21ರಿಂದ ಶೃಂಗೇರಿ ಶ್ರೀಗಳ ಮಲ್ಲ, ಆವಳ ಮಠ ಭೇಟಿ
ಕಾಸರಗೋಡು: ಶೃಂಗೇರಿ ಶಾರದಾ ಪೀಠದ ಶ್ರೀ ಭಾರತಿ ತೀರ್ಥ ಸ್ವಾಮೀಜಿ ಫೆ.21ರಿಂದ 24ರ ತನಕ ಕಾಸರಗೋಡು ತಾಲೂಕಿಗೆ ಭೇಟಿ ನೀಡಲಿದ್ದು, ಬಾಯಾರು ಸಜಂಕಿಲದ ಆವಳ ಮಠ ಹಾಗೂ ಮಲ್ಲ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ.
21ರಂದು ಸುಳ್ಯ ಮೂಲಕ ಮುಳ್ಳೇರಿಯಾ ಮಾರ್ಗವಾಗಿ ಆಗಮಿಸುವ ಅವರು ಆವಳ ಮಠದಲ್ಲಿ ವಾಸ್ತವ್ಯ ಹೂಡುವರು. 22ರಂದು ಮಲ್ಲ ದೇವಸ್ಥಾನ, ಚೈತನ್ಯ ಪಾಠಶಾಲೆಗೆ ಭೇಟಿ ನೀಡಿ ಮಲ್ಲದಲ್ಲಿ ವಾಸ್ತವ್ಯ ಹೂಡುವರು.
23ರಂದು ಅಗಲ್ಪಾಡಿ, ಪುಜಿರಿಕಾನ ದುರ್ಗಾ ದೇವಸ್ಥಾನ, ನಾರಯಣೀಯಂ ಸಂಗೀತ ಅಕಾಡೆಮಿ, ಬದಿಯಡ್ಕಕ್ಕೆ ಭೇಟಿಯಾಗಿ ಮಲ್ಲದಲ್ಲಿ ಮೊಕ್ಕಾಂ ಹೂಡುವರು. 24ರಂಗದು ಶಾರದಾ ದೇವಸ್ಥಾನ, ಮಲ್ಲ ಕ್ಷೇತ್ರಕ್ಕೆ ಭೇಟಿ ನೀಡಿ ಶೃಂಗೇರಿಗೆ ನಿರ್ಗಮಿಸುವರು.
ಚಂಡಿಕಾ ಹವನ: ಸುಮಾರು 600 ವರ್ಷಗಳಷ್ಟು ಪ್ರಾಚೀನವಾದ ಪೈವಳಿಕೆ ಗ್ರಾ.ಪಂ. ಬಾಯಾರು ಗ್ರಾಮದ ಐತಿಹಾಸಿಕ ಪೊಸಡಿಗುಂಪೆ ತಪ್ಪಲಿನ ಆವಳ ಮಠದ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಶೃಂಗೇರಿ ಜಗದ್ಗುರು ಶ್ರೀ ಭಾರತಿ ತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಫೆ.18ರಿಂದ 22ರ ತನಕ ಶ್ರೀ ಸಹಸ್ರಚಂಡೀ ಹವನ ಹಾಗೂ ನೂತನವಾಗಿ ನಿರ್ಮಿಸಿದ ದಕ್ಷಿಣ ಗೋಪುರ ಉದ್ಘಾಟನೆ ನಡೆಯಲಿದೆ.
ಈ ಪ್ರಯುಕ್ತ 18ರಂದು ಬೆಳಗ್ಗೆ 6ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ, ಸಂಜೆ 5ರಿಂದ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
19ರಂದು ಸಂಪೂರ್ಣ ನವಗ್ರಹ ಹವನ, ಧನ್ವಂತರಿ ಹವನ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 5ರಿಂದ ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, 20ರಂದು ಸ್ವಯಂವರ ಪಾರ್ವತಿ ಹವನ, ನಾಗಪೂಜೆ, ಬವನ, ಆಶ್ಲೇಷಾಬಲಿ, ಮಹಾಪೂಜೆ, ಅನ್ನಂಸಂತರ್ಪಣೆ, ಸಂಜೆ 5ರಿಂದ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ, 21ರಂದು ಬೆಳಗ್ಗೆ 6ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ, ಸಂಜೆ 5.30ಕ್ಕೆ ಶ್ರೀ ಭಾರತಿ ತೀರ್ಥ ಸ್ವಾಮೀಜಿ ಅವರಿಗೆ ಸ್ವಾಗತ, ಆಶೀರ್ವಚನ ನಡೆಯಲಿದೆ.
22ರಂದು ಬೆಳಗ್ಗೆ 5ರಿಂದ ಚಂಡಿಕಾಯಾಗ, 9.30ಕ್ಕೆ ಸ್ವಾಮೀಜಿಯಿಂದ ತೆಂಕುಗೋಪುರ ಉದ್ಘಾಟನೆ, ಗಣ್ಯರಿಗೆ ಸನ್ಮಾನ, ಆಶೀರ್ವಚನ ನಡೆಯಲಿದೆ. ಅಪರಾಹ್ನ 12ರಿಂದ ಸಹಸ್ರ ಚಂಡಿಕಾ ಯಾಗ ಪೂರ್ಣಾಹುತಿ, ಗೋದಾನ, ದಂಪತಿ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಆಡಳಿತ ಮೊಕ್ತೇಸರ ಆವಳಮಠ ವೆಂಕಟ್ರಾವ್ ಹಾಗೂ ಸಹಸ್ರ ಚಂಡಿಕಾ ಯಾಗ ಸಮಿತಿ ಅಧ್ಯಕ್ಷ ಮುರ್ವ ನಡುಮನೆ ಮಹಾಬಲ ಭಟ್ ಹೇಳಿಕೆ ತಿಳಿಸಿದೆ.