ನಕ್ಸಲರ ಜತೆ ಮಾತುಕತೆ ನಡೆಯುತ್ತಿದೆ, ವಿಫಲವಾದರೆ ಎಎನ್‌ಎಫ್ ಸಮಸ್ಯೆ ಪರಿಹರಿಸಲಿದೆ : ಕೆ.ಜೆ. ಜಾರ್ಜ್
ಮಂಗಳೂರು: ನಕ್ಸಲರು ಸಂಧಾನಕ್ಕೆ ಹಸಿರು ನಿಶಾನೆ ತೋರಿದ ಹಿನ್ನೆಲೆಯಲ್ಲಿಯೇ ನಕ್ಸಲರ ಪರವಾಗಿ ಸ್ವಯಂ ಸೇವಾಸಂಸ್ಥೆಗಳು ಸರ್ಕಾರದ ಜತೆ ಮಾತುಕತೆ ನಡೆಸುತ್ತಿವೆ. ಮಾತುಕತೆ ಫಲಪ್ರದವಾಗದೇ ಇದ್ದರೆ ನಕ್ಸಲ್ ನಿಗ್ರಹ ದಳದವರು ಸಮಸ್ಯೆ ಮಟ್ಟ ಹಾಕುತ್ತಾರೆ ಎಂದು ಗೃಹಸಚಿವ ಕೆ.ಜೆ.ಜಾರ್ಜ್ ಹೇಳಿದರು.
ನಗರ ಸಹಾಯಕ ಪೊಲೀಸ್ ಕಮಿಷನರ್ ಕಚೇರಿ ಕಟ್ಟಡ ಉದ್ಘಾಟನೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
ಅರಣ್ಯ ಪ್ರದೇಶದಲ್ಲಿ ಈಗ ಏಕಾ ಏಕಿ ಒಕ್ಕಲೆಬ್ಬಿಸಲು ಸಾಧ್ಯವಿಲ್ಲ. ಕಾಡಿನ ಮಧ್ಯೆ ಇರುವವರನ್ನು ಕಾಡಿನ ಅಂಚಿನಲ್ಲಿ ಪುನರ್ವಸತಿ ಮಾಡಲು ಅವಕಾಶ ಇದೆ ಎಂದರು. ವಿದೇಶಿ ನಿಧಿ ಬಳಸಿ ಅರಣ್ಯವಾಸಿಗಳಿಗೆ ಪುನವರ್ಸತಿ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಟಿವರು, ಈ ಬಗ್ಗೆ ನನಗೇನು ಮಾಹಿತಿ ಇಲ್ಲ, ಅಂಥ ಪ್ರಕರಣ ಇದ್ದರೆ ವರದಿ ತರಿಸಿಕೊಳ್ಳುತ್ತೇನೆ ಎಂದರು.
ಎಲ್ಲೆಡೆ ರೈಲುಗಳಲ್ಲಿ ರಾಜ್ಯ ಪೊಲೀಸರು ಶೇ.50 ಕರ್ತವ್ಯ ನಿರ್ವಹಿಸುತ್ತಾರೆ ಆದರೆ ಕೊಂಕಣ ರೈಲ್ವೆ ವಿಭಾಗದವರು ರಾಜ್ಯ ಪೊಲೀಸ್‌ಗೆ ಪ್ರವೇಶ ನೀಡಿಲ್ಲ. ಈ ಬಗ್ಗೆ ಇನ್ನೊಮ್ಮೆ ಪ್ರಸ್ತಾವನೆ ಕಳುಹಿಸಲಾಗುವುದು. ಈ ಮೂಲಕ ರೈಲುಗಳಲ್ಲಿ ಅಪರಾಧ ನಿಯಂತ್ರಣಕ್ಕೆ ಪ್ರಯತ್ನಿಸಲಾಗುವುದು ಎಂದರು.
ರಾಜ್ಯಾದ್ಯಂತ 8,500 ಪೊಲೀಸ್ ಸಿಬ್ಬಂದಿ ನೇಮಿಸಲಾಗುವುದು. 7 ಸಾವಿರ ಗೃಹರಕ್ಷಕದಳ ಸಿಬ್ಬಂದಿ ನೇಮಕ ನಡೆಯಲಿದೆ. ಇದರಲ್ಲಿ ಶೇ.20 ಮಹಿಳೆಯರಿಗೆ ಮೀಸಲು. ಬುಡಕಟ್ಟು ಜನಾಂಗದವರಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ಸಡಿಲಿಸಲಾಗಿದೆ.
ಕರಾವಳಿಯಲ್ಲಿ ಹಫ್ತಾ ವಸೂಲಿ ಕುರಿತ ಬೆದರಿಕೆ ಕರೆಗಳ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದರು. ರಾಜ್ಯ ಗಡಿ ಭಾಗದಲ್ಲಿ ಹೆಚ್ಚುತ್ತಿರುವ ನಕ್ಸಲ್ ಸಹಿತ ಅಪರಾಧಿ ಕೃತ್ಯಗಳನ್ನು ಮಟ್ಟ ಹಾಕಲು ಕೇಂದ್ರ ಸರ್ಕಾರ ಎರಡು ರಾಜ್ಯಗಳ ನಡುವೆ ಸಮನ್ವಯ ಸಾಧಿಸಲು ಐಜಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದೆ. ಗಡಿ ಅಪರಾಧ ಕೃತ್ಯ ತಡೆಯಲು ನಕ್ಸಲ್ ನಿಗ್ರಹ ದಳ, ನಕ್ಸಲ್ ನಿಗ್ರಹ ತುಕಡಿ ಬಳಸಿಕೊಳ್ಳಲಾಗುವುದು.
ಕರಾವಳಿ ಭಯೋತ್ಪಾದನೆ ನಿಗ್ರಹಕ್ಕೆ 9 ಕರಾವಳಿ ಕಾವಲು ಪಡೆ ಠಾಣೆ ನಿರ್ಮಿಸಲಾಗಿದ್ದು, ಶಾಶ್ವತ ಕಟ್ಟಡ ನಿರ್ಮಿಸಲಾಗುವುದು. ಹೆಜಮಾಡಿಯಲ್ಲಿ ಕಟ್ಟಡ ನಿರ್ಮಿಸಲಾಗಿದೆ, ಕಾರವಾರದಲ್ಲಿ ಮತ್ತು ಉಡುಪಿಯಲ್ಲಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು. ಉಗ್ರ ನಿಗ್ರಹ ಕಾರ್ಯಾಚರಣೆಗೆ ಎನ್‌ಎಸ್‌ಜಿಯಿಂದ ತರಬೇತಿ ಪಡೆದ 120 ಮಂದಿ ಸಿಎಲ್‌ಟಿ ಕಮಾಂಡೊಗಳು ಬೆಂಗಳೂರಲ್ಲಿ ಇದ್ದಾರೆ.
ನಕ್ಸಲ್ ನಿಗ್ರಹ ದಳ ರದ್ದು!
ನಕ್ಸಲ್ ನಿಗ್ರಹ ದಳ ಇತ್ಯಾದಿ ಹೇಳಿಕೊಂಡು ನಾವೇ ಸುಮ್ಮನೆ ನಕ್ಸಲರಿಗೆ ಪ್ರಚಾರ ನೀಡುತ್ತಿದ್ದೇವೆ. ನಕ್ಸಲ್ ಸ್ಕ್ವಾಡ್ ತೆಗೆಯಬೇಕು ಎಂಬ ಪ್ಲಾನ್ ಮಾಡುತ್ತಿದ್ದೇವೆ ಎಂದು ಗೃಹ ಸಚಿವ ಜಾರ್ಜ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಡಿಜಿಪಿ ಎಂ.ಎನ್. ರೆಡ್ಡಿ, ಐಜಿಪಿ ಪ್ರತಾಪ್ ರೆಡ್ಡಿ, ಸೀಮಂತ್ ಕುಮಾರ್ ಸಿಂಗ್, ಕಮಿಷನರ್ ಆರ್. ಹಿತೇಂದ್ರ ಇದ್ದರು.