ಗೋಳ್ತಮಜಲು ದೇವಾಲಯ ನೂತನ ಸಮಿತಿ ಅಧಿಕೃತ: ಹೈಕೋರ್ಟ್ ಆದೇಶ
ಬಂಟ್ವಾಳ: ಗೋಳ್ತಮಜಲು ಗ್ರಾಮದ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಗೌರವ ಅಧ್ಯಕ್ಷತೆಯ ನೂತನ ಜೀರ್ಣೋದ್ಧಾರ ಸಮಿತಿಯೇ ಅಧಿಕೃತ ಎಂದು ರಾಜ್ಯ ಉಚ್ಚ ನ್ಯಾಯಾಲಯ ತೀರ್ಪು ನೀಡಿದ್ದು, ಜೀರ್ಣೋದ್ಧಾರ ಕೆಲಸಗಳನ್ನು ಮುಂದುವರಿಸಲು ಆದೇಶ ನೀಡಿದೆ. ಇದು ನ್ಯಾಯಕ್ಕೆ ಸಂದ ಜಯ ಎಂದು ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಬರಿಮಾರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಪ್ರಭಾಕರ ಭಟ್ ಕಲ್ಲಡ್ಕ ಗೌರವ ಅಧ್ಯಕ್ಷತೆಯಲ್ಲಿದ್ದ ಹಿಂದಿನ ಸಮಿತಿಯ ಅವಧಿ ಮುಗಿದ ಕಾರಣ ಅದು ಅಸ್ತಿತ್ವ ಕಳೆದುಕೊಂಡಿದೆ. ನೂತನ ಸಮಿತಿಯ ಕಾರ್ಯ ಕಲಾಪ ಮುಂದುವರಿಸಲು ಕೋರ್ಟ್ ಆದೇಶ ನೀಡಿದೆ ಎಂದು ತಿಳಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಸುರೇಶ್ ನಿಟಿಲಾಪುರ, ಉಪಾಧ್ಯಕ್ಷರಾದ ಕೆ.ಪದ್ಮನಾಭ ರೈ, ಚಂದ್ರಪ್ರಕಾಶ್ ಶೆಟ್ಟಿ, ಜಗನ್ನಾಥ ಚೌಟ, ಕಾರ್ಯದರ್ಶಿ ಬಟ್ಯಪ್ಪ ಶೆಟ್ಟಿ, ಗಣೇಶ ಶೆಟ್ಟಿ ಗೋಳ್ತಮಜಲು ಇದ್ದರು.