ಅನುದಾನವಿಲ್ಲದೆ ಕೊಚ್ಚಿ ಹೋಗ್ತಿದೆ ಹಳೆ ಕಿಂಡಿ ಅಣೆಕಟ್ಟು
ಮಂಗಳೂರು: ಸುಳ್ಯ, ಪುತ್ತೂರು ತಾಲೂಕುಗಳಲ್ಲಿ 15 ವರ್ಷಗಳ ಹಿಂದೆ ಕಟ್ಟಿರುವ 5-6 ಕಿಂಡಿ ಅಣೆಕಟ್ಟು ದುರಸ್ತಿ ಹಂತದಲ್ಲಿದೆ. ಆದರೆ ಜಲಾನಯನ ಇಲಾಖೆ ಇದರ ರಿಪೇರಿ ಹಣ ಬಿಡುಗಡೆಯಾಗಿಲ್ಲ ಎಂದು ಕೈಚೆಲ್ಲಿ ಕುಳಿತಿದೆ.
ಪರಿಣಾಮ ದ.ಕ. ಜಿಲ್ಲೆಯಲ್ಲಿ ಶೇ. 50 ಕೃಷಿ ಭೂಮಿಗಳು ಪಾಳು ಬಿದ್ದಿದ್ದರೆ, ಅಂತರ್ಜಲ ಕೊರತೆಯಿಂದ ಬಾವಿ ನೀರು ಬತ್ತಿ ಹೋಗಿ ಕುಡಿಯುವ ನೀರಿಗೂ ಬರಗಾಲ ಸೃಷ್ಟಿಯಾಗಿದೆ.
ಬೆಳ್ತಂಗಡಿ ಮುಂಡಾಜೆಯಲ್ಲಿ 15 ವರ್ಷದ ಹಳೆಯ ಕಿಂಡಿ ಅಣೆಕಟ್ಟಿದ್ದು, ಇದನ್ನು ಕಪ್ಪು ಕಲ್ಲಿನಿಂದ ಕಟ್ಟಲಾಗಿದೆ. ಇದರಲ್ಲಿ ನೀರು ಸೋರಿಕೆಯಾಗುತ್ತಿದ್ದು, ಬೇಸಿಗೆಯಲ್ಲಿ ಸಾಕಷ್ಟು ನೀರು ಸಂಗ್ರಹಗೊಳ್ಳುತ್ತಿಲ್ಲ.
ಇಲ್ಲಿನ ಕಿಂಡಿಯಿಂದ ಮುಂಡಾಜೆ ಗ್ರಾಮದ 200 ಎಕರೆ ಕೃಷಿ ಜಮೀನಿಗೆ ಇಲ್ಲಿನ ನೀರು ಬಳಸಿಕೊಳ್ಳಲಾಗುತ್ತಿದೆ. ಕಿಂಡಿಯ ಹಲಗೆ, ಕಲ್ಲುಗಳ ಶಿಥಿಲಗೊಂಡ ಪರಿಣಾಮ ನೀರು ಬತ್ತಿ ಹೋಗುತ್ತಿದೆ. ಇದರ ದುರಸ್ತಿಗಾಗಿ ಜಲಾನಯನ ಇಲಾಖೆಗೆ ಅರ್ಜಿ ಸಲ್ಲಿಸಿದರೆ, ಅನುದಾನ ಬಿಡುಗಡೆಗೊಂಡಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ಬಂಟ್ವಾಳ, ಮೂಡುಬಿದಿರೆ ಗ್ರಾಮೀಣ ಪ್ರದೇಶದಲ್ಲಿ ಮಾರ್ಚ್ನಿಂದ ನೀರಿಗೆ ಹಾಹಾಕಾರ ಆರಂಭವಾಗುತ್ತದೆ. ಈ ಸಂದರ್ಭ ಜನರು ನಳ್ಳಿ ನೀರನ್ನು ಅವಲಂಬಿಸಿದ್ದಾರೆ. ಬರಿದಾದ ತೋಡನ್ನು ಕೊರೆದು ಅಂತರ್ಜಲವನ್ನು ಕೃಷಿಗಾಗಿ ಬಳಸಿಕೊಳ್ಳುತ್ತಿದ್ದಾರೆ.
ಮಳೆಗಾಲದಲ್ಲಿ ಕಿಂಡಿ ಅಣೆಕಟ್ಟಿನಲ್ಲಿ ಭದ್ರಪಡಿಸಿದ ಹಲಗೆಗಳು ನೀರಿನ ರಭಸಕ್ಕೆ ಕಿತ್ತು ಹೋದರೆ, ನೀರಿನ ಹರಿವು ಕಡಿಮೆಯಾದ ನಂತರ ಅದನ್ನು ಸರಿಪಡಿಸಲಾಗುತ್ತದೆ. ಇದರಿಂದ ಅನೇಕ ಕಿಂಡಿಗಳಲ್ಲಿ ನೀರಿನ ಸಂಗ್ರಹಣೆಯಾಗುತ್ತಿಲ್ಲ. ದ.ಕ. ಜಿಲ್ಲೆಯಲ್ಲಿ ಇದರಲ್ಲಿ 10 ಕಿಂಡಿಗಳು ಹಳೆಯದಾಗಿದ್ದರೆ, ಉಳಿದ 6 ಕಿಂಡಿಗಳನ್ನು ತೇಪೆ ಕಾಮಗಾರಿ ಮೂಲಕ ಭದ್ರ ಪಡಿಸಲಾಗುತ್ತಿದೆ. ಒಟ್ಟು 118 ಕಿಂಡಿ ಅಣೆಕಟ್ಟುಗಳಿಗೆ ಕಾಮಗಾರಿ ಪ್ರಾರಂಭಗೊಂಡಿದ್ದರೂ, ರು. 20 ಕೋಟಿ ವೆಚ್ಟದ 77 ಕಿಂಡಿ ಅಣೆಕಟ್ಟುಗಳ ಕಾಮಗಾರಿಗಳು ನಡೆಯುತ್ತಿದೆ. ಸುಮಾರು ರು. 7 ಕೋಟಿ ವೆಚ್ಚದ 32 ಕಿಂಡಿ ಅಣೆಕಟ್ಟು ಕಾಮಗಾರಿಗಳು ಪ್ರಾರಂಭಿಸಬೇಕಾಗಿದೆ.
ಬಂಟ್ವಾಳದ ನೆಕ್ಕರೆಕಾಡು, ಸಾಲೆತ್ತೂರು, ಮಂಗಳೂರು ಗ್ರಾಮಾಂತರ, ಮೂಲ್ಕಿ, ಮೂಡುಬಿದಿರೆಯಲ್ಲಿ ನಿರ್ಮಿಸಲಾಗಿರುವ ಕಿಂಡಿ ಅಣೆಕಟ್ಟುಗಳು ದುರಸ್ತಿ ಹಂತದಲ್ಲಿವೆ. ಇಲ್ಲಿನ ಜನರು ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.
ನದಿ, ತೊರೆ, ತೋಡುಗಳಿಗೆ ಕಿಂಡಿ ನಿರ್ಮಿಸಿಕೊಡಲು ರೈತರ ಮನವಿಗಳು ಶಾಸಕರ ಮೂಲಕ ಸಣ್ಣ ನೀರಾವರಿ ಇಲಾಖೆಗೆ ಬಂದಿರುತ್ತದೆ.
ರೈತರು ತಮ್ಮ ಒಂದು ಎಕರೆ ಪ್ರದೇಶದ ಕೃಷಿಗೆ ಕಿಂಡಿ ಅಣೆಕಟ್ಟಿನಲ್ಲಿ ಸಂಗ್ರಹಗೊಂಡ ನೀರನ್ನು ಪಂಪ್ ಮಾಡುವ ಮೂಲಕ ಬಳಸಿಕೊಳ್ಳಬಹುದು. ಇದಕ್ಕೆ ಸಣ್ಣ ನೀರಾವರಿ ಇಲಾಖೆಗೆ ತಿಂಗಳಿಗೆ ರು. 60-100 ಬಿಲ್ ಪಾವತಿಸಬೇಕಾಗುತ್ತದೆ.
2013ರ ಮಾರ್ಚ್ನಲ್ಲಿ ದ.ಕ. ಜಿಲ್ಲೆಯಲ್ಲಿ 42,134.75 ಮೀ. ಉದ್ದಕ್ಕೆ ಪ್ರವಾಸ ನಿಯಂತ್ರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಏತ ನೀರಾವರಿ ಯೋಜನೆಯಲ್ಲಿ ದ.ಕ. ಜಿಲ್ಲೆಯ ಮಂಗಳೂರು-2, ಬಂಟ್ವಾಳ-1, ಬೆಳ್ತಂಗಡಿ-1, ಪುತ್ತೂರು-3, ಸುಳ್ಯ-2 ಕಾಮಗಾರಿ ಪೂರ್ಣಗೊಂಡಿದೆ.
ಉಪ್ಪು ನೀರು ಬೇರ್ಪಡಿಸುವಿಕೆ(ಕ್ಷಾರಭೂಮಿ ಯೋಜನೆ) ಕಾಮಗಾರಿಯು ಮಂಗಳೂರು ವ್ಯಾಪ್ತಿಯಲ್ಲಿ 16 ಕಡೆಯಲ್ಲಿ 1587.51 ಮೀ ಉದ್ದದಲ್ಲಿ ನಿರ್ಮಿಸಲಾಗಿದೆ.
ಕಿಂಡಿ ಅಣೆಕಟ್ಟಿನ ನೀರಿನ ಉಪಯೋಗ ನದಿ ತೀರದ ಪ್ರದೇಶದಲ್ಲಿರುವ ರೈತರಿಗೆ ಮಾತ್ರ ದೊರೆಯುತ್ತದೆ. ಮಾರ್ಚ್ ಅಂತ್ಯಕ್ಕೆ ಎಲ್ಲ ಕಡೆಯಲ್ಲಿಯೂ ಶೇ. 80 ನೀರು ಬರಿದಾಗಿರುತ್ತದೆ. ಶೇ. 20 ನೀರಿನ ಪ್ರಮಾಣ ಇರುವುದು ಕೂಡ ತುಂಬಾ ಕಡಿಮೆ.
ಗಿರೀಶ್, ಸಹಾಯಕ ಎಂಜಿನಿಯರ್, ಸಣ್ಣ ನೀರಾವರಿ ವಿಭಾಗ
ಸುಳ್ಯ, ಪುತ್ತೂರು, ಬೆಳ್ತಂಗಡಿಯಲ್ಲಿ ಹಳೆಯ ಕಿಂಡಿ ಅಣೆಕಟ್ಟನ್ನು ದುರಸ್ತಿಗೊಳಿಸುವಂತೆ ಜಲಾನಯನಕ್ಕೆ ಅರ್ಜಿ ಸಲ್ಲಿಸಿದರೆ, ಹಣ ಇಲ್ಲ. ಹೊಸದಾಗಿ ಕಟ್ಟಿಕೊಡುತ್ತೇವೆ ಎನ್ನುತ್ತಾರೆ. ಆದರೆ 2006-07ರ ನಂತರ ಯಾವುದೇ ಹೊಸ ಕಿಂಡಿ ಅಣೆಕಟ್ಟು ನಿರ್ಮಾಣಗೊಂಡಿಲ್ಲ. ನೀರಿನ ಸಂಗ್ರಹ ಇದ್ದರೂ, ಅಣೆಕಟ್ಟಿನ ಸಮಸ್ಯೆಯಿಂದ ಸೋರಿಕೆಯಾಗುತ್ತಿದೆ.
ಕೊರಗಪ್ಪ ನಾಯ್ಕ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ
-ವಜ್ರಾಕ್ಷಿ ಬಂಟ್ವಾಳ