ಮಹಿಳೆಯರ ಸುರಕ್ಷತೆಗೆ 'ಗ್ರ್ಯಾಜೆಟ್'ಉಪಕರಣ
ಮಂಗಳೂರು: ಅಮೃತಾನಂದಮಯಿ ಸಂಶೋಧನೆ ಸಂಸ್ಥೆ ವತಿಯಿಂದ ಮಹಿಳೆಯರ ಸುರಕ್ಷತೆಗಾಗಿ 'ಗ್ರ್ಯಾಜೆಟ್' ಎಂಬ ಉಪಕರಣ ಸಿದ್ಧಪಡಿಸಿದ್ದು, ಕರ್ನಾಟಕದ ಮಹಿಳೆಯರಿಗೆ ಪರಿಚಯಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಅಧ್ಯಕ್ಷ ವಾಮನ್ ಕಾಮತ್ ಹೇಳಿದ್ದಾರೆ. ಬೋಳೂರು ಅಮೃತ ವಿದ್ಯಾಲಯದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಈಗಾಗಲೇ ಕಳೆದ ಸೆ.17 ರಂದು ಕೇರಳದ ಅಮೃತಪುರಿಯಲ್ಲಿ ಮಹಿಳೆಯರಿಗೆ ವಿತರಿಸಲಾಗಿದೆ. ಇದು ಅಪಾಯದ ಅಲಾರಾಂ ಗಂಟೆ ಬಾರಿಸುತ್ತದೆ. ಇದರ ಇನ್ನೊಂದು ಉಪಕರಣ ಪೊಲೀಸರ ಬಳಿ ಇದ್ದು, ಮಹಿಳೆ ತನಗೆ ತೊಂದರೆ ಉಂಟಾದ ಸಂದರ್ಭದಲ್ಲಿ ಬಟನ್ ಅದುಮಿದರೆ ಅಲಾರಾಂ ಹೊಡೆಯುತ್ತದೆ. ಈ ಉಪಕರಣದಿಂದ ಆರೋಪಿಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಮತ್ತು ಮಹಿಳೆಯರನ್ನು ರಕ್ಷಿಸಬಹುದು ಎಂದರು.
ಮಾತಾ ಅಮೃತಾನಂದಮಯಿ ಮಠದಿಂದ ಈಗಾಗಲೇ ಉತ್ತರಾಖಂಡದಲ್ಲಿ ದುರಂತಕ್ಕೊಳಗಾದ 42 ಗ್ರಾಮದಲ್ಲಿ ರು. 50 ಕೋಟಿ ವೆಚ್ಚದಲ್ಲಿ 500 ಮನೆ ನಿರ್ಮಾಣಗೊಳಿಸಲಾಗುವುದು. ಅಲ್ಲದೆ ವೈದ್ಯಕೀಯ ಕ್ಲಿನಿಕ್, ಅನಾಥಾಲಯ, ಶಾಲೆ ಕೂಡ ನಿರ್ಮಿಸಲಾಗುವುದು ಎಂದರು.
ಮೂಲಸೌಕರ್ಯ ಕೊರತೆ ಎದುರಿಸುತ್ತಿರುವ ದೇಶದ 111 ಗ್ರಾಮಗಳನ್ನು ಆಧುನಿಕ ಗ್ರಾಮಗಳನ್ನಾಗಿ ರೂಪಿಸಲು ತೀರ್ಮಾನಿಸಲಾಗಿದೆ. ಕರ್ನಾಟಕದಲ್ಲಿ 5 ಗ್ರಾಮಗಳನ್ನು ಗುರುತಿಸಿದ್ದು, ಸದ್ಯಕ್ಕೆ ದ.ಕ. ಜಿಲ್ಲೆಯ ಕಾರ್ನಾಡ್ ಹಾಗೂ ಶಿವಮೊಗ್ಗದ ಬೈಸ್ ಗ್ರಾಮಗಳಲ್ಲಿ ಕಾರ್ಯ ಪ್ರಾರಂಭಿಸಲಾಗಿದೆ ಎಂದರು.
ಪಕ್ಷದ ಗೆಲವಿಗೆ ದುಡಿಮೆ: ಹರ್ಷ ಮೊಯ್ಲಿ
ಮೂಲ್ಕಿ; ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಅಭ್ಯರ್ಥಿಯಾಗಿ ತಾನು ಅಥವಾ ಜನಾರ್ದನ ಪೂಜಾರಿ ಪೈಕಿ ಯಾರಿಗೆ ಟಿಕೆಟ್ ಸಿಕ್ಕಿದರೂ ಪಕ್ಷದ ಅಭ್ಯರ್ಥಿಯ ಗೆಲವಿಗೆ ಪ್ರಾಮಾಣಿಕವಾಗಿ ದುಡಿಯುವುದಾಗಿ ಕಾಂಗ್ರೆಸ್ ಮುಖಂಡ ಹರ್ಷ ಮೊಯ್ಲಿ ಹೇಳಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯ ಆಂತರಿಕ ಚುನಾವಣೆ ಹಿನ್ನೆಲೆಯಲ್ಲಿ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಅವರು, ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ಬಳಿಕ ಮಾತನಾಡಿದರು. ಕಳೆದ ಹಲವಾರು ಚುನಾವಣೆಗಳಲ್ಲಿ ಹಿನ್ನಡೆ ಕಂಡಿರುವ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲವಿಗೆ ಪ್ರಯತ್ನಿಸಲಾಗುವುದು ಎಂದರು. ಎಐಸಿಸಿ ಸದಸ್ಯ ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಸಂತ ಬೆರ್ನಾಡ್, ಯೂತ್ ಕಾಂಗ್ರೆಸ್ ಅಧ್ಯಕ್ಷ ರೋಶನ್ ಕುಮಾರ್, ಮೂಲ್ಕಿ ನ.ಪಂ. ಮಾಜಿ ಅಧ್ಯಕ್ಷ ಬಿ.ಎಂ. ಆಸೀಫ್, ಶಶಿಕಾಂತ್ ಶೆಟ್ಟಿ ಮತ್ತಿತರರಿದ್ದರು.