ಬ್ರಹ್ಮಾವರ ಬಂದ್, ಕಲ್ಲು ತೂರಾಟ, ಪ್ರತಿಭಟನೆ, ಲಾಠಿ ಚಾರ್ಜ್
ಬ್ರಹ್ಮಾವರ: ದರೋಡೆ ಪ್ರಕರಣದ ಆರೋಪಿಯೊಬ್ಬನನ್ನು ಬ್ರಹ್ಮಾವರ ಪೊಲೀಸರು ಬಂಧಿಸಿರುವ ಹಿನ್ನೆಲೆಯಲ್ಲಿ ಶನಿವಾರ ಬ್ರಹ್ಮಾವರದಲ್ಲಿ ಪೊಲೀಸ್ ವಾಹನ, ಅಂಗಡಿ ಮೇಲೆ ಕಲ್ಲು ತೂರಾಟ ನಡೆಯಿತು.
ಬಿಜೆಪಿ- ಹಿಂದೂ ಸಂಘಟನೆಗಳು ಮತ್ತು ಕಾಂಗ್ರೆಸ್ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು. ಇದರಿಂದ ಕೆಲಕಾಲ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಯಿತು, ಪೊಲೀಸರು ಲಾಠಿ ಚಾರ್ಜ್ ಮಾಡುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇತ್ತೀಚೆಗೆ ಕಟಪಾಡಿಯ ನಾಸೀರ್ ಎಂಬ ಯುವಕ ತನ್ನನ್ನು ಕೆಲವು ಯುವಕರು ಅಪಹರಿಸಿ, ತನ್ನ ಮೊಬೈಲು - ನಗದನ್ನು ದರೋಡೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದ. ನಂತರ ಈ ನಾಸೀರ್ ಉಡುಪಿಯ ಕಾಲೇಜು ವಿದ್ಯಾರ್ಥಿನಿಯೊಂದಿಗೆ ಅಶ್ಲೀಲ ಭಂಗಿಯಲ್ಲಿರುವ ತನ್ನದೇ ಫೋಟೋಗಳನ್ನು ಫೇಸ್‌ಬುಕ್‌ಗೆ ಹಾಕಿ ಭಾರಿ ಸುದ್ದಿ, ಪ್ರತಿಭಟನೆಗೆ ಕಾರಣನಾಗಿದ್ದ. ನಂತರ ಪೊಲೀಸರು ಆತನನ್ನು ಬಂಧಿಸಿದ್ದರು. ಇದೀಗ ಪೊಲೀಸರು ಆತನನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಬಂಧಿಸಿದಂತೆ ಬಜರಂಗದಳ ಪ್ರಮುಖ ದಿನೇಶ್ ಮೆಂಡನ್ ಎಂಬಾತನನ್ನು ಬಂಧಿಸಿದ್ದಾರೆ.
ಇದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್- ಬಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರು ಶುಕ್ರವಾರ ಠಾಣೆಗೆ ಮುತ್ತಿಗೆ ಹಾಕಿದ್ದರು ಮತ್ತು ಶನಿವಾರ ಬ್ರಹ್ಮಾವರ ಬಂದ್‌ಗೆ ಕರೆ ನೀಡಿದ್ದರು. ಅದರಂತೆ ಶನಿವಾರ ಬ್ರಹ್ಮಾವರ ಬಂದ್ ನಡೆಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಸೇರಿದ ಅಂಗಡಿಯೊಂದು ತೆರೆದಿತ್ತು, ಆಗ ಬಂದ್ ನಡೆಸುತ್ತಿದ್ದ ಕೆಲವು ಕಿಡಿಗೇಡಿಗಳು ಅಂಗಡಿಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಪೊಲೀಸ್ ವಾಹನದ ಮೇಲೆಯೂ ಕಲ್ಲು ತೂರಲಾಯಿತು. ಪರಿಸ್ಥಿತಿ ಹತೋಟಿ ಮೀರುವ ಲಕ್ಷಣ ಕಂಡು ಬಂದಾಗ ಅವರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದರು.
ನಂತರ ಕಾಂಗ್ರೆಸ್ ಕಾರ್ಯಕರ್ತರ ಅಂಗಡಿಯ ಮೇಲೆ ಕಲ್ಲು ತೂರಿದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಬ್ರಹ್ಮಾವರ ಕಾಂಗ್ರೆಸ್ ನಾಯಕರು ಬ್ರಹ್ಮಾವರ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರೊಂದಿಗೆ ವಿಚಾರ ವಿನಿಮಯ ನಡೆಸಿದರು. ಪೊಲೀಸರು ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದರು.
ಪೊಲೀಸ್ ವಾಹನ ಮತ್ತು ಅಂಗಡಿ ಮೇಲೆ ಕಲ್ಲು ತೂರಿರುವ ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ವಿಲಾಸ್ ನಾಯಕ್, ವಿಹಿಂಪ ನಾಯಕ ಬೈಕಾಡಿ ಸುಪ್ರಸಾದ್ ಶೆಟ್ಟಿ, ಬಜರಂಗದಳದ ನಾಯಕ ಸುನಿಲ್ ಕೆ.ಆರ್. ಅವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಉಡುಪಿ ಡಿವೈಎಸ್ಪಿ ಡಾ. ಪ್ರಭುದೇವ ಮಾನೆ, ಬ್ರಹ್ಮಾವರ ವೃತ್ತ ನಿರೀಕ್ಷಕ ಅರುಣ್ ನಾಯಕ್, ಬ್ರಹ್ಮಾವರ ಠಾಣಾಧಿಕಾರಿ ಗಿರೀಶ್ ಮತ್ತು ಕೋಟ ಠಾಣಾಧಿಕಾರಿ ಕೆ.ಆರ್. ನಾಯ್ಕ್ ಹಾಗೂ ಹೆಚ್ಚುವರಿಯಾಗಿ ಕರೆಸಲಾಗಿದ್ದ ಪೊಲೀಸ್ ಸಿಬ್ಬಂದಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರು.
ಒಟ್ಟಾರೆ ಬಂದ್, ಪ್ರತಿಭಟನೆ, ಕಲ್ಲು ತೂರಾಟ, ಮಾತಿನ ಚಕಮಕಿ ಇತ್ಯಾದಿಗಳನ್ನು ಪೊಲೀಸರು ವಿಡಿಯೋ ಚಿತ್ರೀಕರಣ ನಡೆಸಿದ್ದು, ಈ ಆಧಾರದ ಮೇಲೆ ಇನ್ನಷ್ಟು ಮಂದಿಯ ಮೇಲೆ ಪ್ರಕರಣ ದಾಖಲಾಗುವ ಸಾಧ್ಯತೆಗಳಿವೆ. ಇನ್ನೂ ಒಂದೆರಡು ದಿನ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಇರಲಿದೆ.