2 ಲಕ್ಷಕ್ಕೂ ಹೆಚ್ಚು ಮಂದಿ ಆಗಮನ ಚುನಾವಣೆ ಗೆಲ್ಲಲು ಪೂರಕ: ಬಿಜೆಪಿ
ಮಂಗಳೂರು: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸಮಾವೇಶಕ್ಕೆ 2 ಲಕ್ಷಕ್ಕೂ ಹೆಚ್ಚು ಮಂದಿ ಸೇರಿದ್ದು, ಲೋಕಸಭೆ ಚುನಾವಣೆಗೆ ಬಿಜೆಪಿಗೆ ಗುಣಾತ್ಮಕವಾಗಿ ಪರಿಣಿಸಿದೆ ಎಂದು ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ ನಾಯಕ್ ಹೇಳಿದರು.
ಎಲ್ಲ ಕಾರ್ಯಕರ್ತರಿಗೆ, ನಾಗರಿಕರಿಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಧನ್ಯವಾದ ಸಲ್ಲಿಸಿ, ಸಮಾವೇಶದಿಂದ ಾರಿಗಾದರೂ ಸಮಸ್ಯೆ ಆಗಿದ್ದರೆ ಕ್ಷಮಿಸಬೇಕು ಎಂದರು.
ಜಿಲ್ಲೆಯ ಎಂಟು ವಿಧಾನಸಭೆ ಕ್ಷೇತ್ರದಿಂದ ಜನ ಬಂದು ಶಿಸ್ತಿನಿಂದ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಇದು ಕಾಂಗ್ರೆಸ್ ಮುಕ್ತ ಭಾರತ ಬೇಕು ಎಂಬುದನ್ನು ಜನ ಬಯಸಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂದರು.
ಗುಜರಾತ್‌ನ ಅಧಿಕಾರಿಗಳು ಬಂದು ಕೇಂದ್ರ ಮೈದಾನ ವೀಕ್ಷಿಸಿ ಸಮಾವೇಶಕ್ಕೆ ಚಿಕ್ಕದಾಗುತ್ತದೆ ಎಂದು ಕಿವಿ ಮಾತು ಹೇಳಿದ್ದರು. ಆದರೆ ಮಂಗಳೂರಲ್ಲಿ ಇದಕ್ಕಿಂತ ದೊಡ್ಡ ಮೈದಾನ ಇಲ್ಲ. ಇನ್ನು ಮುಂದಾದರೂ ಇದಕ್ಕಿಂತ ದೊಡ್ಡ ಮೈದಾನವನ್ನು ನಿರ್ಮಿಸಲು ಮಹಾನಗರ ಪಾಲಿಕೆ ಮನ ಮಾಡಲಿ ಎಂದು ಸಲಹೆ ಮಾಡಿದರು.
ಬಿಜೆಪಿ ಅಡಕೆ ಬೆಳೆಗಾರರ ಸಮಸ್ಯೆ ಪರಿಹರಿಸುವ ಬಗ್ಗೆ ಚುನಾವಣೆ ಪ್ರಣಾಳಿಕೆಯಲ್ಲಿ ಸೇರಿಸುವ ಬಗ್ಗೆ ಪ್ರಯತ್ನ ನಡೆಯಲಿದೆ. ಎತ್ತಿನಹೊಳೆ ಯೋಜನೆಗೆ ಮುಖ್ಯಮಂತ್ರಿಯಾಗಿದ್ದ ವೇಳೆ ಡಿ.ವಿ.ಸದಾನಂದ ಗೌಡ ಅವರು ಮಂಜೂರು ನೀಡಿದ್ದರೂ ಇಲ್ಲಿನ ಜನರ ಅಭಿಪ್ರಾಯ ಪಡೆದ ಬಳಿಕವೇ ಜಾರಿ ಮಾಡುವುದಾಗಿ ಹೇಳಿದ್ದರು. ಪಕ್ಷ ನೇತ್ರಾವತಿ ನದಿ ತಿರುವು ಪರವಾಗಿಲ್ಲ. ಹೋರಾಟ ನಡೆಸುವವರಿಗೆ ನಮ್ಮ ಬೆಂಬಲ ಇದೆ. ಪಕ್ಷದವರೂ ಹೋರಾಟದಲ್ಲಿ ಭಾಗವಹಿಸಿದ್ದಾರೆ. ಈಗ ಕಾಂಗ್ರೆಸ್ ಸರ್ಕಾರ ಇದೆ, ಅವರು ಯೋಜನೆ ಜಾರಿ ಮಾಡುವ ಮುನ್ನ ಇಲ್ಲಿನ ಜನರ, ಜನಪ್ರತಿನಿಧಿಗಳ ಸಭೆ ಕರೆಯುವುದಾಗಿ ಹೇಳಿದ್ದಾರೆ ಎಂದು ಹೇಳಿದರು. ಸಂಸದ ನಳಿನ್‌ಕುಮಾರ್ ಕಟೀಲ್, ದೇವದಾಸ ಶೆಟ್ಟಿ, ಸತೀಶ್ ಪ್ರಭು, ಸಂಜಯಪ್ರಭು, ದಿವಾಕರ ಸಾಮಾನಿ ಇದ್ದರು.