ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸಮುದ್ರ ಪಾಲಾದ ವಿದ್ಯಾರ್ಥಿ ಮೃತದೇಹ ಸಸಿಹಿತ್ಲಿನಲ್ಲಿ ಪತ್ತೆ

Rashmi Kasaragodu
Updated On : 11 Feb 2014, 2:35 am

ಮೂಲ್ಕಿ: ಮೂಲ್ಕಿಯ ಕೊಳಚಿಕಂಬಳದಲ್ಲಿ ಅಳಿವೆ ಬಾಗಿಲಿನಲ್ಲಿ ನೀರು ಪಾಲಾದ ಮೂಲ್ಕಿಯ ಸೇಂಟ್ ಆನ್ಸ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿ ಜಿಗ್ನೇಶ್‌ನ ಮೃತದೇಹ ಸೋಮವಾರ ಸಸಿಹಿತ್ಲು ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ.
ಭಾನುವಾರ ಮಧ್ಯಾಹ್ನ 3 ಗಂಟೆಯ ಬಳಿಕ ಮೂಲ್ಕಿಯ ಸೇಂಟ್ ಆನ್ಸ್ ನರ್ಸಿಂಗ್ ಕಾಲೇಜಿನ ಪ್ರಥಮ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಾದ ಗುಜರಾತ್ ಮೂಲದ ಜಿಗ್ನೇಶ್ (18) ತನ್ನ ಸ್ನೇಹಿತರಾದ ವಿರಾಲ್, ನಿತೇಶ್, ಪ್ರಕಾಶ್, ಜಿಗ್ನೇಶ್, ಮಹೀಂದ್ರ ರಾಣಾ ಹಾಗೂ ಸಮರ್‌ಲಿಂಗ್ ಮೂಲ್ಕಿಯ ಕಾರ್ನಾಡ್ ಪೆಟ್ರೋಲ್ ಪಂಪ್ ಬಳಿಯಿರುವ ಹಾಸ್ಟೆಲ್‌ನಿಂದ ಜೊತೆಗೂಡಿ ಕಾರ್ನಾಡು ಪಡುಬೈಲು ಮೂಲಕ ಕೊಳಚಿಕಂಬಳದ ಅಂಚಿನಲ್ಲಿರುವ ಚಿತ್ರಾಪು-ಕೊಳಚಿಕಂಬಳದ ಅಳಿವೆ ಬಾಗಿಲಿನಲ್ಲಿ ನದಿಯಲ್ಲಿ ಈಜಾಡಲು ಹೋಗಿದ್ದರು. ಈ ಪೈಕಿ ವಿರಾಲ್ ಮತ್ತು ಜಿಗ್ನೇಶ್ ಈಜುತ್ತಾ ಸಮುದ್ರದತ್ತ ತೆರಳಿದ್ದು ಸಮುದ್ರದ ಅಲೆಗೆ ಇಬ್ಬರು ಸಿಕ್ಕಿದ್ದು ಕೂಡಲೇ ಸ್ಥಳೀಯರು ಹಾಗೂ ಮೀನುಗಾರರು ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದು ವಿರಾಲ್‌ನನ್ನು ರಕ್ಷಿಸಲಾಯಿತು. ನೀರಿನ ಸೆಳೆತಕ್ಕೆ ಸಿಕ್ಕಿ ಜಿಗ್ನೇಶ್ ನೀರು ಪಾಲಾಗಿದ್ದು ಭಾನುವಾರ ಸಂಜೆಯಿಂದ ಅಗ್ನಿಶಾಮಕ ದಳ ಹಾಗೂ ನುರಿತ ಈಜುಗಾರರು ಹುಡುಕಾಟ ನಡೆಸಿದ್ದು ಯಾವುದೇ ಕುರುಹು ಸಿಕ್ಕಿರಲಿಲ್ಲ. ಸೋಮವಾರ ಮಧ್ಯಾಹ್ನ ಮೂಲ್ಕಿ ಸಮೀಪದ ಸಸಿಹಿತ್ಲುವಿನ ಕಡಲ ಕಿನಾರೆಯಲ್ಲಿ ಜಿಗ್ನೇಶ್ ಮೃತದೇಹ ಪತ್ತೆಯಾಗಿದ್ದು ಅಲ್ಲಿನ ಸ್ಥಳೀಯರು ಶವವನ್ನು ಕಂಡು ಸುರತ್ಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಸಲೀಸರು ಸ್ಥಳಕ್ಕೆ ಆಗಮಿಸಿ ಶವದ ಗುರುತು ಪತ್ತೆ ಮಾಡಿದ್ದು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಗ್ನೇಶ್‌ನ ಹೆತ್ತವರು ಗುಜರಾತ್‌ನಿಂದ ಹೊರಟಿದ್ದು ಮಂಗಳವಾರ ಬರುವ ನಿರೀಕ್ಷೆಯಿದ್ದು ಶವವನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಮರುಕಳಿಸುತ್ತಿದೆ ದುರಂತ: ಕಳೆದ ವರ್ಷದ ಆರಂಭದಲ್ಲಿ ಕೊಳಚಿಕಂಬಳದ ಅಳಿವೆ ಬಾಗಿಲಿನಲ್ಲಿ ಇಂತದೇ ಘಟನೆ ನಡೆದಿದ್ದು ಈಜಾಡಲು ಬಂದವರಲ್ಲಿ ಒಬ್ಬ ನೀರು ಪಾಲಾಗಿದ್ದು ಮರುದಿನ ಸಂಜೆ ಸಸಿಹಿತ್ಲಿನ ಕಡಲ ಕಿನಾರೆಯಲ್ಲಿ ಶವ ಪತ್ತೆಯಾಗಿತ್ತು.
ಕೊಳಚಿಕಂಬಳದ ಅಳಿವೆ ಬಾಗಿಲಿನಲ್ಲಿ ದೂರದ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು ಈ ಪರಿಸರದಲ್ಲಿ ಸೂಕ್ತ ಬಂದೋಬಸ್ ವ್ಯವಸ್ಥೆ ಮಾಡಬೇಕಿದೆ. ಈಗಾಗಲೇ ಎಚ್ಚರಿಕೆ ಫಲಕ ಹಾಕಿದ್ದು ಇದನ್ನು ಕಡೆಗಣಿಸಿ ಈಜಾಡಲು ಹೋಗುತ್ತಿದ್ದು ಸ್ಥಳೀಯರು ಈ ಬಗ್ಗೆ ಸೂಕ್ತ ವ್ಯವಸ್ಥೆಗೆ ವಿನಂತಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement