ಮಹಿಳಾ ರೋಗಿಗೆ ವೈದ್ಯನಿಂದ ಲೈಂಗಿಕ ಕಿರುಕುಳ
ಮಂಗಳೂರು: ಜ್ವರಕ್ಕೆ ಚಿಕಿತ್ಸೆಗೆ ಬಂದ ಮಹಿಳೆಯ ಗುಪ್ತಾಂಗಕ್ಕೆ ಕೈ ಹಾಕಲು ಯತ್ನಿಸಿದ ದೇರಳಕಟ್ಟೆ ಯೇನೆಪೋಯ ಆಸ್ಪತ್ರೆ ವೈದ್ಯನ ಮೇಲೆ ಮಹಿಳೆ ಸಂಬಂಧಿಕರು ಥಳಿಸಿದ್ದಾರೆ.
ದೇರಳಕಟ್ಟೆ ಯೇನೆಪೋಯ ಆಸ್ಪತ್ರೆಯ ಡಾ.ನಿಯಾಝ್ ಥಳಿತಕ್ಕೊಳಗಾದ ವೈದ್ಯ. ಜ.31ರಂದು ಮಹಿಳೆಯೊಬ್ಬರು ಆಸ್ಪತ್ರೆಗೆ ಜ್ವರದ ಚಿಕಿತ್ಸೆಗೆ ದಾಖಲಾಗಿದ್ದರು. ಸಿಟಿ ಸ್ಕ್ಯಾನ್ ನಡೆಸಿದ ಬಳಿಕ ವೈದ್ಯರಿಗೆ ತೋರಿಸಬೇಕಿತ್ತು. ಫೆ.8ರಂದು ಮಧ್ಯಾಹ್ನ ಡಾ. ನಿಯಾಝ್ಗೆ ತೋರಿಸಲು ಹೋಗಿದ್ದರು.
ಮಧ್ಯಾಹ್ನ 3.30ರ ವೇಳೆ ವೈದ್ಯ ವರದಿ ಪರಿಶೀಲಿಸುತ್ತಾ ಮಹಿಳೆ ಗುಪ್ತಾಂಗಕ್ಕೆ ಕೈ ಹಾಕಲು ಯತ್ನಿಸಿದ್ದು, ಮಹಿಳೆ ಪ್ರತಿರೋಧ ತೋರಿದ್ದರು. ಈ ವಿಚಾರ ಮನೆಯವರಿಗೆ ಸೋಮವಾರ ಗೊತ್ತಾಗಿದ್ದು, ನೇರವಾಗಿ ಆಸ್ಪತ್ರೆಗೆ ಬಂದು, ವೈದ್ಯನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಾತಿಗೆ ಮಾತು ಬೆಳೆದು ವೈದ್ಯನಿಗೆ ಎರಡೇಟು ಬಿಗಿದಿದ್ದಾರೆ. ವೈದ್ಯ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೈದ್ಯ ಬಂಧನ ತಪ್ಪಿಸಿಕೊಳ್ಳಲು ಆಸ್ಪತ್ರೆಯಲ್ಲಿ ರೋಗಿಯಾಗಿ ದಾಖಲಾಗಿದ್ದಾನೆ. ಡಿಸ್ಚಾರ್ಜ್ ಆದ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸುವ ನಿರೀಕ್ಷೆ ಇದೆ.