ಎತ್ತಿನಹೊಳೆ ಜಾರಿಯಾದ್ರೆ ಕಿರು ಜಲವಿದ್ಯುತ್ ಕಂಟಕ
ಮಂಗಳೂರು: ಎತ್ತಿನಹೊಳೆ ಯೋಜನೆ ಜಾರಿಗೊಳಿಸುವ ಮೂಲಕ ತಾನು ಜಾರಿಗೊಳಿಸಿದ ಕಿರು ಜಲವಿದ್ಯುತ್ ಯೋಜನೆಯ ಕತ್ತನ್ನೇ ಹಿಸುಕುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ.
ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಮುತುವರ್ಜಿಯ ಎತ್ತಿನಹೊಳೆ ಯೋಜನೆಗೆ ರಾಜ್ಯ ಸಚಿವ ಸಂಪುಟವೂ ಒಪ್ಪಿಗೆ ನೀಡಿರುವುದರಿಂದ ಇನ್ನು ಶಿಲಾನ್ಯಾಸವಷ್ಟೆ ಬಾಕಿ. ಇದು ಜಾರಿಗೊಂಡರೆ ಪಶ್ಚಿಮ ಘಟ್ಟದ ಕೆಳಭಾಗದಲ್ಲಿ ಹರಿಯುವ ನೇತ್ರಾವತಿ, ಕುಮಾರಧಾರ ನದಿ ಹರಿವಿನ ಪ್ರದೇಶದಲ್ಲಿರುವ ಕಿರು ಜಲವಿದ್ಯುತ್ ಯೋಜನೆಗಳಿಗೆ ಕಂಟಕ ಎದುರಾಗಲಿದೆ.
ಮೂರೇ ತಿಂಗಳು ಉತ್ಪಾದನೆ: ಪ್ರಸ್ತುತ ಇಲ್ಲಿ ಕಿರು ಜಲವಿದ್ಯುತ್ ಯೋಜನೆಗಳು ವರ್ಷದಲ್ಲಿ ಆರು ತಿಂಗಳು ವಿದ್ಯುತ್ ಉತ್ಪಾದನೆಗೆ ರಾಜ್ಯ ಸರ್ಕಾರದ ಅನುಮತಿ ಪಡೆದುಕೊಂಡಿವೆ. ಆದರೆ ವಾಸ್ತವದಲ್ಲಿ ವಿದ್ಯುತ್ ಉತ್ಪಾದನೆಗೆ ಸಿಗುವ ಸಮಯ ಜೂನ್ನಿಂದ ಆಗಸ್ಟ್ವರೆಗೆ ಮೂರೇ ತಿಂಗಳು. ಹೆಚ್ಚು ಮಳೆ ಬಂದರೆ ಮಾತ್ರ ಸೆಪ್ಟೆಂಬರ್ನಲ್ಲಿ ಉತ್ಪಾದನೆ ಸಾಧ್ಯ. ಇನ್ನು ಎತ್ತಿನಹೊಳೆ ಜಾರಿಯಾದರೆ ಮತ್ತೆ ಅಷ್ಟೂ ನೀರು ಸಿಗದು. ಹಾಗಾಗಿ ಲಕ್ಷಾಂತರ ವೆಚ್ಚದಲ್ಲಿ ಜಲವಿದ್ಯುತ್ ಸ್ಥಾವರ ಸ್ಥಾಪಿಸಿ ವ್ಯರ್ಥವಾಗಿ ಹಣ ನೀರುಪಾಲಾಗುವ ಭೀತಿ ಎದುರಾಗಿದೆ.
'ವಿದ್ಯುತ್ ಕೊರತೆ ನಿಭಾಯಿಸಲು ಒಂದೆಡೆ ಕಿರು ಜಲವಿದ್ಯುತ್ ಯೋಜನೆ ಸ್ಥಾಪನೆಗೆ ಆದ್ಯತೆ ನೀಡುತ್ತಿರುವ ಸರ್ಕಾರ, ಇನ್ನೊಂದೆಡೆ ಎತ್ತಿನಹೊಳೆ ಯೋಜನೆ ಜಾರಿಗೊಳಿಸಿ ಕಿರು ಜಲವಿದ್ಯುತ್ಗೂ ನೀರಿನ ತತ್ವಾರ ಮಾಡುತ್ತಿದೆ. ಸುಮಾರು 26ಕ್ಕೂ ಅಧಿಕ ಕಂಪನಿಗಳು ಕಿರು ಜಲವಿದ್ಯುತ್ ಯೋಜನೆಗೆ ಅನುಮತಿ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿವೆ.
ಈಗಲೇ ಇರುವ ಜಲವಿದ್ಯುತ್ ಸ್ಥಾವರಗಳಿಗೆ ನೀರಿನ ಕೊರತೆ ಇದೆ. ಇನ್ನು ಹೊಸ ಸ್ಥಾವರಕ್ಕೆ ಅನುಮತಿ ನೀಡಿದರೆ ಕೆಳಪ್ರದೇಶದ ಜನರಿಗೆ ಮತ್ತಷ್ಟು ನೀರಿನ ಕೊರತೆ ಉಂಟಾಗಲಿದೆ. ಹಣದ ಹಿಂದೆ ಹೋಗುವ ಸರ್ಕಾರಕ್ಕೆ ಸಾಮಾನ್ಯರ ಬಗೆಗಿನ ನೈಜ ಕಾಳಜಿ ಏನು ಎಂಬುದು ಅರ್ಥವಾಗುತ್ತಿಲ್ಲ' ಎನ್ನುತ್ತಾರೆ ಪರಿಸರ ಹೋರಾಟಗಾರ ದಿನೇಶ್ ಹೊಳ್ಳ.
'ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹೆಚ್ಚಿನ ಮಳೆಯಾದರೆ ಮಾತ್ರ ಜನರೇಟರ್ ತಿರುಗುತ್ತದೆ. ಇಲ್ಲದಿದ್ದರೆ ವಿದ್ಯುತ್ ಉತ್ಪಾದನೆ ಸಾಧ್ಯವಾಗುವುದಿಲ್ಲ. ಜೂನ್ನಲ್ಲಿ ಮಳೆ ವಿಳಂಬವಾದರೆ ಸಾಕಷ್ಟು ನೀರು ಸಂಗ್ರಹವಾದ ಬಳಿಕವೇ ವಿದ್ಯುತ್ ಉತ್ಪಾದಿಸುತ್ತೇವೆ. ಹಾಗಾಗಿ ಘಟ್ಟದಿಂದ ಬರುವ ನೀರು ಕಡಿಮೆಯಾದರೆ ಮುಂದೆ ಹೇಗೆ ವಿದ್ಯುತ್ ಉತ್ಪಾದಿಸಬೇಕು ಎಂಬುದು ಗೊತ್ತಾಗುತ್ತಿಲ್ಲ' ಎನ್ನುತ್ತಾರೆ ವಿದ್ಯುತ್ ಕಂಪನಿಯ ಸಿಬ್ಬಂದಿಯೊಬ್ಬರು.
8 ಜಲವಿದ್ಯುತ್ ಕಂಪನಿ: ಬಂಟ್ವಾಳ ಶಂಭೂರಿನಿಂದ ಗುಂಡ್ಯ ವರೆಗೆ 8 ಕಿರು ಜಲವಿದ್ಯುತ್ ಯೋಜನೆ ಇದೆ. ಇದರಲ್ಲಿ 6 ಕಂಪನಿಗಳು ವಿದ್ಯುತ್ ಉತ್ಪಾದಿಸುತ್ತಿವೆ. ಕುಮಾರಧಾರಾ ಮತ್ತು ಕುಕ್ಕೆ ಕಂಪನಿ ವಿದ್ಯುತ್ ಉತ್ಪಾದನೆ ಶುರು ಮಾಡಿಲ್ಲ.
ಶಂಭೂರಿನಲ್ಲಿ ಎಎಂಆರ್ ಮತ್ತು ರಿತ್ವಿಕ್ ತಲಾ ರು. 24.75 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತವೆ. ಉಪ್ಪಿನಂಗಡಿ ಬಳಿ ನೀರಕಟ್ಟೆಯಲ್ಲಿ 15 ಮೆಗಾವ್ಯಾಟ್, ನಿಡ್ಲೆಯಲ್ಲಿ ಭರೂಕ್ ಸಾಗರ್ ಪ್ರಾಜೆಕ್ಟ್ 13 ಮೆಗಾವ್ಯಾಟ್ ನೇತ್ರಾವತಿ ನದಿಯಲ್ಲಿ ವಿದ್ಯುತ್ ಉತ್ಪಾದಿಸುತ್ತಿವೆ. ಸಹಸ್ರಲಿಂಗೇಶ್ವರ ಪ್ರಾಜೆಕ್ಟ್ 12.50 ಮೆಗಾವ್ಯಾಟ್, ದಿಶಾ 18 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಕುಮಾರಧಾರ ನದಿ ಬಳಸುತ್ತಿದೆ.
ಮುಂದಕ್ಕೆ ಗುಂಡ್ಯದಲ್ಲಿ 2, ಕೆಂಪು ಹೊಳೆ, ಎತ್ತಿನಹೊಳೆಯಲ್ಲಿ ತಲಾ ಒಂದು ಕಿರು ಜಲವಿದ್ಯುತ್ ಸ್ಥಾವರಗಳಿವೆ. ಗುಂಡ್ಯದಲ್ಲಿ ಮೂರನೇ ಜಲವಿದ್ಯುತ್ ಯೋಜನೆ ಜಾರಿಗೆ ಸಿದ್ಧತೆ ನಡೆಯುತ್ತಿದೆ ಎನ್ನುತ್ತಾರೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು.
ಆತ್ಮಭೂಷಣ್