ಸುದ್ದಿ ಸಂಕ್ಷೇಪ
ಬೈಕ್ ಡಿಕ್ಕಿ: ಮಹಿಳೆ ಸಾವು
ಮಲ್ಪೆ: ಇಲ್ಲಿನ ಕೊಡವೂರು ಗ್ರಾಮದ ಕಂಬಳಕಟ್ಟೆ ಎಂಬಲ್ಲಿ ಭಾನುವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮೃತರು ಗಿರಿಜಾ (64). ಅವರು ಸಂಜೆ 6.10 ಗಂಟೆಗೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಚಂದ್ರಶೇಖರ್ ಎಂಬವರು ಬೈಕ್ನಲ್ಲಿ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಬಂದು ಡಿಕ್ಕಿ ಹೊಡೆದ. ಪರಿಣಾಮ ಗಿರಿಜ ಅವರ ತಲೆಗೆ ಪೆಟ್ಟಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 11.45ಕ್ಕೆ ಮೃತಪಟ್ಟಿದ್ದಾರೆ. ಈ ಬಗ್ಗೆ ಅವರ ಮಗ ಯೋಗೀಂದ್ರ ನೀಡಿದ ದೂರಿನಂತೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರು ಯುವಕರ ಮೇಲೆ ತಂಡ ಹಲ್ಲೆ
ಕೋಟ: ಇಲ್ಲಿನ ಮಣೂರು ಗ್ರಾಮದ ಪಡುಕೆರೆ ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಮೈದಾನದಲ್ಲಿ ಕ್ರಿಕೆಟ್ ಆಟದ ಹಿನ್ನೆಲೆಯಲ್ಲಿ ಇಬ್ಬರು ಯುವಕರ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಘಟನೆ ಭಾನುವಾರ ರಾತ್ರಿನಡೆದಿದೆ. ಇಲ್ಲಿನ ವಾಹಿನಿ ಕ್ರಿಕೆಟರ್ಸ್ ವತಿಯಿಂದ ಸೋಮವಾರ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದ್ದು, ಮೈದಾನದಲ್ಲಿ ಸಿದ್ಧತೆಗಳನ್ನು ನಡೆಸಲಾಗಿತ್ತು. ಭಾನುವಾರ ರಾತ್ರಿ 12.15ಕ್ಕೆ ಪ್ರಶಾಂತ, ಪ್ರತಾಪ್ ತಿಂಗಳಾಯ, ಸುಧಾಕರ ಕುಂದರ್, ಸುರೇಶ ಕುಂದರ್ ಎಂಬವರು ಮೈದಾನಕ್ಕೆ ಬಂದು ಸುತ್ತಲೂ ಕಟ್ಟಿದ ಜಾಹಿರಾತಿನ ಬ್ಯಾನರ್ಗಳನ್ನು ಹರಿದರು ಎನ್ನಲಾಗಿದೆ. ಇದನ್ನು ನೋಡಿ ಆಯೋಜಕರಾದ ಮಣಿಕಂಠ ಮತ್ತು ಉದಯ ಪ್ರಶ್ನಿಸಿದ್ದು, ಈ ವೇಳೆ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ವಿಕೆಟ್ನಿಂದ ಹಲ್ಲೆ ಮಾಡಿದ್ದಲ್ಲದೆ, ಕುರ್ಚಿಗಳನ್ನು ಜಖಂಗೊಳಿಸಿದ್ದಾರೆ. ಆರೋಪಿ ಪ್ರಶಾಂತನನ್ನು ತಂಡಕ್ಕೆ ಸೇರಿಸಿಕೊಳ್ಳಲಿಲ್ಲ ಎನ್ನುವ ದ್ವೇಷದಿಂದ ಈ ಹಲ್ಲೆ ನಡೆಸಲಾಗಿದೆ ಎಂದು ಮಣಿಕಂಠ ನೀಡಿದ ದೂರಿನಂತೆ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾತಿನ ಚಕಮಕಿ
ಮೂಲ್ಕಿ: ಕಾಂಗ್ರೆಸ್ ಭದ್ರಕೋಟೆ ಕಿಲ್ಪಾಡಿ ಪಂಚಾಯಿತಿನ ಮೊಯಿಲೊಟ್ಟು ಪರಿಸರದಲ್ಲಿ ಬಿಜೆಪಿ ಕಾರ್ಯಕರ್ತರು ಬ್ಯಾನರ್ ಹಾಕಲು ಬಂದಾಗ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಭಾನುವಾರ ರಾತ್ರಿ ನಡೆದಿದೆ. ಮೊಯಿಲೊಟ್ಟು ಪರಿಸರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರಿಗೆ ಬ್ಯಾನರ್ ಹಾಕಲು ಅವಕಾಶ ನೀಡುವುದಿಲ್ಲವೆಂದು ಹೇಳುತ್ತಿದ್ದುದನ್ನು ಮನಗಂಡು ಸವಾಲಾಗಿ ಸ್ವೀಕರಿಸಿದ ಬಿಜೆಪಿ ಕಾರ್ಯಕರ್ತರು ಭಾನುವಾರ ರಾತ್ರಿ ನರೇಂದ್ರ ಮೋದಿ ಬೃಹತ್ ಬ್ಯಾನರ್ನ್ನು ಮೊಯಿಲೊಟ್ಟು ಜಂಕ್ಷನ್ನಲ್ಲಿ ಹಾಕಲು ಬಂದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಡೆಯೊಡ್ಡಿದ್ದಲ್ಲದೆ ಮಾತಿನ ಚಕಮಕಿ ಕೂಡ ನಡೆಯಿತು. ಪರಿಸ್ಥಿತಿ ಉದ್ನಿಗ ಸ್ಥಿತಿಗೆ ಹೋಗುವ ಸಂದರ್ಭ ಮೂಲ್ಕಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದಲ್ಲದೆ ಬಿಜೆಪಿಯವರಿಗೆ ಬೇರೆ ಜಾಗದಲ್ಲಿ ಬ್ಯಾನರ್ ಹಾಕಲು ಅವಕಾಶ ನೀಡುವ ಮೂಲಕ ವಿವಾದ ಅಂತ್ಯಗೊಂಡಿದೆ.
ಕೃತಕ ಅವಯವ
ಜೋಡಣೆಗೆ ಸಂಸದ ನಿಧಿ
ಮಂಗಳೂರು : ಸಂಸದ ನಳಿನ್ ಕುಮಾರ್ಕಟೀಲ್ ಅವರ ಸಂಸದರ ನಿಧಿಯಿಂದ ವಿಕಲಚೇತನ ಶಿವರಾಮ್ಗೆಕೃತಕ ಆವಯವ ಜೋಡಣೆಗೆ 2.25 ಲಕ್ಷ ಮಂಜೂರಾಗಿದೆ.
ಫಲಾನುಭವಿಗೆ ಸಂಸದ ನಳಿನ್ ಕುಮಾರ್ ಕಟೀಲ್ 1.12 ಲಕ್ಷದ ಚೆಕ್ ವಿತರಿಸಿದರು. 5 ವರ್ಷಗಳಲ್ಲಿ 1345 ಕೋಟಿ ಸಂಸದರ ನಿಧಿ ಮೂಲಕ ಜಿಲ್ಲೆಗೆ ಲಭಿಸಿದೆ. ಈಗ ಮಂಜೂರಾದ 19 ಕೋಟಿಯಲ್ಲಿ 16 ಕೋಟಿಬಿಡುಗಡೆಯಾಗಿ, ಕಾಮಗಾರಿ ಮುಗಿಯುವ ಹಂತದಲ್ಲಿದೆ. ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿಗಳ ನಿಧಿಯಿಂದ 6 ಕೋಟಿಗೆ ಹೆಚ್ಚಿನ ಹಣ ಜಿಲ್ಲೆಗೆ ಬಿಡುಗಡೆಯಾಗಿದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ದಯಾನಂದ್ ಇದ್ದರು.