ಬೇಸಿಗೆ ಆರಂಭದಲ್ಲೇ ಬತ್ತಿದೆ ಕೆರೆ, ತೊರೆ...
ಪುತ್ತೂರು: ಪ್ರತಿ ವರ್ಷ ಫೆಬ್ರವರಿ ಆರಂಭಗೊಳ್ಳುವುದರೊಂದಿಗೆ ಜನರಿಗೆ ನೀರಿನ ಸಮಸ್ಯೆಯೂ ಆರಂಭವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ತೊರೆ, ಕೆರೆ, ಗುಂಟೆಗಳು ಈ ಸಮಯದಲ್ಲಿ ಬತ್ತಿ ಹೋಗಿ ಜನರಿಗೆ ನೀರಿನ ಭರ ಅನುಭವಿಸಬೇಕಾಗುತ್ತದೆ. ಗ್ರಾಮ ಪಂಚಾಯಿತಿ ಮತ್ತು ಪುರಸಭೆಗಳಿಗೆ ನೀರಿನ ಪೂರೈಕೆಯ ಜವಾಬ್ದಾರಿ ಇದೀಗ ಹೆಚ್ಚಾಗುತ್ತಿದೆ.
ಪುತ್ತೂರು ಪುರಸಭಾ ವ್ಯಾಪ್ತಿಯಲ್ಲಿ ವರ್ಷಪೂರ್ತಿ ನೀರು ನೀಡುವ ಜವಾಬ್ದಾರಿ ಪುರಸಭೆಯ ಮೇಲಿದ್ದು, ಜನವರಿ ಬಳಿಕ ಬೇಡಿಕೆ ಹೆಚ್ಚಾಗುತ್ತಿದೆ. ಇಲ್ಲಿ 11,136 ಮನೆಗಳು ಹಾಗೂ 2500 ಅಂಗಡಿಗಳಿವೆ. ಸುಮಾರು 9 ಸಾವಿರ ಮಂದಿ ನೀರಿನ ಸಂಪರ್ಕವನ್ನು ಪಡೆದುಕೊಂಡಿದ್ದು, ಪ್ರತಿನಿತ್ಯ 70 ಲಕ್ಷ ಲೀಟರ್ ನೀರನ್ನು ಪೂರೈಸುತ್ತಿದೆ. ಈ ಪೈಕಿ ಎಡಿಬಿ ಯೋಜನೆಯಲ್ಲಿ ನಿರ್ಮಿಸಲಾದ ಕುಮಾರಧಾರಾ ನದಿ ನೀರು ಯೋಜನೆಯಲ್ಲಿ 50 ಲಕ್ಷ ಲೀಟರ್ ನೀರನ್ನು ಪೂರೈಸಲಾಗುತ್ತಿದೆ. ಉಳಿದಂತೆ 50ಕ್ಕೂ ಅಧಿಕ ಕೊಳವೆ ಬಾವಿಗಳಿಂದ ವಿದ್ಯುತ್ ಪಂಪ್ ಮತ್ತು ಕೈ ಪಂಪ್ಗಳ ಮೂಲಕ 20 ಲಕ್ಷ ನೀರನ್ನು ಪೂರೈಸಿ ಜನರ ನೀರಿನ ಭವಣೆ ನೀಗಿಸುವ ಕೆಲಸವನ್ನು ಪುರಸಭೆ ಮಾಡುತ್ತಿದೆ.
ಅಂತರ್ಜಲ ಮಟ್ಟ ಕುಸಿತ: ಇದೀಗ ನೀರಿನ ಅಂತರ್ಜಲ ಮಟ್ಟ ಪಾತಾಳಕ್ಕಿಳಿದಿದ್ದು, ಕೊಳವೆಬಾವಿಯಲ್ಲಿ 500 ರಿಂದ 600 ಅಡಿಗಳಷ್ಟು ನೀರು ಆಳಕ್ಕೆ ಹೋಗಿದೆ. ಅಲ್ಲದೆ ಜೀವನದಿ ಕುಮಾರಧಾರಾ ಬತ್ತಿ ಹೋಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ನೀರ ಸಮಸ್ಯೆ ಹೆಚ್ಚಾಗುವ ಅಪಾಯವೂ ಕಂಡು ಬರುತ್ತಿದೆ. ಈಗಾಗಲೇ ಪುರಸಭಾ ವ್ಯಾಪ್ತಿಯ ಕೆಲವು ಕಡೆಗಳಲ್ಲಿ ನೀರಿನ ಸಮಸ್ಯೆ ಕಂಡು ಬರುತ್ತಿದ್ದು, ಪುರಸಭೆಯು ಅಂತಹ ಪ್ರದೇಶಗಳಿಗೆ 7 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕರ್ಗಳಿಗೆ ನೀರು ಸರಬರಾಜು ಮಾಡುತ್ತಿದೆ. 17 ಹೊಸ ಕೊಳವೆ ಬಾವಿ ಕೊರೆಸುವ ಕೆಲಸವನ್ನೂ ಪುರಸಭಾ ಆಡಳಿತವು ಮಾಡಿದ್ದು, ಈಗಾಗಲೇ ಕೊರೆಸಲಾದ ಬಾವಿಗಳಿಗೆ ವಿದ್ಯುತ್ ಸಂಪರ್ಕ ಅಳವಡಿಸುವ ಕೆಲಸ ನಡೆಸುತ್ತಿದೆ. ಅಲ್ಲದೆ ಜನರಿಗೆ ನೀರಿಗೆ ಸಮಸ್ಯೆಯಾಗದಂತೆ ತಡೆಯಲು ಮೆಸ್ಕಾಂ ಅಧಿಕಾರಿಗಳ ಸಭೆ ಕರೆದು ಕೊಳವೆ ಬಾವಿಗಳಿರುವ ಪ್ರದೇಶದಲ್ಲಿ ವಿದ್ಯುತ್ ಸ್ಥಗಿತಗೊಳಿಸದಂತೆ ಸೂಚನೆ ನೀಡಿದೆ.
ಗ್ರಾಮೀಣ ಭಾಗದಲ್ಲೂ ಸಮಸ್ಯೆ: ಗ್ರಾಮೀಣ ಪ್ರದೇಶಗಳಲ್ಲಿಯೂ ನೀರಿನ ಭವಣೆ ಕಂಡು ಬರುತ್ತಿದೆ. ಕುಡಿಯುವ ನೀರಿಗೆ ತತ್ವಾರ ಆಗುತ್ತಿರುವ ಬಗ್ಗೆ ಜನರು ಸ್ಥಳೀಯಾಡಳಿತಕ್ಕೆ ದೂರು ನೀಡುತ್ತಿದ್ದಾರೆ.
ತಾಲೂಕಿನ ಕೋಡಿಂಬಾಡಿ, ಒಳಮೊಗರು, ನರಿಮೊಗರು ಮತ್ತಿತರ ಕಡೆಗಳಲ್ಲಿ ನೀರಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದೆ. ನೀರಿನ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ಕರೆದು ಸೂಚನೆ ನೀಡಿದ್ದಾರೆ.
ಪ್ರತಿವರ್ಷ ಬರುತ್ತಿರುವ ಜಲಕ್ಷಾಮವನ್ನು ತಡೆಯುವ ನಿಟ್ಟಿನಲ್ಲಿ ಇದೀಗ ಸಾರ್ವಜನಿಕರು ಆಸಕ್ತಿ ವಹಿಸುತ್ತಿದ್ದು, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪ್ರಸ್ತುತ ವರ್ಷದಲ್ಲಿ ಪುತ್ತೂರು ತಾಲೂಕಿನಲ್ಲಿ ವೈಯಕ್ತಿಕವಾಗಿ ಸುಮಾರು 408 ತೆರೆದ ಬಾವಿಗಳನ್ನು ನಿರ್ಮಿಸಲು ಮುಂದಾಗಿದ್ದಾರೆ. ಈ ಪೈಕಿ ಕುಟ್ರುಪ್ಪಾಡಿ ಗ್ರಾ.ಪಂ. 44, ಬಿಳಿನೆಲೆ ಗ್ರಾ.ಪಂ. 36, ಕಡಬ ಗ್ರಾ.ಪಂ. 30, ರಾಮಕುಂಜ ಗ್ರಾ.ಪಂ 25, ಐತ್ತೂರು ಗ್ರಾ.ಪಂ. 20, ಕೆದಂಬಾಡಿ, ಕೌಕ್ರಾಡಿ, ನೂಜಿಬಾಳ್ತಿಲ ಗ್ರಾ.ಪಂಗಳು ತಲಾ 18, ಆಲಂಕಾರು ಗ್ರಾ.ಪಂ. 16, ನೆಟ್ಟಣಿಗೆ ಮುಡ್ನೂರು ಗ್ರಾ.ಪಂ. 14, ಶಿರಾಡಿ, ಬಡಗನ್ನೂರು, ಬಲ್ನಾಡು ಗ್ರಾ.ಪಂ. 13, ಗೋಳಿತೊಟ್ಟು, ಸವಣೂರು, ಪಾಣಾಜೆ, ನೆಲ್ಯಾಡಿ ತಲಾ 12, ಕೊಂಬಾರು ಮತ್ತು ಕೊಳ್ತಿಗೆ ತಲಾ 10, ಒಳಮೊಗರು ಮತ್ತು ಬೆಳಂದೂರು ಗ್ರಾ.ಪಂ. 8, ಮರ್ಧಾಳ ಮತ್ತು ಶಿರಾಡಿ ಗ್ರಾ.ಪಂ. 7, ಕೊಯಿಲ ಗ್ರಾ.ಪಂ. 6, ಅರಿಯಡ್ಕ ಗ್ರಾ.ಪಂ. 5, ನರಿಮೊಗರು, 34ನೆಕ್ಕಿಲಾಡಿ ಮತ್ತು ಬನ್ನೂರು ಗ್ರಾ.ಪಂ. ತಲಾ 4 ತೆರೆದ ಬಾವಿಗಳನ್ನು ನಿರ್ಮಿಸುತ್ತಿದೆ. ಈ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಪ್ರಯತ್ನವೂ ತಾಲೂಕಿನಲ್ಲಿ ನಡೆಯುತ್ತಿದೆ.
ಈ ನಡುವೆ ನೀರಿನ ಅನಿಯಮಿತ ಬಳಕೆಯಿಂದ ಹಾಗೂ ದುರುಪಯೋಗದಿಂದಲೂ ಜನರು ಜಲಕ್ಷಾಮವನ್ನು ಎದುರಿಸುವ ಪ್ರಮೇಯ ಬಹುತೇಕ ಕಡೆಗಳಲ್ಲಿ ಕಂಡು ಬರುತ್ತಿದೆ. ನೀರು ಇಲ್ಲ ಎಂದು ದೂರುವ ಬದಲು ಜಲಕ್ಷಾಮದ ಕಾರಣವನ್ನು ತಿಳಿದುಕೊಂಡು ಕಡು ಬೇಸಿಗೆಯಲ್ಲಿ ಅಮಿತ ನೀರು ಬಳಕೆಯನ್ನು ಮಾಡುವುದರಿಂದ ನೀರಿನ ಕ್ಷಾಮವನ್ನು ಬಹುತೇಕ ತಡೆಯಲು ಸಾಧ್ಯವಿದೆ.
ನೀರಿನ ಪೂರೈಕೆಗೂ ಲೆಕ್ಕಾಚಾರವಿಡುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮತ್ತು ಪುರಸಭೆಯಲ್ಲಿ ಮತ್ತು ಮನೆ ಮನೆಗಳಲ್ಲಿ ಎಲ್ಲಾ ವಿಷಯಗಳಿಗೂ ಬಜೆಟ್ ಮಾಡುವಂತೆ ನೀರಿನ ಬಳಕೆಗೂ ಬಜೆಟ್ ಮಾಡುವುದರಿಂದ ಜಲಕ್ಷಾಮದಿಂದ ಅಲ್ಪ ಮಟ್ಟಿಗೆ ಬಚಾವಾಗಲು ಸಾಧ್ಯವಾಗಲೂ ಬಹುದು.
ಸಂಶುದ್ದೀನ್ ಸಂಪ್ಯ