ವಿದ್ಯಾರ್ಥಿಗಳಿಗೆ ನಟ ನಟಿಯರ ಬಗ್ಗೆಗೊತ್ತು, ರಾಷ್ಟ್ರ ನಾಯಕರ ಅರಿವಿಲ್ಲ
ಮಣಿಪಾಲ: ಇಂದಿನ ವಿದ್ಯಾರ್ಥಿಗಳಿಗೆ ಸಿನಿಮಾ ನಟ- ನಟಿಯರ ಬಗ್ಗೆ ತಿಳಿದಿರುವಷ್ಟು ಮಾಹಿತಿ ದೇಶಕ್ಕಾಗಿ ಹೋರಾಡಿದ ಮಹಾನ್ ನಾಯಕರ ಬಗ್ಗೆ ತಿಳಿದಿಲ್ಲ. ಇದಕ್ಕೆ ನಮ್ಮ ಇಂದಿನ ಶಿಕ್ಷಣ ಪದ್ಧತಿಯೂ ಕಾರಣವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಮಲ್ಪೆ ಆತಂಕ ವ್ಯಕ್ತಪಡಿಸಿದ್ದಾರೆ.
ಬುಧವಾರ ಇಲ್ಲಿನ 80ನೇ ಬಡಗುಬೆಟ್ಟು ಗ್ರಾಮದ ರಾಜೀವ ನಗರ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ದೇಶದ ಅಖಂಡತೆಯನ್ನು ರಕ್ಷಿಸುವುದಕ್ಕಾಗಿ ಸಣ್ಣ ವಯಸ್ಸಿನಲ್ಲಿಯೇ ಯುದ್ಧಗಳಲ್ಲಿ ಹೋರಾಡಿದ್ದ ಶಿವಾಜಿಗೆ ಅಂದು ದೇಶಪ್ರೇಮ ಮೂಡಿಸುವಂತಹ ಶಿಕ್ಷಣ ದೊರಕಿತ್ತು. ದೇಶವನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸಿಕೊಂಡು ಹೋಗಲು ಕೇವಲ ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ. ಈ ನೆಲೆಯಲ್ಲಿ ಶಿವಾಜಿಯಂತಹ ಮಹಾನ್ ನಾಯಕರ ಬಗ್ಗೆ ಪಠ್ಯಗಳಲ್ಲಿ ತಿಳಿಸಿಕೊಡುವ ವ್ಯವಸ್ಥೆಯಾಗಬೇಕು ಎಂದವರು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿ.ಪಂ. ಅಧ್ಯಕ್ಷ ಉಪೇಂದ್ರ ನಾಯಕ್, ದೇಶದಲ್ಲಿ ಅರಾಜಕತೆ ಇದ್ದ ಸಮಯದಲ್ಲಿ ಹುಟ್ಟಿದ ಶಿವಾಜಿಯು ದೇಶದ ಅಖಂಡತೆ, ಸಾರ್ವಭೌಮತೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು. ಅಂತಹ ನಾಯಕರು ಇಂದು ಮತ್ತೊಮ್ಮೆ ದೇಶಕ್ಕೆ ಬೇಕಾಗಿದ್ದಾರೆ ಎಂದರು.
80 ಬಡಗುಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಶ್ರೀದೇವಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾ.ಪಂ. ಅಧ್ಯಕ್ಷೆ ಗೌರಿ ಪೂಜಾರಿ, 80 ಬಡಗುಬೆಟ್ಟು ಗ್ರಾಮದ ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಪ್ರಕಾಶ್ ಪ್ರಭು, ಕರ್ನಾಟಕ ಕ್ಷತ್ರಿಯ ಮರಾಠ ಮಹಾ ಒಕ್ಕೂಟ ಉಡುಪಿ- ಮಂಗಳೂರು ರಾಜ್ಯಾಧ್ಯಕ್ಷ ದಿನೇಶ್ ಸಿ. ನಾಯ್ಕ್‌ಮೋರೆ, ಜಿಲ್ಲಾಧ್ಯಕ್ಷ ಆರ್.ಸಿ. ನಾಯ್ಕ್ ಮಾಧವ್, ಉಡುಪಿಯ ಕ್ಷತ್ರಿಯ ಮರಾಠ ಸಮಾಜ ಜಿಲ್ಲಾಧ್ಯಕ್ಷ ಗಿರೀಶ್ ರಾವ್, ಮರಾಠ ಸ್ವಾಭಿಮಾನ ಜಾಗೃತಿ ಪ್ರತಿಷ್ಠಾನ ಕಾರ್ಯದರ್ಶಿ ವಿಶ್ವನಾಥ ಕೆ. ಜಾದವ್, ಜಿ.ಪಂ. ಉಪಕಾರ್ಯದರ್ಶಿ ಪ್ರಾಣೇಶ್ ರಾವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಅಂಕುಶ್, ಉಡುಪಿ ತಹಸೀಲ್ದಾರ್ ಟಿ.ಜೆ. ಗುರುಪ್ರಸಾದ್, ರಾಜೇ ಛತ್ರಪತಿ ಶಿವಾಜಿ ಗೋಲ್ಡ್ ಆಂಡ್ ಸಿಲ್ವರ್ ರಿಫೈನರಿ ಎಸೋಸಿಯೇಷನ್ ಜಿಲ್ಲಾಧ್ಯಕ್ಷ ಸಮಾಧಾನ್ ಯಾದವ್ ಇದ್ದರು.
ಕನ್ನಡ ಸಂಸ್ಕೃತಿ ಇಲಾಖೆಯ ಪೂರ್ಣಿಮಾ ಸ್ವಾಗತಿಸಿದರು. ರವೀಂದ್ರ ಅಡ್ವೆ ನಿರೂಪಿಸಿದರು. ನಂತರ ಸುರಮಣಿ ಮಹಾಲಕ್ಷ್ಮಿ ಶೆಣೈ ಕಾರ್ಕಳ ಅವರಿಂದ ಕನ್ನಡ ಮತ್ತು ಮರಾಠಿ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.
ಶಿವಾಜಿ ಮಹಾರಾಜರ ಜಯಂತಿ ಆಚರಣೆಯ ಆಹ್ವಾನ ಪತ್ರಿಕೆಯಲ್ಲಿ ವಿವಿಧ ಜನಪ್ರತಿನಿಧಿಗಳ ಹೆಸರುಗಳು ಇದ್ದರೂ ಕೂಡ ಈ ಕಾರ್ಯಕ್ರಮಕ್ಕೆ ಪಾಲ್ಗೊಳ್ಳುವ ಆಸಕ್ತಿಯನ್ನು ಅವರು ತೋರಿಸಿಲ್ಲ. ಶಿವಾಜಿ ಕುರಿತು ಮಾತನಾಡಿದರೆ ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಯಲ್ಲಿ ಮತ ಕಳೆದುಕೊಳ್ಳುತ್ತೇವೆ ಎಂಬ ಭಯದಿಂದ ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದಾರೆಯೇ?
ಪ್ರಕಾಶ್ ಮಲ್ಪೆ
ಸಾಮಾಜಿಕ ಕಾರ್ಯಕರ್ತ.