ಬೆಂಕಿ ಆಕಸ್ಮಿಕ: ಮಹಿಳೆ ಸಾವು
ಅಜೆಕಾರು: ನೀರು ಕಾಯಿಸಲು ಒಲೆಗೆ ಬೆಂಕಿ ಹಚ್ಚುವ ವೇಳೆ ಚಿಮಿಣಿ ದೀಪದ ಬೆಂಕಿ ಆಕಸ್ಮಿಕವಾಗಿ ನೈಟಿಗೆ ತಗುಲಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಸೋಮವಾರ ಪಡುಕುಡೂರು ಗ್ರಾಮದಲ್ಲಿ ನಡೆದಿದೆ. ಹೇಮಾವತಿ (45) ಮೃತರು. ಅವರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ಭಾನುವಾರ ರಾತ್ರಿ ಮನೆಯ ಬಚ್ಚಲಿಗೆ ನೀರು ಕಾಯಿಸಲು ಒಲೆಗೆ ಬೆಂಕಿ ಹಚ್ಚುವ ವೇಳೆ ಚಿಮಿಣಿ ದೀಪದ ಬೆಂಕಿ ಆಕಸ್ಮಿಕವಾಗಿ ನೈಟಿಗೆ ತಗುಲಿತು. ತೀವ್ರವಾಗಿ ಸುಟ್ಟ ಗಾಯಗಳಾಗಿದ್ದ ಅವರನ್ನು ಕೂಡಲೆ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ಮಗ ಚೇತನ್ ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇರಳ ವಿದ್ಯಾರ್ಥಿ ನಾಪತ್ತೆ
ಮಂಗಳೂರು: ಕಾಸರಗೋಡು ಎಲ್ಬಿಎಸ್ ಕಾಲೇಜು ಹಾಸ್ಟೇಲ್ನಿಂದ ಮಲಬಾರ್ ಎಕ್ಸ್ಪ್ರೆಸ್ ರೈಲಿನಲ್ಲಿ ಕಾಸರಗೋಡಿನಿಂದ ಮಂಗಳೂರಿಗೆ ಬಂದ ವಿದ್ಯಾರ್ಥಿ ಹಬೀಬ್ ರಹಮಾನ್ ಟಿ.ಪಿ. ಎಂಬಾತ ಕಾಣೆಯಾದ ಘಟನೆ ವರದಿಯಾಗಿದೆ. ಫೆ.3ರಿಂದ ಈತ ನಾಪತ್ತೆಯಾಗಿದ್ದು, ಊರಿಗೆ ಮರಳಿಲ್ಲ. 20 ವರ್ಷದ ಈತ ಮಲಯಾಳಂ, ಇಂಗ್ಲೀಷ್ ಮಾತನಾಡುತ್ತಾನೆ. ಈತ ಕಾಸರಗೋಡು ಎಲ್ಬಿಎಸ್ ಎಂಜಿನಿಯರಿಂಗ್ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದು, ಚೆರುವತ್ತೂರು ಪಡನ್ನದ ಇ.ಕೆ.ಹೌಸ್ ನಿವಾಸಿ ಟಿ.ಪಿ.ಅಬ್ದುಲ್ ಹಮೀದ್ರ ಪುತ್ರ.. ಈತನ ಪತ್ತೆಯಾದಲ್ಲಿ ಮಂಗಳೂರು ನಿಯಂತ್ರಣ ಕೊಠಡಿ(0824 2220800) ಅಥವಾ ಸಿಸಿಆರ್ಬಿ ಘಟಕ(0824 2220809) ಸಂಪರ್ಕಿಸುವಂತೆ ಸಿಸಿಆರ್ಬಿ ಪೊಲೀಸರ ಪ್ರಕಟಣೆ ತಿಳಿಸಿದೆ.
ವರದಕ್ಷಿಣೆ ಕಿರುಕುಳ ಆರೋಪ ಖುಲಾಸೆ
ಮಂಗಳೂರು: ಹೊಸದಾಗಿ ಉದ್ಘಾಟನೆಯಾದ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಥಮ ತೀರ್ಪನ್ನು ಜೆಎಂಎಫ್ಸಿ ಎರಡನೇ ನ್ಯಾಯಾಲಯ ವರದಕ್ಷಿಣೆ ಕಿರುಕುಳ ಆರೋಪ ಎದುರಿಸುತ್ತಿದ್ದ ಆರೋಪಿಯನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ. ಮೂಲತಃ ಸುಬ್ರಹ್ಮಣ್ಯ ನಿವಾಸಿ ಮಂಗಳೂರಿನಲ್ಲಿ ವಾಸವಿದ್ದ ಕಿರಣ್ ಎಂಬಾತನ ಪತ್ನಿ, ಕುಂದಾಪುರ ಕುಂಭಾಶಿ ಮೂಲದ ಸಂಧ್ಯಾ ಎಂಬಾಕೆ ಪತಿ ವಿರುದ್ಧ ದೂರು ನೀಡಿದ್ದರು. ಪತಿ ಹಾಗೂ ಅತ್ತೆ, ಮಾವಂದಿರು ಸೇರಿ ವರದಕ್ಷಿಣೆಗೆ ಕಿರುಕುಳ ನೀಡಿದ್ದಾರೆ ಮತ್ತು ಪತಿ ಹಲ್ಲೆ ಮಾಡಿ ಮನೆಯಿಂದ ಹೊರಹಾಕಿದ್ದಾರೆ ಎಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿ ಕಿರಣ್ನ್ನು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರದಕ್ಷಿಣೆ ಇಲ್ಲದೆ ಮದುವೆಯಾಗಿದ್ದು, ಆದರೆ ಆಕೆ ತನ್ನ ಜಾತಿ ಮುಚ್ಚಿಟ್ಟು ಬ್ರಾಹ್ಮಣ ಜಾತಿ ಎಂದು ಸುಳ್ಳು ಹೇಳಿದ್ದಳು. ಮದುವೆಯಾದ ಬಳಿಕ ಪತಿಗೆ ಆಕೆಯೇ ಮಾನಸಿಕವಾಗಿ ಹಿಂಸೆ ನೀಡಿದ್ದು, ಕಿರಣ್ನ್ನು ಮದುವೆ ಪೂರ್ವದಲ್ಲಿ ಕುಂದಾಪುದ ಪ್ರಕಾಶ್ ಎಂಬಾತನೊಂದಿಗೆ ವಿವಾಹವಾಗಿತ್ತು. ಆ ವಿವಾಹ ಊರ್ಜಿತದಲ್ಲಿರುವಾಗಲೇ ಕಿರಣ್ಗೆ ಮೋಸ ಮಾಡಿ ಮದುವೆಯಾಗಿದ್ದಳು. ಕುಂಭಾಶಿಯಲ್ಲಿ ಪಡಿತರ ಚೀಟಿಯಲ್ಲಿ ಆಕೆ ಪ್ರಕಾಶ್ನ ಪತ್ನಿ ಎಂದು ನಮೂದಾಗಿದ್ದು, ಈವರೆಗೆ ಅದೇ ದಾಖಲೆ ಇತ್ತು. ಈ ದಾಖಲೆಯನ್ನು ಮಾಹಿತಿ ಹಕ್ಕಿನಡಿ ಪಡೆದು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಈ ಎಲ್ಲ ದಾಖಲೆ ಪರಿಶೀಲಿಸಿದ ನ್ಯಾಯಾಲಯ ಆರೋಪಿ ಕಿರಣ್ನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿತು. ಆರೋಪಿ ಪರ ಪಿ.ಪಿ.ಹೆಗ್ಡೆ ಮತ್ತು ರಾಜೇಶ್ ಅಮ್ಟಾಡಿ ವಾದಿಸಿದ್ದರು.
ಹೊಡೆದಾಟ: ದೂರು, ಪ್ರತಿದೂರು
ಉಪ್ಪಿನಂಗಡಿ: ಕ್ಷುಲ್ಲಕ ಕಾರಣಗಳಿಗಾಗಿ ಪರಸ್ಪರ ಹೊಡೆದಾಟ ನಡೆಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದ ಘಟನೆ ಕರಾಯ ಗ್ರಾಮದ ಕುಪ್ಪೆಟ್ಟಿ ಎಂಬಲ್ಲಿ ನಡೆದಿದೆ. ಕುಪ್ಪೆಟ್ಟಿ ಎಂಬಲ್ಲಿ ಕೃಷ್ಣಪ್ಪ ಮತ್ತು ಬಾಬು ಗೌಡ ಎಂಬವರಿಗೆ ರೋಹಿತ್ ಶೆಟ್ಟಿ ಹಲ್ಲೆ ನಡೆಸಿದ್ದಾಗಿ ದೂರಲಾಗಿದೆ.ಇತ್ತ ರೋಹಿತ ಶೆಟ್ಟಿ ಮತ್ತು ಚಿದಾನಂದ ನಾಯ್ಕ್ ಎಂಬಿಬ್ಬರಿಗೆ ಬಾಬು ಗೌಡ ಮತ್ತು ಹೊನ್ನಪ್ಪ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಲಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.