ಬೀಚ್ಗೆ ಈಜಲು ಹೋದ ಇಬ್ಬರು ಸಮುದ್ರಪಾಲು
ಮಂಗಳೂರು: ಸುರತ್ಕಲ್ ಎನ್ಐಟಿಕೆ ಮಲ್ಲಮಾರ್ ಬೀಚ್ಗೆ ಹೋಗಿದ್ದ ಕುಳಾಯಿ ಗೋಕುಲನಗರ ನಿವಾಸಿಗಳಿಬ್ಬರು ತೆರೆಗೆ ನೀರು ಪಾಲಾದ ಘಟನೆ ಭಾನುವಾರ ಸಂಭವಿಸಿದೆ. ಶ್ರೀರಾಮ(22) ಮತ್ತು ಅಶ್ವಿನ್(24) ಸಮುದ್ರ ಪಾಲಾದ ನತದೃಷ್ಟರು. ಶ್ರೀರಾಮ ಖಾಸಗಿ ಮಾರುಕಟ್ಟೆ ಉದ್ಯೋಗಿ. ಅಶ್ವಿನಿ ಬೈಕಂಪಾಡಿಯಲ್ಲಿ ಜೆಸಿಬಿ ಘಟಕ ಹೊಂದಿದ್ದರು. ಇವರಿಬ್ಬರು ಸ್ನೇಹಿತ ಮುತ್ತುಲಿಂಗಂ ಜತೆ ಮಧ್ಯಾಹ್ನ ಬೀಚ್ಗೆ ತೆರಳಿದ್ದರು. ಕೆಲಹೊತ್ತಿನ ಬಳಿಕ ಮರಳಿನಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದರು. ನಂತರ ಶ್ರೀರಾಮ ಮತ್ತು ಅಶ್ವಿನ್ ಈಜಲು ನೀರಿಗೆ ಇಳಿದಿದ್ದರು. ಅಷ್ಟರಲ್ಲಿ ತೆರೆ ಅಪ್ಪಳಿಸಿ ಶ್ರೀರಾಮನನ್ನು ಸೆಳೆದಿತ್ತು. ಆತನನ್ನು ರಕ್ಷಿಸಲು ತೆರಳಿದ ಅಶ್ವಿನ್ ಕೂಡ ನೀರುಪಾಲಾದರು. ಸಂಜೆ ವೇಳೆಗೆ ಇಬ್ಬರ ಶವ ಬೀಚ್ ಕಿನಾರೆಯಲ್ಲಿ ಪತ್ತೆಯಾಗಿದೆ. ಘಟನೆ ಬಗ್ಗೆ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹಳೆ ಪ್ರಕರಣ: ಕೊಲೆ ಆರೋಪಿ ಸೆರೆ
ಮಂಗಳೂರು: ಹಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಸೋಮವಾರಪೇಟೆ ಸುಂಠಿಕೊಪ್ಪದ ಸೂರ್ಯ ಕುಮಾರ್ ಯಾನೆ ಸೂರಿ(35) ಎಂಬಾತನನ್ನು ನಗರ ಅಪರಾಧ ಪತ್ತೆದಳ ನೆರವಿನಲ್ಲಿ ಪಾಂಡೇಶ್ವರ ಪೊಲೀಸರು ಬಂಧಿಸಿದ ಬಗ್ಗೆ ಭಾನುವಾರ ವರದಿಯಾಗಿದೆ. ಮಂಗಳಾದೇವಿಯ ಮಂಕಿ ಸ್ಟ್ಯಾಂಡ್ ಬಳಿ ಶಸ್ತ್ರಾಸ್ತ್ರದೊಂದಿಗೆ ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿ ಪೊಲೀಸರನ್ನು ಕಂಡು ಓಟಕ್ಕಿತ್ತನು. ಆತನನ್ನು ಗಸ್ತು ನಿರತ ಸಿಸಿಬಿ ಇನ್ಸ್ಪೆಕ್ಟರ್ ವೆಲೆಂಟೈನ್ ಡಿಸೋಜ ಮತ್ತು ಬಂದರು ಇನ್ಸ್ಪೆಕ್ಟರ್ ದಿನಕರ ಶೆಟ್ಟಿ, ಸಿಬ್ಬಂದಿಗಳು ಬೆನ್ನಟ್ಟಿ ಹಿಡಿದರು. ಬಳಿಕ ಪ್ರಶ್ನಿಸಿದಾಗ, ಆತನ ಹಿಂದಿನ ಕೊಲೆ ಪ್ರಕರಣವೊಂದ ಆರೋಪಿಯಾಗಿದ್ದ ಎನ್ನುವುದು ಗೊತ್ತಾಗಿತ್ತು. ಆತನಿಂದ ಪಿಸ್ತೂಲ್ನ್ನು ವಶಪಡಿಸಲಾಗಿದೆ. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮೋ ಬ್ಯಾನರ್ಗೆ ಹಾನಿ
ಮೂಲ್ಕಿ: ಪಡುಪಣಂಬೂರು ಬಳಿ ರಾಷ್ಟ್ರೀಯ ಹೆದ್ದಾರಿ ಬದಿ ನಮೋ ಬ್ರಿಗೇಡ್ ಹಳೆಯಂಗಡಿ ಘಟಕ ವತಿಯಿಂದ ಹಾಕಲಾಗಿದ್ದ ನರೇಂದ್ರ ಮೋದಿ ಬೃಹತ್ ಬ್ಯಾನರನ್ನು ಕಿಡಿಗೇಡಿಗಳು ಹರಿದು ಹಾಕಿದ್ದು, ಈ ಬಗ್ಗೆ ಬಿಜೆಪಿಯ ನಮೋ ಬ್ರಿಗೇಡ್ ಕಾರ್ಯಕರ್ತರು ಮೂಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಗಾಯಾಳು ವ್ಯಕ್ತಿ ಸಾವು
ವಿಟ್ಲ: ಇತ್ತೀಚೆಗೆ ಕನ್ಯಾನಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಗೋಳಿಕಟ್ಟೆಯಲ್ಲಿ ಬೈಕ್ ಡಿಕ್ಕಿಯಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಕನ್ಯಾನ ಗ್ರಾಮದ ಮರ್ತನಾಡಿ ನಿವಾಸಿ ಗುರುವ(65) ಎಂಬವರು ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮೃತಪಟ್ಟಿದ್ದಾರೆ. ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಗುಣಮುಖರಾಗಿ ಮನೆಗೆ ಆಗಮಿಸಿದ್ದರು. ಆದರೆ ಮತ್ತೆ ಗಾಯ ಉಲ್ಬಣಗೊಂಡು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ದೇರಳಕಟ್ಟೆಗೆ ಶುಕ್ರವಾರ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಶನಿವಾರ ಮೃತರಾದರು.
ಸೈಕಲ್ನಿಂದ ಬಿದ್ದಿದ್ದ ಬಾಲಕ ಸಾವು
ಬಂಟ್ವಾಳ: ಸೈಕಲ್ನಿಂದ ಬಿದ್ದು ಗಾಯಗೊಂಡಿದ್ದ ಬಾಲಕನೊಬ್ಬ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ನೇರಳಕಟ್ಟೆ ಸಮೀಪದ ಭಗವಂತಕೋಡಿ ನಿವಾಸಿ ಉಮ್ಮರ್ ಎಂಬವರ ಪುತ್ರ ಮೊಹಮ್ಮದ್ ಸಹಾಝ್ ಮೃತ ಬಾಲಕ. ನೇರಳಕಟ್ಟೆ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಸಹಾಝ್ ಶನಿವಾರ ಮಧ್ಯಾಹ್ನ ಮನೆಯಂಗಳದಲ್ಲಿ ಸೈಕಲ್ ಸವಾರಿ ಮಾಡುತ್ತಿದ್ದ ವೇಳೆ ಬಿದ್ದು ಕಿಬ್ಬೊಟ್ಟೆಗೆ ಸೈಕಲ್ ಹ್ಯಾಂಡಲ್ ಬಲವಾಗಿ ತಾಗಿತ್ತು. ಆದರೆ ಯಾವುದೇ ಗಾಯ ಕಂಡುಬಂದಿರಲಿಲ್ಲ. ಸಂಜೆ ವೇಳೆ ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸಲಹೆಯಂತೆ ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿದ್ದು, ರಾತ್ರಿ ವೇಳೆಗೆ ಆತನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸೂಚಿಸಿದ್ದರು. ತಕ್ಷಣ ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಭಾನುವಾರ ಬೆಳಗ್ಗೆ ಅಸುನೀಗಿದ್ದಾನೆ. ಭಾನುವಾರ ಸಂಜೆ ಕೊಡಾಜೆ ಮಸೀದಿಯಲ್ಲಿ ಬಾಲಕನ ಶವಸಂಸ್ಕಾರ ನಡೆಸಲಾಯಿತು. ಶಾಲೆ ಶಿಕ್ಷಕರು, ಮದ್ರಸ ಶಿಕ್ಷಕರು, ಸ್ನೇಹಿತರು ತೀವ್ರ ಸಂತಾಪ ಸೂಚಿಸಿದರು. ಬಾಲಕ ಸಹಾಝ್ನ ನಿಧನಕ್ಕೆ ಪುತ್ತೂರು ಖಾಸಗಿ ಆಸ್ಪತೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ಮೃತನ ಕುಟುಂಬಿಕರು, ಈ ಬಗ್ಗೆ ಕಾನೂನಿನ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.
ಬ್ಯಾಟರಿ ಕಳವು: ಮೂವರ ಬಂಧನ
ಉಪ್ಪಿನಂಗಡಿ: ಕಡಬ ಗ್ರಾ.ಪಂ. ವ್ಯಾಪ್ತಿಯ ಹಳೆ ಸ್ಟೇಷನ್ ಬಳಿ ಅಳವಡಿಸಲಾಗಿದ್ದ ಸೋಲಾರ್ ಬೀದಿ ದೀಪದ ಬ್ಯಾಟರಿ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕಡಬ ಪೊಲೀಸರು ಬಂಧಿಸಿದ್ದಾರೆ. ಕೊಂಬಾರು ಗ್ರಾಮದ ಕಿರಣ್ ಕುಮಾರ್ (23), ರಾಮಕುಂಜ ಮಿಯಾಳದ ಎಂ. ಪ್ರದೀಪ್ (25), ಕೋಡಿಂಬಾಳ ಗ್ರಾಮದ ಉಂಡಿಲ ಸತೀಶ (32) ಬಂಧಿತರು. 11 ಬ್ಯಾಟರಿ, ಒಂದು ಬೈಕ್ ಹಾಗೂ ಬ್ಯಾಟರಿ ಕಳವಿಗೆ ಬಳಸಿದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಔಷಧಿ ತರಲು ಹೋದ ಯುವತಿ ನಾಪತ್ತೆ
ಉಪ್ಪಿನಂಗಡಿ: ಔಷಧಿ ತರಲೆಂದು ವೈದ್ಯರಲ್ಲಿಗೆ ಹೋಗಿದ್ದ ಯುವತಿ ನಾಪತ್ತೆಯಾಗಿರುವ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಪುರೋಳಿ ಎಂಬಲ್ಲಿನ ನಿವಾಸಿ ಚೆನ್ನಪ್ಪ ಗೌಡ ಎಂಬವರ ಮಗಳಾದ ಕುಸುಮಾ ಪಿ (23) ಗುರುವಾರ ತನ್ನ ಕಿವಿ ನೋವಿಗೆ ಔಷಧಿ ತರಲೆಂದು ಉಪ್ಪಿನಂಗಡಿಯ ವೈದ್ಯರಲ್ಲಿ ಹೋಗಿ ಬರುತ್ತೇನೆಂದು ಹೋದಾಕೆ ಈ ತನಕ ವಾಪಸ್ ಬಂದಿಲ್ಲ ಎಂದು ಚೆನ್ನಪ್ಪ ಗೌಡ ದೂರಿನಲ್ಲಿ ತಿಳಿಸಿದ್ದಾರೆ. ಪಿಯುಸಿ ಹಾಗೂ ಐಟಿಐ ಶಿಕ್ಷಣ ಪಡೆದಿರುವ ಈಕೆಯ ಬಗ್ಗೆ ಮಾಹಿತಿ ಇದ್ದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆ (08251- 251055 ) ಸಂಪರ್ಕಿಸಲು ಕೋರಲಾಗಿದೆ.
ನಾಪತ್ತೆ ದೂರು
ಮಂಗಳೂರು: ನಗರದ ಆಕಾಶಭವನ ನಿವಾಸಿ ರೊನಾಲ್ಡ್ ವಿನಿಕ್ ಫೆರ್ನಾಂಡಿಸ್(39) ವಿದೇಶಕ್ಕೆಂದು ಹೋದಾತ ಮರಳಿ ಮನೆಗೆ ಬಂದಿಲ್ಲ ಎಂದು ಆತನ ತಾಯಿ ಮಾರ್ಗರೇಟ್ ಫೆರ್ನಾಂಡಿಸ್ ಕಾವೂರು ಪೊಲೀಸರಿಗೆ ದೂರು ನೀಡಿದ್ದಾರೆ. 2011 ಜೂ.28ರಂದು ವಿದೇಶಕ್ಕೆ ಉದ್ಯೋಗಕ್ಕೆಂದು ಪಾಸ್ಪೋರ್ಟ್ ಪಡೆಯಲು ಬೆಂಗಳೂರಿಗೆ ಹೋದಾತ ಈವರೆಗೆ ಮರಳಿ ಬಂದಿಲ್ಲ. ನಂತರ ಆತ ಸಂಪರ್ಕಕ್ಕೂ ಸಿಗಲಿಲ್ಲ, ಆತ ಎಲ್ಲಿದ್ದಾನೆ ಎಂದು ಗೊತ್ತಿಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮಿಯ್ಯಾರು: ಕಾಡಿಗೆ ಮರಳಿದ ಸಲಗ
ಉಪ್ಪಿನಂಗಡಿ: ಕೊಕ್ಕಡ- ಅರಸಿನಮಕ್ಕಿ ರಸ್ತೆಯಲ್ಲಿ ಶನಿವಾರ ಕಾಣಿಸಿಕೊಂಡು ಜನತೆಯಲ್ಲಿ ಭೀತಿ ಮೂಡಿಸಿದ್ದ ಒಂಟಿ ಸಲಗ ಭಾನುವಾರ ಮಿಯ್ಯಾರು ಕಾಡಿನತ್ತ ಸಾಗಿದೆ. ಕಳೆದ ಮೂರು ವರ್ಷಗಳಿಂದ ಈ ಆನೆಯ ಸಂಚಾರವನ್ನು ಅರಣ್ಯ ಇಲಾಖೆ ಸಿಬ್ಬಂದಿ ಗಮನಿಸುತ್ತಿದ್ದಾರೆ. ಎಂದಿನಂತೆ ತನ್ನ ನಿಖರ ಪಥದಲ್ಲಿ ಸಂಚರಿಸುತ್ತಿದ್ದ ಈ ಆನೆಯನ್ನು ಸುಬ್ರಹ್ಮಣ್ಯ ಬಳಿ ಜನತೆ ಓಡಿಸಲು ಯತ್ನಿಸಿದ ಹಿನ್ನೆಲೆಯಲ್ಲಿ ಬೆದರಿ ಕಂಡ ಕಂಡಲ್ಲಿಗೆ ಆನೆ ಸಂಚರಿಸಿತ್ತು.
ತೊಂದರೆ ನೀಡದ ಆನೆ: ಈ ಬಾರಿಯೂ ಈ ಆನೆ ತನ್ನ ಹಸಿವು ನೀಗಲು ತೋಟಗಳಿಗೆ ನುಗ್ಗಿ ಎಷ್ಟು ಬೇಕೋ ಅಷ್ಟನ್ನು ತಿನ್ನುತ್ತಿತ್ತೇ ವಿನಾ ಮನ ಬಂದಂತೆ ಬೆಳೆ ಹಾನಿಗೊಳಿಸಿಲ್ಲ. ಬಾಯಾರಿದಾಗ ನೀರು ಕುಡಿಯಲು ಜನ ವಸತಿ ಪ್ರದೇಶದಲ್ಲಿನ ನೀರಿನ ನೆಲೆಗಳತ್ತ ಸಾಗುತ್ತಿತ್ತೇ ವಿನಾ ಬೇರಾವ ತೊಂದರೆಯನ್ನೂ ಮೂಡಿಸಿಲ್ಲ ಎಂದು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಹರ್ಷ ತಿಳಿಸಿದ್ದಾರೆ.