆ, ನಮ್ಮ ಶಾಲೆಯಲ್ಲಿ ಕ್ರೀಡಾ ಪಟುಗಳಿದ್ದಾರೆ, ಆಟದ ಮೈದಾನವಿಲ್ಲ, ಶಾಲಾವಧಿಯಲ್ಲಿ ವಾಹನಗಳ ಹಾನ್ ಹಾಗೂ ಮೈಕ್ ಪ್ರಚಾರ ಕಿರಿಕಿರಿ ಉಂಟುಮಾಡುತ್ತದೆ, ತ್ಯಾಜ್ಯ ಸಮಸ್ಯೆಯಿಂದ ರೋಗ ಭೀತಿ ಇದೆ, ಸರ್ಕಾರಿ ಶಾಲೆಗಳಿಗೆ ಕೆಲಸದಾಳುಗಳು ಬೇಕು, ಪಠ್ಯಪುಸ್ತಕದಲ್ಲಿ ದೋಷವಿದೆ, ಶಾಲೆಯ ಅಂಗಳದಲ್ಲಿ ಧೂಳಿನ ಸಮಸ್ಯೆ, ತರಗತಿ ಕೊಠಡಿಯ ನೆಲ ಹಾಳಾಗಿದೆ, ಟೈಲ್ಸ್ ಹಾಕಿಸಿ ಕೊಡಿ, ನಲಿಕಲಿ ಮಕ್ಕಳಿಗೆ ಬೆಂಚ್ ಕೊಡಿಸಿ, ಕಂಪ್ಯೂಟರ್ ಶಿಕ್ಷಕರನ್ನು ಕೊಡಿ, ರೈಲು ಮಾರ್ಗ ದಾಟಲು ಮೇಲ್ಸೇತುವೆ ನಿರ್ಮಿಸಿ ಕೊಡಿ, ಖಾಸಗಿ ಶಾಲಾ ಮಕ್ಕಳಿಗೂ ಉಚಿತ ಸಮವಸ್ತ್ರ ಕೊಡಿಸಿ, ಸರ್ಕಾರಿ ಶಾಲಾ ಮಕ್ಕಳಿಗೆ ವಾಹನದ ವ್ಯವಸ್ಥೆ ಕಲ್ಪಿಸಿ... ಮೊದಲಾದ ಪ್ರಶ್ನೆಗಳನ್ನು ಕೇಳಿದ ಮಕ್ಕಳು ಸಚಿವರಿಂದ ಪರಿಹಾರ ಮೌಖಿಕವಾಗಿ ಪಡೆದುಕೊಂಡರು.
ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ, ಸಮನ್ವಯಾಧಿಕಾರಿ ಕಮಲಾಕ್ಷ ಕಲ್ಲಡ್ಕ, ಪುರಸಭಾ ಸದಸ್ಯರಾದ ಮಹಮ್ಮದ್ ನಂದರಬೆಟ್ಟು, ಮಹಮ್ಮದ್ ಶರೀಫ್, ಕೊಡಂಗೆ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಇಸ್ಮಾಯಿಲ್, ಬಂಟ್ವಾಳ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಎ.ಕೆ.ಹ್ಯಾರಿಸ್ , ಸಂಯೋಜಕ ದಿನಕರ್, ರಾಮರಾಯ ನಾಯಕ್ ಇದ್ದರು.



ಸಿದ್ಧ ಪ್ರಶ್ನೆ-ಸಿದ್ಧ ಉತ್ತರ


 ಅಪರಾಹ್ನ 12.30 ಕ್ಕೆ ಆರಂಭವಾಗಬೇಕಿದ್ದ ಮಕ್ಕಳ ಸಂಸತ್ತು, ಸಚಿವರ ಕಾರ್ಯಕ್ರಮದ ಒತ್ತಡದ ಕಾರಣದಿಂದ 3.05ರ ಸುಮಾರಿಗೆ ಆರಂಭಗೊಂಡಿತು.
 ಸಚಿವರಲ್ಲಿ ಮಕ್ಕಳು ಕೇಳಿದ ಪ್ರಶ್ನೆಗಳೆಲ್ಲವೂ ಸಿದ್ದಪ್ರಶ್ನೆಯಂತಿದ್ದು, ಸಚಿವ ರೈ ಮಕ್ಕಳ ಜೊತೆಯಲ್ಲಿ  ಪ್ರೀತಿಯಿಂದ ಮಾತನಾಡಿ, ಮಾಡುತ್ತೇನೆ, ನೋಡುತ್ತೇನೆ, ಸೂಚಿಸುತ್ತೇನೆ, ಸರ್ಕಾರದ ನಿರ್ದೇಶನದಂತೆ ಮಾಡುವ ಎಂಬ ಸಿದ್ದ ಉತ್ತರಗಳನ್ನಷ್ಟೇ ನೀಡಿದರು.
 ತಾಲೂಕು ಮಟ್ಟದ ಮಕ್ಕಳ ಸಂಸತ್ತು ಎಂದು ಹೇಳಲಾಗಿತ್ತಾದರೂ, ಬಿ.ಸಿ.ರೋಡು ಆಸುಪಾಸಿನ ನಾಲ್ಕು ಶಾಲೆಗಳ ಬೆರಳೆಣಿಕೆಯ ಮಕ್ಕಳು ಮಾತ್ರ ಕಲಾಪದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement