ಇಂದು ಬೃಹತ್ ರ್ಯಾಲಿ
ಮಂಗಳೂರು: ಮನೆ ನಿವೇಶನ, ಹಕ್ಕು ಪತ್ರ ಹಾಗೂ ಅಕ್ರಮ ಕೃಷಿ ಭೂಮಿ ಸಕ್ರಮ ಆಗ್ರಹಿಸಿ ಸಿಪಿಐ ದ.ಕ.ಜಿಲ್ಲಾ ಸಮಿತಿ ಆಶ್ರಯದಲ್ಲಿ ಫೆ.17ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ರ್ಯಾಲಿ, ಸಾರ್ವಜನಿಕ ಸಭೆ ನಡೆಯಲಿದೆ ಎಂದು ಮುಖಂಡ ಕೆ.ಆರ್.ಶ್ರೀಯಾನ್ ತಿಳಿಸಿದ್ದಾರೆ.
ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10ಕ್ಕೆ ಅಂಬೇಡ್ಕರ್ ವೃತ್ತದಿಂದ ನಿರಶನ ರಹಿತರ ಮೆರವಣಿಗೆ ಹೊರಡಲಿದ್ದು, 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಸಭೆ ಜರುಗಲಿದೆ. ಹಲವು ವರ್ಷದಿಂದ ನಿವೇಶನ ರಹಿತರು, ಅಕ್ರಮ ಕೃಷಿ ಭೂಮಿ ಸಾಗುವಳಿದಾರರು ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿ ಹಕ್ಕುಪತ್ರಕ್ಕೆ ಕಾದಿರುವ ಸಾವಿರಾರು ಬಡವರು ಪ್ರಾಂತ ರೈತ ಸಂಘ ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ಮಾಡುತ್ತಾ ಬಂದಿದ್ದಾರೆ. 2012ರಲ್ಲಿ ಬೆಂಗಳೂರಲ್ಲೂ ಹೋರಾಟ ನಡೆದಿತ್ತು. ಬಡವರಿಗೆ ಸ್ವಂತ ನಿವೇಶನ ಹೊಂದಲು ಅಸಾಧ್ಯವಾದರೆ, ಇನ್ನೊಂದೆಡೆ ಸರ್ಕಾರಿ ಭೂಮಿಯನ್ನು ಶ್ರೀಮಂತರಿಗೆ, ಖಾಸಗಿ ಬಂಡವಾಳಗಾರರಿಗೆ, ಬಹುರಾಷ್ಟ್ರೀಯ ಸಂಸ್ಥೆಗಳಿಗೆ ನೀಡುತ್ತಿದೆ. ಇದಕ್ಕಾಗಿಯೇ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗುತ್ತಿದೆ. ಕಳೆದ 16 ವರ್ಷದಿಂದ ಬಡವರಿಗೆ ಮನೆ ನಿವೇಶನ ನೀಡಿಲ್ಲ. ಹಕ್ಕು ಪತ್ರ ನೀಡದಿರುವುದರಿಂದ ಮನೆ ನಂಬರು, ವಿದ್ಯುತ್, ರೇಷನ್, ಗ್ಯಾಸ್ ಸೌಲಭ್ಯದಿಂದ ಬಡವರು ವಂಚಿತರಾಗಿದ್ದಾರೆ. ಸರ್ಕಾರದ ನಿರ್ಲಕ್ಷ ಕ್ರಮದ ವಿರುದ್ಧ ಈ ಹೋರಾಟ ನಡೆಯಲಿದೆ ಎಂದರು. ಮುಖಂಡರಾದ ಸುನೀಲ್ ಕುಮಾರ್, ವಸಂತ ಆಚಾರಿ ಇದ್ದರು.
ಎತ್ತಿನಹೊಳೆಗೆ ಅಡ್ಡಗೋಡೆ!: ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕೆ.ಆರ್.ಶ್ರೀಯಾನ್, ನೇತ್ರಾವತಿ ತಿರುವಿಗೆ ನಮ್ಮ ವಿರೋಧವಿದೆ ಎಂದು ಹೇಳಿದರು. ಆದರೆ ನಾಯಕ ಶ್ರೀರಾಮ ರೆಡ್ಡಿ ಎತ್ತಿನಹೊಳೆ ಯೋಜನೆಯನ್ನು ಪಕ್ಷ ಬೆಂಬಲಿಸಲಿದೆ ಎಂದಿದ್ದಾರಲ್ಲ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರಿಸದೆ ವೇದಿಕೆಯಲ್ಲಿದ್ದವರು ನುಣುಚಿಕೊಂಡರು.