ಮೇನಿಂದ ಎರಡು ಜಿಲ್ಲೆಗೆ ಪಿಆರ್ ಕಾರ್ಡ್ ಕಡ್ಡಾಯ
ಮಂಗಳೂರು: ನಗರ ಪ್ರದೇಶದಲ್ಲಿ ಆಸ್ತಿ ಸರ್ವೇ ಕಾರ್ಯ ನಡೆಸಿ ಪ್ರಾಪರ್ಟಿ ಕಾರ್ಡ್ ನೀಡಲು ಸರ್ಕಾರ ಮುಂದಾಗಿರುವುದರಿಂದ ಇನ್ನು ಮುಂದೆ ಆರ್ಟಿಸಿ (ಪಹಣಿ ಪತ್ರ) ಹಂತ ಹಂತವಾಗಿ ತೆರೆ ಮರೆಗೆ ಸರಿಯಲಿದೆ.
ರಾಜ್ಯದ ಶಿವಮೊಗ್ಗ ಮತ್ತು ಮೈಸೂರು ನಗರದಲ್ಲಿ ಈಗಾಗಲೇ ಆಸ್ತಿ ಸರ್ವೇ ಕಾರ್ಯ ಶೇ.90 ಪೂರ್ಣಗೊಂಡಿದೆ. ಇಲ್ಲಿ ಮೇ ತಿಂಗಳಿಂದ ಪ್ರಾಪರ್ಟಿ ರೆಕಾರ್ಡ್ ಕಾರ್ಡ್(ಪಿಆರ್ ಕಾರ್ಡ್) ಕಡ್ಡಾಯವಾಗಲಿದೆ. ಮುಖ್ಯವಾಗಿ ಭೂಪರಿವರ್ತನೆ ಅಲ್ಲದೆ ಆರ್ಟಿಸಿ ಬದಲು ಎಲ್ಲ ಕಂದಾಯ ಕೆಲಸಗಳಿಗೆ ಪಿಆರ್ ಕಾರ್ಡ್ ಬಳಕೆಯಾಗಲಿದೆ.
'ನಗರ ಪ್ರದೇಶದಲ್ಲಿ ಕೃಷಿ ಭೂಮಿ ಕಡಿಮೆ. ಹಾಗಾಗಿ ಪಿಆರ್ ಕಾರ್ಡ್ನ್ನು ಸುಲಭವಾಗಿ ಬಳಸಬಹುದು. ಕೃಷಿ ಭೂಮಿ ಇರುವಲ್ಲಿ ಭೂಪರಿವರ್ತನೆ ಮಾಡಿಸುವ ಬಗ್ಗೆ ಸರ್ಕಾರ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ. ಆರ್ಟಿಸಿ ರದ್ದು ಮಾಡಿದರೆ ಹಿಡುವಳಿದಾರರಿಗೆ ತೊಂದರೆಯಾಗಬಾರದು. ಈ ನಿಟ್ಟಿನಲ್ಲಿ ಏನೇನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಈಗಾಗಲೇ ಚರ್ಚೆ ನಡೆಸಲಾಗಿದೆ' ಎನ್ನುತ್ತಾರೆ ಪ್ರಾಪರ್ಟಿ ರೆಕಾರ್ಡ್ ಸರ್ವೇ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅಧಿಕಾರಿ ರುದ್ರೇಶ್.
ಶೇ.10 ಬಾಕಿ: ಶಿವಮೊಗ್ಗದಲ್ಲಿ 80 ಸಾವಿರ ಆಸ್ತಿ ಪೈಕಿ 70 ಸಾವಿರ ಆಸ್ತಿ ಸರ್ವೇ ಕಾರ್ಯ ಪೂರ್ತಿಯಾಗಿ ಕಾರ್ಡ್ ವಿತರಿಸಲಾಗಿದೆ. ಮೈಸೂರಿನಲ್ಲಿ 3 ಲಕ್ಷ ಆಸ್ತಿಯಲ್ಲಿ 2.60 ಲಕ್ಷ ಆಸ್ತಿಗೆ ಕಾರ್ಡ್ ನೀಡಲಾಗಿದೆ. ಮಂಗಳೂರಿನಲ್ಲಿ 4 ಸಾವಿರ ಆಸ್ತಿಗೆ ಕಾರ್ಡ್ ಕೊಡಲಾಗಿದೆ. ಪ್ರಥಮ ಹಂತದಲ್ಲಿ ಶಿವಮೊಗ್ಗ ಮತ್ತು ಮೈಸೂರು ನಗರದಲ್ಲಿ ಪಿಆರ್ ಕಾರ್ಡ್ ಮೇ ತಿಂಗಳಿಂದ ಕಡ್ಡಾಯಗೊಳಿಸಲು ಅನುಮತಿ ಕೋರಿ ಸರ್ಕಾರಕ್ಕೆ ಭೂದಾಖಲೆಗಳ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ.
ಆರ್ಟಿಸಿಗೆ ಗೇಟ್ಪಾಸ್: ಖಾತಾ ಬದಲಾವಣೆ, ಭೂಪರಿವರ್ತನೆ, ಲೀಸ್, ಮೋರ್ಗೇಜ್, ಬ್ಯಾಂಕ್ ಸಾಲಕ್ಕೆ ಆರ್ಟಿಸಿ ಬೇಕೇ ಬೇಕು. ಆದರೆ ಪಿಆರ್ ಕಾರ್ಡ್ ಕಡ್ಡಾಯಗೊಳಿಸಿದ ನಂತರ ಆರ್ಟಿಸಿ ನಗರ ಪ್ರದೇಶದಲ್ಲಿ ಇರುವುದಿಲ್ಲ. ಆರ್ಟಿಸಿ ಬದಲು ಪಿಆರ್ ಕಾರ್ಡ್ ಎಲ್ಲ ವ್ಯವಹಾರಕ್ಕೂ ಬಳಕೆಯಾಗಲಿದೆ. ಈ ಕುರಿತು ಸರ್ಕಾರ ಅಧಿಕೃತ ಆದೇಶ ಹೊರಡಿಸಲು ಮಾತ್ರ ಬಾಕಿ.
ಪಿಆರ್ ಕಾರ್ಡ್ ನೀಡುವ ಮೊದಲು ಸರ್ವೇಯಲ್ಲಿ ದಾಖಲಿಸಿದ ವಿವರಗಳು ಸರಿಯಾಗಿದೆಯೇ ಎಂದು ಭೂದಾಖಲೆಗಳ ಇಲಾಖೆ ಅಧಿಕಾರಿಗಳು ಅಡ್ಡ ಪರಿಶೀಲನೆ ನಡೆಸುತ್ತಾರೆ. ಖಾತಾದಾರರು ಒದಗಿಸಿರುವ ಮಾಹಿತಿ ಸರಿಯಾಗಿಲ್ಲದಿದ್ದರೆ, ಸರ್ಕಾರಿ ಜಮೀನು ಒತ್ತುವರಿ ಕಂಡುಬಂದರೆ ಆಸ್ತಿ ದಾಖಲೆಯನ್ನು ಅಧಿಕೃತ ಎನ್ನಲಾಗದು. ಅದಕ್ಕಾಗಿ ಅಡ್ಡ ಪರಿಶೀಲನೆಗೆ ಮತ್ತೆ ಸ್ಥಳ ಭೇಟಿ ನೀಡುತ್ತಾರೆ ಅಧಿಕಾರಿಗಳು. ಪಿಆರ್ ಕಾರ್ಡ್ನ್ನು ಆರ್ಟಿಸಿ ಕೇಂದ್ರಗಳಲ್ಲಿ ನೀಡುವುದಿಲ್ಲ. ನಗರ ಸರ್ವೇ ಕಚೇರಿಯಲ್ಲಿ ಕೊಡುತ್ತಾರೆ.
ಆತ್ಮಭೂಷಣ್