ಐಟಿ, ಪ್ರವಾಸಿ ಕ್ಷೇತ್ರ, ಬಂದರುಗಳು ತಳಮಟ್ಟದಲ್ಲಿವೆ ಗೂಗಲ್, ಮೈಕ್ರೋಸಾಫ್ಟ್ ಇಲ್ಲೇ ಏಕಾಗಬಾರದು?
ಮಂಗಳೂರು: ಐಟಿ, ಬಿಟಿ, ಪ್ರವಾಸಿ, ಬಂದರು ಅಭಿವೃದ್ಧಿಯಲ್ಲಿ ಭಾರತ ತಳಮಟ್ಟದಲ್ಲಿದೆ, ಮೇಲ್ಮಟ್ಟದ ಚಿಂತನೆ ಯೋಜನೆಗಳಿಂದ ಮಾತ್ರ ದೇಶದ ಆರ್ಥಿಕ ವ್ಯವಸ್ಥೆ ಬಲಯುತಗೊಳ್ಳಲು ಸಾಧ್ಯ. ಯುವಜನರಿಗೆ ಪ್ರಾತಿನಿಧ್ಯ, ಅವಕಾಶ ನೀಡುವ ಮೂಲಕ ಯುವ ದೇಶ ವಿಶ್ವದಲ್ಲಿಯೇ ಮುಂಚೂಣಿಗೆ ಬರಲು ಸಾಧ್ಯ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದರು.
ಅಟಲ್ ಬಿಹಾರಿ ವಾಜಪೇಯಿ ಯೋಚಿಸಿದ 'ಸಾಗರ್ ಮಾಲಾ' ಯೋಜನೆಯಂತೆ ದೇಶದ ಎಲ್ಲ ಕರಾವಳಿ ಬಂದರುಗಳನ್ನು ಜೋಡಿಸಿ ಪ್ರಗತಿ ಹೊಸ ಕ್ರಾಂತಿ ಆಗುತ್ತಿತ್ತು. ಕೇವಲ ಬಂದರು ಅಭಿವೃದ್ಧಿ ಮಾತ್ರವಲ್ಲ ಪೂರಕ ವ್ಯವಸ್ಥೆಗಳನ್ನು ಯೋಜನಾಬದ್ಧವಾಗಿ ಅಭಿವೃದ್ಧಿ ಗೊಳಿಸಿದರೆ ಕಡಲ ತೀರ ಇರುವ ರಾಜ್ಯಗಳಿಗೆ ಹೊಸ ಹಣಕಾಸು ಬಲ ಬರುತ್ತದೆ.
ಕರ್ನಾಟಕದ ಮೀನುಗಾರರು ಮೀನು ಹುಡುಕುತ್ತಾ ದಿನಗಟ್ಟಲೆ ಕಾಯುವ ಸ್ಥಿತಿ ಇದೆ. ಆದರೆ ಗುಜರಾತ್‌ನಲ್ಲಿ ಮೀನುಗಾರರು ಉಪಗ್ರಹ ಆಧರಿಸಿ ಮೀನುಗಳು ಇರುವ ಜಾಗ ಸುಲಭದಲ್ಲಿ ತಿಳಿದು ಕಡಿಮೆ ಅವಧಿಯಲ್ಲಿ ಹೆಚ್ಚು ದುಡಿಯುತ್ತಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರ ನಗರೀಕರಣವನ್ನು ಸಮಸ್ಯೆ ಎಂದು ಭಾವಿಸಿದೆ. ನಗರೀಕರಣವನ್ನು ಅವಕಾಶ ಎಂದು ತಿಳಿದು, ಪ್ರಗತಿ ಯೋಜನೆ ಮಾಡಬೇಕು. ದೇಶದಲ್ಲಿ ಬಂದರು ನಗರ, ಕ್ರೀಡಾ ನಗರ ಇತ್ಯಾದಿ ಹೊಸ ನಗರಗಳನ್ನು ಸೃಷ್ಟಿಸಬೇಕು. ಈ ರೀತಿ ಮಾಡಲು ರಾಜ್ಯಕ್ಕೆ ಹೊಸ ಯೋಜನೆ ಕೊಟ್ಟು ಉತ್ತೇಜಿಸಬೇಕು. ನಗರ ಅಭಿವೃದ್ಧಿಯ ಹಳೆ ಪದ್ಧತಿಗೆ ಜೋತು ಬೀಳುವುದಲ್ಲ, ರಸ್ತೆ, ವಿಮಾನ ನಿಲ್ದಾಣ ಇತ್ಯಾದಿ ಸಾಲದು. ಮೂಲ ಸೌಕರ್ಯದ ವ್ಯಾಖ್ಯೆ ಬದಲಾಗಬೇಕು. ಆಧುನಿಕ ಮೂಲ ಸೌಕರ್ಯ ಮಾದರಿ ಇಟ್ಟುಕೊಂಡು ಬದುಕಿನ ಗುಣಮಟ್ಟದಲ್ಲಿ ಹೆಚ್ಚಳವಾಗಬೇಕು. ಅಪ್ಟಿಕಲ್ ಪೈಬರ್, ಗ್ಯಾಸ್ ಗ್ರೀಡ್ ಇತ್ಯಾದಿಗಳ ಕುರಿತೂ ಯೋಚನೆ ಮಾಡಬೇಕು.
ವಿದ್ಯುತ್ ಸಿಗುತ್ತಾ?: 24 ಗಂಟೆ ವಿದ್ಯುತ್ ಸಿಗುತ್ತದೆಯೇ ಎಂದು ಮೋದಿ ಜನರಲ್ಲಿ ಕೇಳಿದಾಗ ಇಲ್ಲ ಎಂಬ ಕೂಗು ಕೇಳಿ ಬಂತು. ಕತ್ತಲೆ ದೂರ ಮಾಡದೆ, ಬದುಕಿನಲ್ಲಿ ಬೆಳಕು ಹೇಗೆ ತೋರಿಸಿಯಾರು. ನಮ್ಮಲ್ಲಿ ಹೆಚ್ಚು ವಿದ್ಯುತ್ ಇದೆ, ಆದರೆ ಕರ್ನಾಟಕದವರಿಗೆ ಖರೀದಿಸುವ ಶಕ್ತಿ ಇಲ್ಲ. ಖರೀದಿಸುವಂತಿದ್ದರೂ ವಿದ್ಯುತ್ ಒಯ್ಯುವ ಟ್ರಾನ್ಸ್‌ಮಿಶನ್ ನೆಟ್‌ವರ್ಕ್ ಕೇಂದ್ರ ಸರ್ಕಾರ ಮಾಡಿಲ್ಲ ಎಂದು ಮೋದಿ ಟೀಕಿಸಿದರು.
ಗೂಗಲ್, ಮೈಕ್ರೋಸಾಫ್ಟ್ ನಮ್ಮಲ್ಲೇ ಯಾಕಾಗಬಾರದು?: ಐಟಿ ವಿಚಾರದಲ್ಲಿ ಬೆಂಗಳೂರು ವಿಶ್ವದಲ್ಲಿ ಮುಂಚೂಣಿಯಲ್ಲಿತ್ತು. ಇಲ್ಲಿನ ಯುವಕರು ತಮ್ಮ ಬೆರಳಲ್ಲಿ ವಿಶ್ವವನ್ನು ಕುಣಿಸುತ್ತಿದ್ದರು. ಆದರೆ ಈಗ ವಿಶ್ವದ ತುಲನೆಯಲ್ಲಿ ತಳಮಟ್ಟದಲ್ಲಿದ್ದೇವೆ. ಸೂಕ್ತ ಚಿಂತನೆ, ಸಂಶೋಧನೆ ಇಲ್ಲದೆ ಐಟಿ ವಿಭಾಗ ನಿಂತ ನೀರಾಗಿದೆ. ಭಾರತೀಯರು ಕೂಲಿ ಮಟ್ಟದಲ್ಲಿಯೇ ಇದ್ದಾರೆ. ತಳಮಟ್ಟದಿಂದ ಮೇಲ್ತುದಿಗೆ ಹೋಗಬೇಕು. ಗೂಗಲ್, ಮೈಕ್ರೋಸಾಫ್ಟ್ ನಮ್ಮ ದೇಶದಲ್ಲಿಯೇ ಯಾಕಾಗಬಾರದು. ಸಂಶೋಧನೆ ಅಭಿವೃದ್ಧಿ ನಮ್ಮ ಯುವಜನರಿಗೆ ಅವಕಾಶ ನೀಡಬೇಕು. ನಾವು ಐಟಿ, ಕಾಲ್‌ಸೆಂಟರ್, ಔಟ್‌ಸೋರ್ಸಿಂಗ್ ಮಾಡುತ್ತಿದ್ದರೆ ಈ ಕ್ಷೇತ್ರದಿಂದ ಮಾತ್ರವಲ್ಲ ಎಲ್ಲ ಕ್ಷೇತ್ರದಿಂದ ಹೋರ ಬೀಳಲಿದ್ದೇವೆ.
ನಿಮ್ಮ ಕನಸಿಗೆ ಜೀವ ತುಂಬುತ್ತೇನೆ, ಜೀವನ ಮಟ್ಟ ಸುಧಾರಣೆಗೆ ತಂತ್ರಜ್ಞಾನ ಬಳಸುವ ಮನಸ್ಸುಳ್ಳವ. ಐಟಿ, ಬಿಟಿ ಈಟಿ, ನ್ಯಾನೊ, ಜೆನೆಟಿಕ್ ವಿಜ್ಞಾನ ನಮ್ಮ ಜೀವನದಲ್ಲಿ ಅಚ್ಚೊತ್ತಲಿದೆ. ಯುವಜನತೆಗೆ ನಮ್ಮ ಪ್ರತಿ ಕ್ಷೇತ್ರದಲ್ಲಿ ನಾಯಕತ್ವ ನೀಡಲಾಗುತ್ತಿಲ್ಲ. ತಳಮಟ್ಟದ ಚಿಂತನೆಯಿಂದ ಮೇಲ್ಮಟ್ಟದ ಚಿಂತನೆಯತ್ತ ಹೋಗಬೇಕು. ಕಚ್ಚಾ ವಜ್ರ ವಿದೇಶದಿಂದ ಬರುತ್ತದೆ, ಅವುಗಳ ಕಟ್ಟಿಂಗ್ ಮತ್ತು ಪಾಲಿಶ್ ಮಾಡಿ ಕಳುಹಿಸುತ್ತೇವೆ. ನಾವು ಕೇವಲ ಕೂಲಿ ರಪ್ತು ಮಾಡುತ್ತೇವೆ. ಆದರೆ ಕೂಲಿ ಮತ್ತು ಕೌಶಲ ರಫ್ತು ಮಾಡಿದರೆ ಮಾತ್ರ ವಿಶ್ವ ಆರ್ಥಿಕತೆಯಲ್ಲಿ ಮುಂದೆ ಬರಬಹುದು. ವಿಶ್ವದ ಆಭರಣ ಸಹಿತ ಯಾವುದೇ ಮಾರುಕಟ್ಟೆಯಲ್ಲಿ ಉನ್ನತ ಸ್ಥಾನ ಪಡೆಯಬಹುದು.
ಹೈಕ್ಲಾಸ್ ಪ್ರವಾಸಿಗರು ಬೇಕು: ನಮ್ಮ ದೇಶಕ್ಕೆ ವಿದೇಶಿ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆ. ಅವರು ಕಡಿಮೆ ಖರ್ಚು ಮಾಡುವ ಬಡ ಪ್ರವಾಸಿಗರು. ರಿಕ್ಷಾದಲ್ಲಿಯೂ ಹೋಗಲು ಹಣ ಇಲ್ಲ, ಸೈಕಲ್‌ನಲ್ಲಿ ಬಂದು ಪ್ರವಾಸ ಮಾಡುತ್ತಾರೆ. ಇದರ ಬದಲು ಭಾರತ ಶ್ರೀಮಂತ ಪ್ರವಾಸಿಗರನ್ನು ತರುವ ಪ್ರಯತ್ನ ಮಾಡಬೇಕು. ಅವರನ್ನು ಆಕರ್ಷಿಸಲು ಪ್ರವಾಸಿ ಕ್ಷೇತ್ರವನ್ನು ಉನ್ನತ ಮಟ್ಟಕ್ಕೇರಿಸಬೇಕು.
ಹತ್ತಿ ಉತ್ಪಾದಕರಾದ ಭಾರತಕ್ಕೆ ಒಂದು ಕಾಲದಲ್ಲಿ ಜವುಳಿ ಕ್ಷೇತ್ರದಲ್ಲಿ ವಿಶ್ವದಲ್ಲಿ ಹೆಸರಿತ್ತು. ಆದರೆ ರೆಡಿಮೆಡ್ ಉಡುಪುಗಳಲ್ಲಿ ಸಣ್ಣ ಪುಟ್ಟ ದೇಶಗಳೇ ನಮ್ಮನ್ನು ಹಿಂದಿಕ್ಕಿ ಮುಂದೆ ಹೋಗಿವೆ. ನಮ್ಮ ಎಲ್ಲ ಚಿಂತನೆ ತಳಮಟ್ಟದಲ್ಲಿದೆ. ವಿಶ್ವ ಮಾರುಕಟ್ಟೆ ಗಮನದಲ್ಲಿರಿಸಿ ಮುಂದೆ ಹೋದರೆ ಜವುಳಿ, ಪ್ರವಾಸಿ ಕ್ಷೇತ್ರದಲ್ಲಿ ಮುಂಚೂಣಿಗೆ ಹೋಗಬಹುದು ಎಂದರು.
ಇಲ್ಲಿಯ ಬ್ಯಾಂಕ್, ಭರ್ತಿ ಮಾಡೋದು ಅಲ್ಲಿಯವರು!: ಮಂಗಳೂರಿನ ಜನರಲ್ಲಿ ಎಂಥಾ ಶಕ್ತಿ ಇದೆ, ಎಷ್ಟು ಬ್ಯಾಂಕ್ ನೀಡಿದ್ದಾರೆ. ನಮ್ಮ ಮತ್ತು ನಿಮ್ಮ ಸಂಬಂಧ ವಿಶಿಷ್ಟವಾದದ್ದು. ನೀವು ಬ್ಯಾಂಕ್ ಮಾಡುತ್ತೀರಿ, ನಾವು ಗುಜರಾತ್‌ನವರು ಖಾತೆ ತೆರೆದು ಬ್ಯಾಂಕ್ ಭರ್ತಿ ಮಾಡುತ್ತೇವೆ ಎಂದರು.