ಮಕ್ಕಳು ಕಾಣೆಯಾದರೆ ದೇಶ ಸಂಪತ್ತು ಸೂರೆಯಾದಂತೆ
ಮಂಗಳೂರು: ಮಕ್ಕಳನ್ನು ಕಳೆದುಕೊಂಡು ಕಂಗಾಲಾಗಿ ದೂರು ನೀಡಲು ಬರುವ ಹೆತ್ತವರ ಬಳಿ ಮಾನವೀಯತೆಯಿಂದ ಸ್ಪಂದಿಸುವಂತೆ ಹಿರಿಯ ನ್ಯಾಯಾಧೀಶ, ಬಾಲ ನ್ಯಾಯಮಂಡಳಿ ಅಧ್ಯಕ್ಷ ಪಾಟೀಲ್ ನಾಗಲಿಂಗನ ಗೌಡ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾಣೆಯಾದ ಮಕ್ಕಳ ಬ್ಯೂರೊ ಉದ್ಘಾಟಿಸಿ ಮಾತನಾಡಿದರು. ಮಕ್ಕಳು ದೇಶದ ಸಂಪತ್ತು. ಮಕ್ಕಳು ಕಳೆದುಹೋದರೆ ಸಂಪತ್ತು ಕಳೆದುಹೋದಂತೆ. ತಮ್ಮ ಮಕ್ಕಳು ಕಳೆದುಹೋದರೆ ಯಾವ ರೀತಿ ಹುಡುಕಾಟ ನಡೆಸುತ್ತಿರೋ ಅದೇ ರೀತಿ ಸ್ವಯಂ ಸೇವಾಸಂಸ್ಥೆಗಳು ಕಾರ್ಯಪ್ರವೃತ್ತವಾಗಬೇಕು ಎಂದು ಸಲಹೆ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಮಾತನಾಡಿ, ಬುದ್ಧಿವಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಣೆಯಾದ ಮಕ್ಕಳ ಸಂಖ್ಯೆ ಅಂಕಿ ಅಂಶಗಳನ್ನು ನೋಡಿದಾಗ ಉಳಿದೆಡೆ ಹೋಲಿಸಿದರೆ ತುಂಬಾ ಕಡಿಮೆ. ಆದರೆ ಕಾಣೆಯಾದ ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸಲು
ಪುತ್ತೂರಲ್ಲಿ 'ಕಾಣೆಯಾದ ಮಕ್ಕಳ ಬ್ಯೂರೋ' ತೆರೆಯುತ್ತಿರುವುದು ಸಂತೋಷ ವಿಚಾರ ಎಂದರು.
ಜಿಲ್ಲಾ ಮಕ್ಕಳ ರಕ್ಷಣೆ ಸಮಿತಿ ಅಧ್ಯಕ್ಷೆ ಆಶಾ ನಾಯಕ್ ಮಾತನಾಡಿ, ಕಳೆದುಹೋದ ಮಕ್ಕಳನ್ನು ಹುಡುಕಲು ಆಡಳಿತ ವ್ಯವಸ್ಥೆ ವಿಫಲವಾದ ಹಿನ್ನೆಲೆಯಲ್ಲಿ ಸ್ವಯಂಸೇವಾ ಸಂಸ್ಥೆಗಳು ಈ ಕೆಲಸ ಮಾಡುತ್ತಿದೆ. ಮಕ್ಕಳನ್ನು ಲೈಂಗಿಕ ಬಳಕೆಗೆ, ಭಿಕ್ಷಾಟನೆಗೆ ಬಳಸುವ ಜಾಲ ಸಕ್ರಿಯವಾಗಿದ್ದು, ದೇಶಕ್ಕಿದು ಶಾಪ ಎಂದರು. ಪುತ್ತೂರು ಬಿಷಪ್ ಡಾ. ಗೀವರ್ಗಿಸ್ಮಾರ್ ದಿವನ್ನಾಸಿಮೋಸ್, ಮಕ್ಕಳ ಬ್ಯೂರೋ ಮಾಹಿತಿ ನೀಡಿದರು. ಬ್ಯೂರೋ ರಾಜ್ಯ ಸಂಯೋಜನಾಧಿಕಾಗಿ ಬಿನುವರ್ಗಿಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ, ಮಕ್ಕಳ ಕಲ್ಯಾಣಾಧಿಕಾರಿ ಗರ್ಟ್ರೂಡ್ ವೇಗಸ್ ಇದ್ದರು.