ಸುದ್ದಿ ಸಂಕ್ಷೇಪ
ಜುಗಾರಿ: ನಾಲ್ವರ ಬಂಧನ
ಉಪ್ಪಿನಂಗಡಿ: ಆಲಂತಾಯ ಗ್ರಾಮದ ಶಿವಾರು ಬಸ್ ನಿಲ್ದಾಣದ ಹಿಂಭಾಗದಲ್ಲಿ ಅಕ್ರಮವಾಗಿ ಜುಗಾರಿಯಾಟವಾಡುತ್ತಿದ್ದ ನಾಲ್ವರನ್ನು ಉಪ್ಪಿನಂಗಡಿ ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಅವರಿಂದ ರು. 1800 ನಗದು ಹಣ ವಶಪಡಿಸಿಕೊಂಡಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿ ಕೇಸು ದಾಖಲಾಗಿದೆ.
ವ್ಯಕ್ತಿ ನಾಪತ್ತೆ
ಬ್ರಹ್ಮಾವರ: ಚೇರ್ಕಾಡಿ ಗ್ರಾಮದ ಕನ್ನಾರು ಎಂಬಲ್ಲಿನ ನಿವಾಸಿ ಗುಂಡು ನಾಯ್ಕ ಎಂಬವರು ಕೆಲಸಕ್ಕೆಂದು ಉಡುಪಿಗೆ ಹೋದವರು ಈವರೆಗೆ ವಾಪಾಸ್ ಮನೆಗೆ ಬಾರದೆ ಕಾಣೆಯಾದ ಬಗ್ಗೆ ಶನಿವಾರ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಗೌಡ ಕುಟುಂಬ ಸಮ್ಮಿಲನ
ಸುಳ್ಯ: ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಸುಳ್ಯ ನಗರ ಗೌಡ ಸಮಿತಿ, ನಗರ ಗೌಡ ಮಹಿಳಾ ಘಟಕ ಮತ್ತು ನಗರ ತರುಣ ಘಟಕಗಳ ಆಶ್ರಯದಲ್ಲಿ ನಗರಕ್ಕೆ ಒಳಪಟ್ಟ ಸ್ವಜಾತಿ ಬಾಂಧವರ ಒಂದು ದಿನದ ಕುಟುಂಬ ಸಮ್ಮಿಲನ 16ರಂದು ಕೊಡಿಯಾಲ್ಬೈಲ್ ಎಂ.ಜಿ.ಎಂ. ಪ್ರೌಢಶಾಲೆ ಆವರಣದಲ್ಲಿ ನಡೆಯಲಿದೆ.
ಇಂದು ಆರೋಗ್ಯ ತಪಾಸಣೆ
ಮಂಗಳೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಫೆ. 16 ರಂದು ಪದವಿನಂಗಡಿ ಮಂಗಳಾ ಕ್ಯಾಶ್ಯೂ ಇಂಡಸ್ಟ್ರಿಸ್ ಪ್ರಾಂಗಣದಲ್ಲಿ ಆರೋಗ್ಯ ತಪಾಸಣೆ ಉಚಿತ ಶಿಬಿರ ಬೆಳಗ್ಗೆ 9 ರಿಂದ ಮಧ್ಯಾಹ್ನ 12.30ರವರೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಇಂದು ರಜತ ಮಹೋತ್ಸವ
ಬಂಟ್ವಾಳ: ಫಜೀರು ಕೇದಗೆಬೈಲು ಲವ-ಕುಶ ಹೊನಲು ಬೆಳಕಿನ ಜೋಡುಕರೆ ಕಂಬಳದ ರಜತ ಮಹೋತ್ಸವ 16ರಂದು ಕೇದಗೆಬೈಲು ಕೆರೆಮಜಲು ಗದ್ದೆಯಲ್ಲಿ ನಡೆಯಲಿದೆ.
ಇಂದು ಮುಕ್ತ ಕಬಡ್ಡಿ ಪಂದ್ಯ
ಬಂಟ್ವಾಳ: ಬೋಳಂತೂರು- ಕಲ್ಪನೆಯ ಸೆವೆನ್ ಬ್ರದರ್ಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ 60 ಕೆ.ಜಿ. ವಿಭಾಗದ ಮುಕ್ತ ಕಬಡ್ಡಿ ಪಂದ್ಯಾವಳಿ 16ರಂದು ಸೆವೆನ್ ಸ್ಟಾರ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
'ಪೂಜಾರಿ ಕೇಸರಿ ವಿರೋಧಿಯಲ್ಲ'
ಬಂಟ್ವಾಳ: ಪೂಜಾರಿ ಕೇಸರಿಯ ವಿರುದ್ಧ ಇಲ್ಲ. ಆದರೆ, ಕೇಸರಿ ಶಾಲು ಹಾಕಿಕೊಂಡು ಅಪವಿತ್ರ ಕಾರ್ಯ ಮಾಡುವುದನ್ನು ವಿರೋಧಿಸುತ್ತೇನೆ ಎಂದು ಕೇಂದ್ರ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಹೇಳಿದರು. ಅವರು ನರಿಕೊಂಬು ಏರಮಲೆ ಭಗವಾನ್ ಶ್ರೀ ಕೋದಂಡರಾಮ ಭಜನಾ ಮಂದಿರದ 50ನೇ ವರ್ಷಾಚರಣೆ, ಸಭಾಭವನ ಉದ್ಘಾಟನೆ, ಐವತ್ತನೇ ವಾರ್ಷಿಕ ಭಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಚಿವ ರಮಾನಾಥ ರೈ, ಸಂಸದ ನಳಿನ್ ಕುಮಾರ್ ಇದ್ದರು.