ಉಸ್ತುವಾರಿ ಸಚಿವರ ಕಚೇರಿಗೆ ಕಿಡಿಗೇಡಿಗಳ ದಾಳಿ: ದೂರು
ಹಿರಿಯಡ್ಕ: ಇಲ್ಲಿನ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿದ ಘಟನೆ ಶನಿವಾರ ಬೆಳಗ್ಗೆ 10.15 ಗಂಟೆಗೆ ನಡೆದಿದೆ.
ಹಿರಿಯಡ್ಕ ಪೇಟೆಯಲ್ಲಿರುವ ಸಚಿವ ವಿನಯ ಕುಮಾರ್ ಸೊರಕೆ ಅವರ ಕಚೇರಿಯ ಬಳಿ ಬಂದ 6 ಮಂದಿ ಯುವಕರು ಕಚೇರಿಯ ನಾಮ ಫಲಕಕ್ಕೆ ಕಲ್ಲು ಹೊಡೆದು, ಕೆಳಗೆ ಎಳೆದು ಹಾಕಿ ಕಾಲಿನಿಂದ ತುಳಿದು ಹಾನಿಗೊಳಿಸಿದರು. ಮಾತ್ರವಲ್ಲ ಕಚೇರಿಯಲ್ಲಿ ಸಿಬ್ಬಂದಿ ಇರುವಾಗಲೇ ಷಟರನ್ನು ಕೆಳಗೆ ಎಳೆದು, ಷಟರನ್ನು ತುಳಿದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ದರೋಡೆ ಆರೋಪಿ ಬಜರಂಗದಳದ ನಾಯಕನನ್ನು ಬಂಧಿಸಿದ ಹಿನ್ನೆಲೆಯಲ್ಲಿ ಶನಿವಾರ ಬಜರಂಗ ದಳ ಮತ್ತು ವಿಹಿಂಪ ಶನಿವಾರ ಹಿರಿಯಡ್ಕ ಬಂದ್ಗೆ ಕರೆ ನೀಡಿದ ಸಂದರ್ಭ ಈ ಘಟನೆ ನಡೆದಿದೆ. ಈ ಬಗ್ಗೆ ಕಚೇರಿಯ ಸಿಬ್ಬಂದಿ ಪ್ರಶಾಂತ ಕುಮಾರ್ ದೂರಿನಂತೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.