ಸರ್ಕಾರಿ ನೌಕರರಿಗೆ ಶೀಘ್ರ ಆರೋಗ್ಯ ಕಾರ್ಡ್: ಖಾದರ್
ಮಂಗಳೂರು: ಸರ್ಕಾರಿ ನೌಕರರಿಗೆ ಉಪಯುಕ್ತ ಚಿಕಿತ್ಸೆ ಲಭಿಸುವಂತಾಗಲು ರಾಜ್ಯದಲ್ಲಿ 'ಆರೋಗ್ಯ ಸಂಜೀವಿನಿ' ಕಾರ್ಯಕ್ರಮ ಇಷ್ಟರಲ್ಲೇ ಅನುಷ್ಠಾನಗೊಳ್ಳಲಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಎಲ್ಲ ಇಲಾಖೆಗಳ 72 ಲಕ್ಷ ಸರ್ಕಾರಿ ನೌಕರರು, ಅವರ ಕುಟುಂಬಿಕರು ಈ ಕಾರ್ಯಕ್ರಮದ ಸೌಲಭ್ಯ ಪಡೆಯಬಹುದು. ಇದಕ್ಕಾಗಿ ನೌಕರರಿಗೆ ಆರೋಗ್ಯ ಕಾರ್ಡ್ ವಿತರಿಸಲಾಗುವುದು. ಆರೋಗ್ಯಶ್ರೀ ಯೋಜನೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸಾ ಸೌಲಭ್ಯ ಸಿಗಲಿದೆ. ಇದರಿಂದ ಚಿಕಿತ್ಸೆಗೆ ವೆಚ್ಚ ಮಾಡಿದ ಮೊತ್ತವನ್ನು ವಾಪಾಸ್ ನೀಡುವಲ್ಲಿನ ವಿಳಂಬ, ತೊಂದರೆಗಳನ್ನು ತಪ್ಪಿಸಬಹುದು ಎಂದರು.
ಮಲೇರಿಯಾ ನಿರ್ಮೂಲನೆಗೆ ಎನ್‌ಜಿಒ ಸಖ್ಯ: ಮಲೇರಿಯಾ ನಿರ್ಮೂಲನೆಗೆ ಸರ್ಕಾರೇತರ ಸಂಸ್ಥೆಗಳ ಜತೆ ಮಲೇರಿಯಾ ನಿರ್ಮೂಲನಾ ಘಟಕ ಕಾರ್ಯನಿರ್ವಹಿಸುವಂತೆ ನಿರ್ದೇಶನ ನೀಡಲಾಗುವುದು. ಈ ಬಗ್ಗೆ ಆರೋಗ್ಯ ಇಲಾಖೆ ಎನ್‌ಜಿಒ ಜತೆ ಸಭೆ ನಡೆಸುವುದು. ರಾಜ್ಯದಲ್ಲಿ ಗರಿಷ್ಠ ಮಲೇರಿಯಾ ಪ್ರಕರಣ ಇರುವ ಮಂಗಳೂರಲ್ಲಿ ಮಲೇರಿಯಾ ನಿರ್ಮೂಲನಕ್ಕೆ ಕಳೆದ ವರ್ಷ ರು. 20 ಲಕ್ಷ ನೀಡಲಾಗಿದೆ. ಈ ವರ್ಷವೂ ಪರಿಣಾಮಕಾರಿ ಕಾರ್ಯಕ್ರಮ ಅಳವಡಿಸಲಾಗುವುದು ಎಂದರು.
ಅಮಾಯಕರ ಕೇಸು ಹಿಂತೆಗೆತ: ಉಳ್ಳಾಲ ಗಲಭೆಯಲ್ಲಿ ನಿರಪರಾಧಿಗಳನ್ನು ಬಂಧಿಸಿದ್ದರೆ, ಅಂಥವರ ಮೇಲಿನ ಪ್ರಕರಣ ಕೈಬಿಡುವಂತೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಜತೆ ಮಾತುಕತೆ ನಡೆಸಲಾಗಿದೆ ಎಂದರು.
ಗಲಭೆ ಬಳಿಕ ತಾನು ಉಭಯ ಕಡೆಯ ಸಂತ್ರಸ್ತರನ್ನು ಭೇಟಿ ಮಾಡಿ ಪರಿಹಾರದ ಭರವಸೆ ನೀಡಿದ್ದೇನೆ. ಸೊತ್ತು ನಾಶಕ್ಕೆ ಪರಿಹಾರ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಆದರೂ ದುರುದ್ದೇಶಪೂರ್ವಕ ತನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ಅದಕ್ಕೆಲ್ಲ ತಾನು ತಲೆಕೆಡಿಸುವುದಿಲ್ಲ, ತನಗೆ ಅಧಿಕಾರಕ್ಕಿಂತ ಜನರ ಪ್ರೀತಿ ಮುಖ್ಯ ಎಂದರು.