ಕೊಲೆ ಆರೋಪಿ ಬಂಧನ
ಸುಬ್ರಹ್ಮಣ್ಯ: ಮುರುಳ್ಯ ಸಮೀಪದ ಅಲೆಕ್ಕಾಡಿ ಕೊಡ್ಯಕಂಡ ಎಂಬಲ್ಲಿ ಡಿ. 30ರಂದು ಕಮಲ ಎಂಬಾಕೆಯನ್ನು ಕೊಂದು ಪರಾರಿಯಾಗಿದ್ದ ಆರೋಪಿ, ಆಕೆಯ ಪತಿ ರವಿ (ರಾಜು) ಗುರುವಾರ ಮಧ್ಯಾಹ್ನ ವೇಳೆಗೆ ಸುಬ್ರಹ್ಮಣ್ಯದಿಂದ ಇಂಜಾಡಿಯ ಬಾರ್ ಆ್ಯಂಡ್ ರೆಸ್ಟೋರೆಂಟ್‌ನತ್ತ ಹೋಗುತ್ತಿದ್ದ ವೇಳೆ ಸುಬ್ರಹ್ಮಣ್ಯ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸಮೀಪದ ಗುತ್ತಿಗಾರಿನ ಕಡೋಡಿ ನಿವಾಸಿಯೊಬ್ಬರು ಗುರುವಾರ ಮಧ್ಯಾಹ್ನದ ವೇಳೆ ಬೈಕ್‌ನಲ್ಲಿ ಗುತ್ತಿಗಾರಿನಿಂದ ಸುಬ್ರಹ್ಮಣ್ಯ ಕಡೆ ಬರುತ್ತಿದ್ದಾಗ ರವಿಯನ್ನು ಗುರುತಿಸಿದ್ದಾನೆ. ಆತ ಸಂಶಯಗೊಂಡು ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದು, ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ರವಿಯನ್ನು ಬಂಧಿಸಿದ್ದಾರೆ. ಕಮಲ ಮತ್ತು ರವಿಯನ್ನು ಜೊತೆಯಾಗಿ ಈ ಹಿಂದೆ ನೋಡಿದ್ದ ಬೈಕ್ ಸವಾರರಿಗೆ ರವಿಯನ್ನು ಗುರುತಿಸುವುದು ಸುಲಭವಾಯಿತು. ಇದು ಪೊಲೀಸರ ತನಿಖೆಗೂ ನೆರವಾಯಿತು.
ಪ್ರಕರಣ ವಿವರ: ಕಳೆದ ಡಿಸೆಂಬರ್‌ನಲ್ಲಿ ರವಿ ಮತ್ತು ಕಮಲ ತಾವು ದಂಪತಿ ಎಂದು ಹೇಳಿಕೊಂಡು, ಮನೆ ಕೆಲಸಕ್ಕೆಂದು ಬಂದು ಚಂಚಲಾಕ್ಷಿ ಎಂಬವರಿಗೆ ಸೇರಿದ ತೋಟದ ಮನೆಯಲ್ಲಿ ಆಶ್ರಯ ಪಡೆದಿದ್ದರು. ಅದೇ ದಿನ ರಾತ್ರಿ ಮಲಗಿದ್ದ ಕಮಲಾಳನ್ನು ಕೊಂದು ರವಿ ಪರಾರಿಯಾಗಿದ್ದ. ಈಕೆಯನ್ನು ರವಿಯೇ ಕೊಂದಿರಬಹುದು ಎಂಬ ಸುಳಿವು ಪೊಲೀಸರಿಗೆ ದೊರಕಿತ್ತು. ಆದರೆ, ಆತನ ಭಾವಚಿತ್ರ ಇಲ್ಲದೆ ಆತನನ್ನು ಹುಡುಕುವುದು ಪೊಲೀಸರಿಗೆ ಕಷ್ಟವಾಗಿತ್ತು. ಆರೋಪಿಯ ಪತ್ತೆಗಾಗಿ ಪೊಲೀಸರು ಎಲ್ಲಾ ಕಡೆ ಬಲೆ ಬೀಸಿದ್ದರು. ಕೊಲೆ ನಡೆಸಿದ ತರುವಾಯ ರವಿ ಗುತ್ತಿಗಾರಿಗೆ ಬಂದು ಕಮಲಾಳ ಮೊದಲ ಗಂಡನ ಮಗನಿಗೆ ನಿನ್ನ ತಾಯಿಗೆ ಹುಷಾರಿಲ್ಲ ಎಂದು ಹೇಳಿ ಪರಾರಿಯಾಗಿ, ತಲೆ ಮರೆಸಿಕೊಂಡಿದ್ದ. ಕಮಲಾಳ ಮೊದಲ ಗಂಡ ತೀರಿಕೊಂಡ ಬಳಿಕ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ರವಿ ಪರಿಚಯವಾಗಿ ಪ್ರೇಮಾಂಕುರವಾಗಿ ಜೊತೆಯಲ್ಲಿ ಅಲೆಮಾರಿಯಾಗಿ ವಾಸಿಸುತ್ತಿದ್ದರು. ರವಿಯನ್ನು ಸುಬ್ರಹ್ಮಣ್ಯ ಪೊಲೀಸರು ಸುಳ್ಯ ವೃತ್ತ ನಿರೀಕ್ಷಕರ ಕೈಗೆ ಒಪ್ಪಿಸಿದ್ದು, ತನಿಖೆ ನಡೆಸುತ್ತಿದ್ದಾರೆ.