ಮಗನಿಂದಲೇ ತಾಯಿ ಆಸ್ತಿ ಕಬಳಿಕೆ: ಮಾನವ ಹಕ್ಕು ರಕ್ಷಣಾ ವೇದಿಕೆಗೆ ದೂರು
ಉಡುಪಿ: ನಗರದ ಕಟ್ಟೆ ಆಚಾರ್ಯ ಮಾರ್ಗದಲ್ಲಿ ವೃದ್ಧೆಯೊಬ್ಬರ ಆಸ್ತಿಯನ್ನು ಅವರ ಮಗನೇ ಅಕ್ರಮವಾಗಿ ತನ್ನ ಹೆಸರಿಗೆ ಮಾಡಿಕೊಂಡಿರುವ ಬಗ್ಗೆ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ವೇದಿಕೆಗೆ ದೂರು ಬಂದಿದ್ದು, ಅದನ್ನು ಕುಂದಾಪುರದ ನ್ಯಾಯ ಮಂಡಳಿಗೆ ಸಲ್ಲಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷ ಡಾ. ರವೀಂದ್ರನಾಥ ಶಾನುಭಾಗ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಂತ್ರಸ್ತೆ ಸಾವಿತ್ರಮ್ಮ (86). 14 ವರ್ಷಗಳ ಹಿಂದೆ ಅವರ ಪತಿ ಗುರುರಾಜ ಭಟ್ ನಿಧನರಾಗಿದ್ದಾರೆ. ಅವರಿಗೆ ಸುಮಾರು 50 ಸೆಂಟ್ಸ್ ಭೂಮಿ ಇತ್ತು. ಅದನ್ನು ಸಾವಿತ್ರಮ್ಮ ತಮ್ಮ 6 ಗಂಡು ಮತ್ತು 2 ಹೆಣ್ಣು ಮಕ್ಕಳಿಗೆ ಸಮಪಾಲು ಮಾಡಿ ಹಂಚಿದ್ದು, ತಾವೇ ಕಟ್ಟಿದ್ದ ಹಳೆಯ ಮನೆಯಲ್ಲಿ ತಮ್ಮ ಕೊನೆಯ ಮಗ ಕೃಷ್ಣ ಭಟ್ರೊಂದಿಗೆ ವಾಸಿಸುತ್ತಿದ್ದರು. 2 ವರ್ಷಗಳ ಹಿಂದೆ ಕೃಷ್ಣ ಭಟ್ಟ ಅವರು ಉದ್ಯೋಗ ನಿಮಿತ್ತ ಮುಂಬೈಗೆ ಹೋಗಿದ್ದು, 5ನೇ ಮಗ ಕೇಶವ ಭಟ್ ತಾಯಿಯ ಮನೆಗೆ ಬಂದು ಸೇರಿಕೊಂಡಿದ್ದರು.
ಕ್ರಮೇಣ ಕೇಶವ ಭಟ್, ಮನೆ ಮೇಲೆ ಪಾರುಪತ್ಯ ಸ್ಥಾಪಿಸಿ, ತಾಯಿ ಸಾವಿತ್ರಮ್ಮಗೆ ಸರಿಯಾಗಿ ಊಟ ಕೊಡಲಿಲ್ಲ, ಊಟಕ್ಕೆ ಅವರು ಕೃಷ್ಣ ಮಠವನ್ನು ಆಶ್ರಯಿಸಬೇಕಾಯಿತು. ರಾತ್ರಿ ಉಪವಾಸ ಮಾಡಬೇಕಾಯಿತು. ಇತ್ತೀಚೆಗೆ ಅವರನ್ನು ಕೃಷ್ಣ ಮಠಕ್ಕೂ ಹೋಗಲು ಬಿಡದೆ ಮನೆಯಲ್ಲಿ ಕೂಡಿ ಹಾಕಿದ್ದಾರೆ. ಈಗ ಮನೆಯನ್ನೂ ತಾಯಿಯ ಒಪ್ಪಿಗೆ ಇಲ್ಲದೆ ತನ್ನ ಹೆಸರಿಗೆ ಮಾಡಿಕೊಂಡಿದ್ದಾರೆ. ಕೊನೆಗೆ ಸಾವಿತ್ರಮ್ಮ ತನ್ನ ಅಕ್ಕ ಲಕ್ಷ್ಮಮ್ಮ ಸಹಾಯದಿಂದ ಪೊಲೀಸರಿಗೆ ಮತ್ತು ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನಕ್ಕೆ ದೂರು ನೀಡಿದ್ದಾರೆ. ಪ್ರತಿಷ್ಠಾನ ಮಧ್ಯೆ ಪ್ರವೇಶಿಸಿ ಕುಂದಾಪುರ ಸಹಾಯಕ ಆಯುಕ್ತರ ಕಚೇರಿಯಲ್ಲಿರುವ ನ್ಯಾಯಮಂಡಳಿಗೆ ದೂರು ನೀಡಲಾಗಿದೆ ಎಂದು ಶಾನುಭಾಗ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಂತ್ರಸ್ತೆ ಸಾವಿತ್ರಮ್ಮ ಇದ್ದರು.
ಹಿರಿಯರಿಗಾಗಿಯೇ ಕಾಯ್ದೆ ಇದೆ...
ಮಾತಾಪಿತರ ಹಾಗೂ ಹಿರಿಯರ ರಕ್ಷಣೆ ಹಾಗೂ ಪೋಷಣೆ ಮಕ್ಕಳ ಜವಾಬ್ದಾರಿ, ತಮ್ಮ ಸಂತಾನದಿಂದ ಪರಿತ್ಯಜಿಸಲ್ಪಟ್ಟ ಹಿರಿಯ ನಾಗರಿಕರು ತಾವು ಅಸಹಾಯಕರು ಎಂದು ಭಾವಿಸಬೇಕಾಗಿಲ್ಲ. ಇಂತಹ ಹಿರಿಯರ ರಕ್ಷಣೆಗಾಗಿ 'ಮಾತಾಪಿತರ ಹಾಗೂ ಹಿರಿಯ ನಾಗರಿಕರ ಪೋಷಣೆ ಮತ್ತು ಹಿತರಕ್ಷಣಾ ಕಾಯ್ದೆ'ಯನ್ನು ಕೇಂದ್ರ ಸರ್ಕಾರ 2007ರಲ್ಲಿಯೇ ಜಾರಿಗೊಳಿಸಿದ್ದು, ಇದಕ್ಕಾಗಿ ಪ್ರತಿಜಿಲ್ಲೆಯಲ್ಲಿ ನ್ಯಾಯಮಂಡಳಿ ಇದೆ. ಇಲ್ಲಿ ಆರೋಪಿ ಮಕ್ಕಳು ನ್ಯಾಯವಾದಿಯನ್ನು ನೇಮಿಸುವಂತಿಲ್ಲ. ದೂರುದಾರ ತಂದೆ ತಾಯಿ ತಾವೇ ಸ್ವತಃ ದೂರು ನೀಡಲು ಸಾಧ್ಯವಿಲ್ಲದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಸಂಘಟನೆಗಳ ಮೂಲಕ ಸಲ್ಲಿಸಬಹುದು. ಈ ನ್ಯಾಯಮಂಡಳಿ ದೂರನ್ನು 90 ದಿನಗಳಲ್ಲಿ ಇತ್ಯರ್ಥ ಮಾಡುತ್ತದೆ. ದೂರು ಸಾಬೀತಾದಲ್ಲಿ ತಪ್ಪಿತಸ್ಥ ಮಕ್ಕಳಿಗೆ 3 ತಿಂಗಳು ಜೈಲು ಮತ್ತು ರು. 5 ಸಾವಿರ ದಂಡ ವಿಧಿಸುವ ಅವಕಾಶ ಇದೆ. ಈ ಬಗ್ಗೆ ಜನಜಾಗೃತಿಯಾಗಬೇಕಾಗಿದೆ.
ಟಿ ಡಾ. ರವಿಂದ್ರನಾಥ ಶಾನುಭಾಗ್, ಅಧ್ಯಕ್ಷ, ಮಾನವ ಹಕ್ಕುಗಳ ರಕ್ಷಣಾ ವೇದಿಕೆ, ಉಡುಪಿ