ಪೊಲೀಸ್ ಮಹಿಳಾ ಮಿಸಲು ಶೇ.20ಕ್ಕೆ ಏರಿಕೆ; ಜಾರ್ಜ್
ಪಡುಬಿದ್ರಿ: ರಾಜ್ಯ ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಮಹಿಳಾ ಮೀಸಲಾತಿಯನ್ನು ಶೇ. 10ರಿಂದ ಶೇ. 20ಕ್ಕೆ ಏರಿಸಲಾಗಿದೆ, ಇನ್ನು ಮುಂದೆ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿ ಸಂಖ್ಯೆ ಹೆಚ್ಚಲಿದೆ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಪ್ರಕಟಿಸಿದ್ದಾರೆ.
ಬುಧವಾರ ಇಲ್ಲಿನ ಹೆಜಮಾಡಿಯಲ್ಲಿ ಕರಾವಳಿ ಕಾವಲು ಪೊಲೀಸ್ ಪಡೆಯ ನೂತನ ಠಾಣೆ ಉದ್ಘಾಟನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆಯಲ್ಲಿರುವ ಸಿಬ್ಬಂದಿ ಕೊರತೆ ನೀಗಿಸುವುದಕ್ಕೆ ಪ್ರತೀ ವರ್ಷ ನೇಮಕ ನಡೆಸುವುದಕ್ಕೆ ಯೋಜಿಸಲಾಗಿದೆ. ರಾಜ್ಯದಲ್ಲಿ ಈ ಸಾಲಿನಲ್ಲಿ 8500 ಪೊಲೀಸ್ ಸಿಬ್ಬಂದಿ ಹಾಗೂ 500 ಮಂದಿ ಪೊಲೀಸ್ ಉಪನಿರೀಕ್ಷರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
7000 ಗೃಹ ರಕ್ಷಕ ಸಿಬ್ಬಂದಿ ನೇಮಕ: ಪೊಲೀಸ್ ಇಲಾಖೆಗೆ ತುರ್ತು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಸಂದರ್ಭ ನೆರವಾಗಲು 7000 ಗೃಹರಕ್ಷಕ ಸಿಬ್ಬಂದಿ ನೇಮಕ ಮಾಡಲು ಮುಖ್ಯಮಂತ್ರಿ ಅನುಮತಿ ನೀಡಿದ್ದಾರೆ. ಗೃಹರಕ್ಷಕ ದಳದ ಸಿಬ್ಬಂದಿಗೆ ಗ್ರಾಮೀಣ ಪ್ರದೇಶದಲ್ಲಿ ದಿನವೊಂದಕ್ಕೆ ರು. 250 ಹಾಗೂ ನಗರಪ್ರದೇಶದಲ್ಲಿ ರು. 300ಕ್ಕೆ ಗೌರವಧನ ಹೆಚ್ಚಿಸಲಾಗಿದೆ ಎಂದರು.
ರೇಲ್ವೆ ಬಜೆಟ್‌ಗೆ ಕವಡೆ ಕಾಸು ಕಿಮ್ಮತ್ತಿಲ್ಲ; ಬಿಎಸ್‌ವೈ
ಬೈಂದೂರು: ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಬುಧವಾರ ಮಂಡಿಸಿದ ರೇಲ್ವೆ ಬಜೆಟ್‌ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿಮರ್ಶಿಸಿದ್ದಾರೆ. ಬುಧವಾರ ಇಲ್ಲಿನ ವಂಡ್ಸೆಯಲ್ಲಿ ನಡೆದ 'ಮನೆಮನೆಗೆ ಬಿಜೆಪಿ ನಡಿಗೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ರಾಜ್ಯದವರೇ ಆದ ಮಲ್ಲಿಕಾರ್ಜುನ ಖರ್ಗೆ ರೇಲ್ವೆ ಮಂತ್ರಿ ಹುದ್ದೆ ವಹಿಸಿಕೊಂಡ ಮೇಲೆ ಕರ್ನಾಟಕದ ಅಭಿವೃದ್ಧಿಗೆ ಕೊಟ್ಟ ಕೊಡುಗೆ ಶೂನ್ಯ ಎಂದು ಅವರು ಅಭಿಪ್ರಾಯಪಟ್ಟರು.