ಗೋವುಗಳು ನಮ್ಮ ಕಾಯಲಿ ಎನ್ನುವುದಕ್ಕಿಂತ ನಾವು ಅವುಗಳ ಕಾಯೋಣ: ರಾಘವೇಶ್ವರ ಶ್ರೀ
ಬೆಳ್ತಂಗಡಿ; ಎಲ್ಲ ಮತ ಧರ್ಮದವರ ಬದುಕಿನಲ್ಲಿ ಗೋವು ವ್ಯಾಪಿಸಿದೆ. ಹೀಗಾಗಿ ಗೋ ಋಣಭಾರ ನಮ್ಮೆಲ್ಲರ ಮೇಲಿದೆ. ಗೋವುಗಳ ಪಾಲನೆಯಿಂದ ಮನುಕುಲ ಜೀವಕುಲ ಸುರಕ್ಷಿತವಾಗಿರುತ್ತದೆ. ಗೋವುಗಳು ನಮ್ಮನ್ನು ಕಾಯಲಿ ಎಂಬ ಅಪೇಕ್ಷೆ ನಮ್ಮೆಲರದ್ದಾಗಿದ್ದರೂ, ಅದಕ್ಕಿಂತ ಮೊದಲು ನಾವು ಅವುಗಳನ್ನು ಕಾಯೋಣ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಅವರು ಗುರುವಾರ ವೇಣೂರು ಸಮೀಪದ ಗುಂಡೂರಿಯಲ್ಲಿನ ಕಾವೇರಮ್ಮ ಅಮೃತಧಾರಾ ಗೋಶಾಲೆಯ ಆವರಣದಲ್ಲಿ ಆರಂಭಗೊಂಡ ಜನಜನನೀ ಎಂಬ ಗೋವಿನ ಉತ್ಸವ ಗೋ ಸಮ್ಮೇಳನದಲ್ಲಿ ಆಶೀರ್ವಚನ ನೀಡಿದರು.
ಇದಕ್ಕೂ ಮೊದಲು ಶ್ರೀಗಳು ಗೋಶಾಲೆಯ ಸಮೀಪದಲ್ಲೇ ಶ್ರೀ ಗೋಪಾಲಕೃಷ್ಣ ದೇವರ ಬಿಂಬ ಸ್ಥಾಪನೆ, ಕಲಶಾಭಿಷೇಕ ಪೂಜೆಯನ್ನು ನೆರವೇರಿಸಿದರು. ಬಳಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನರ ಅಪೇಕ್ಷೆ ಪೋರೈಸುವವಳು ಕಾಮಧೇನು. ಗೋವಿನ ವಿಚಾರದಲ್ಲಿ ಜಾತಿಮತದ ಭೇದವಿಲ್ಲ. ಗೋವಿನ ಋಣಭಾರ ಹೊತ್ತಿರುವ ನಮಗೆ ಗೋವಿನ ವಿಚಾರದಲ್ಲಿ ನಮಗೊಂದು ಕರ್ತವ್ಯವಿದೆ ಎಂಬ ಸತ್ಯ ಗೊತ್ತಿರಲಿ ಎಂದ ಅವರು, ಇಲ್ಲಿ ಗೋಪಾಲಕೃಷ್ಣನ ಮೂರ್ತಿ ನೆಲೆನಿಂತಿದೆ. ಹೀಗಾಗಿ ಗೋಶಾಲೆ ಇನ್ನು ಮುಂದೆ ಉನ್ನತಿಯಾಗುವುದರಲ್ಲಿ ಸಂಶಯವೇ ಇಲ್ಲ. ತನ್ನ ಆದಾಯದ ಬಹುಪಾಲನ್ನು ಗೋಶಾಲೆಗೆ ಮೀಸಲಿಟ್ಟಿರುವ ಕಾಂತಾಜೆ ಈಶ್ವರ ಭಟ್ಟರ ಸಾಹಸ ಸಾರ್ಥಕವಾಗಲಿದೆ ಎಂದು ಹರಸಿದರು.
ಧರ್ಮಸ್ಥಳ ಹರ್ಷೇಂದ್ರ ಕುಮಾರ್ ಮಾತನಾಡಿ, ಕ್ಷೇತ್ರದಲ್ಲಿ ನಾವು ಸುಮಾರು 250 ಜಾನುವಾರುಗಳನ್ನು ಪೋಷಿಸಿಕೊಂಡು ಬರುತ್ತಿದ್ದೇವೆ. ಗೋವುಗಳನ್ನು ಸಾಕುವುದು ಕಷ್ಟದ ಕೆಲಸವಾಗಿದ್ದರೂ ಅದರಲ್ಲಿ ವಿಶೇಷ ಸಂತೃಪ್ತಿ ಇದೆ ಎಂದರು.
ಗೋಸಮ್ಮೇಳನದ ಗೌರವಾಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್, ಸಮ್ಮೇಳನಕ್ಕೆ 1 ಲಕ್ಷ ದೇಣಿಗೆ ನೀಡುವುದಾಗಿ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುಂಡೂರಿ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ಕುಲಾಲ್, ಹವ್ಯಕ ಮಹಾಮಂಡಲದ ಅಧ್ಯಕ್ಷ ವೈ.ವಿ. ಕೃಷ್ಣಮೂರ್ತಿ, ಗೋ ಸಮ್ಮೇಳನ ಸಮಿತಿ ಅಧ್ಯಕ್ಷ ಕಾಂತಾಜೆ ಈಶ್ವರ ಭಟ್ಟ, ದ.ಕ. ಜಿಲ್ಲಾ ವಿಹಿಂಪ ಅಧ್ಯಕ್ಷ ಬೆಳಾಲು ತಿಮ್ಮಪ್ಪ ಗೌಡ ಇದ್ದರು. ಉಪ್ಪಿನಂಗಡಿ ಹವ್ಯಕ ಮಂಡಲದ ಅಧ್ಯಕ್ಷ ಬಾಲ್ಯ ಶಂಕರ ಭಟ್ಟ ಸ್ವಾಗತಿಸಿದರು. ಸಮಿತಿ ಕಾರ್ಯದರ್ಶಿ ಸುಬ್ರಹ್ಮಣ್ಯ ಕುಮಾರ ಅಗರ್ತ ನಿರೂಪಿಸಿ, ವಂದಿಸಿದರು.