23ರಂದು ಪಲ್ಸ್ ಪೋಲಿಯೋ ಲಸಿಕೆ ನೀಡಿಕೆ
ಮಂಗಳೂರು: ಪೋಲಿಯೋ ರೋಗ ನಿರ್ಮೂಲನ ಕಾರ್ಯಕ್ರಮದಡಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಎರಡನೇ ಸುತ್ತು ಫೆ.23ರಂದು ಬೆಳಗ್ಗೆ 8ರಿಂದ ಸಂಜೆ 5ರ ವರೆಗೆ ನಡೆಯಲಿದ್ದು, ದ.ಕ.ಜಿಲ್ಲೆಯಲ್ಲಿ ವಿಶೇಷವಾಗಿ ವಲಸೆ ಕಾರ್ಮಿಕರ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವುದಕ್ಕೆ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಎಸ್.ಶಿವಕುಮಾರ್ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 0-5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸುವುದು ಅತ್ಯಗತ್ಯ. ಅಲ್ಲದೆ ನಗರಕ್ಕೆ ಆಗಮಿಸುವ ಬೇರೆ ರಾಜ್ಯದ ಕಾರ್ಮಿಕರ ಮಕ್ಕಳಿಗೆ ಸಾರ್ವತ್ರಿಕ ಪೋಲಿಯೋ ಲಸಿಕೆ ಕಾರ್ಯಕ್ರಮ ಇಲ್ಲ.
ಆದ್ದರಿಂದ ನಗರ ಪ್ರದೇಶದಲ್ಲಿರುವ ಕಾರ್ಮಿಕ ಮಕ್ಕಳಿಗೆ ಲಸಿಕೆ ಹಾಕಲಾಗುತ್ತದೆ. ಫೆ.24ರಿಂದ 26ರ ವರೆಗೆ ನಗರದಲ್ಲಿ ಹಾಗೂ ಎರಡು ದಿನ ಕಾಲ ಗ್ರಾಮಾಂತರ ಪ್ರದೇಶದಲ್ಲಿ ಮನೆ ಮನೆಗೆ ಭೇಟಿ ನೀಡಿ ಲಸಿಕೆ ಹಾಕುತ್ತಾರೆ. ಮನೆ ಮನೆಗೆ ತೆರಳುವ ವೇಳೆ ಶ್ವಾನ ಕಚ್ಚಿ ತೊಂದರೆಗೀಡಾದ ಪ್ರಕರಣಗಳಲ್ಲಿ ಉಚಿತ ಚಿಕಿತ್ಸೆ ನೀಡುವಂತೆ ಆಯಾ ತಾಲೂಕಿನ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ 921 ಕೇಂದ್ರಗಳಲ್ಲಿ 1,68,336 ಮಕ್ಕಳಿಗೆ ಲಸಿಕೆ ಹಾಕಲಾಗುವುದು. ಇವರಲ್ಲಿ ಸುಮಾರು 1781 ವಲಸೆ ಕಾರ್ಮಿಕರ ಮಕ್ಕಳು. 14 ಸಂಚಾರಿ ತಂಡ ಹಾಗೂ 26 ಟ್ರಾನ್ಸಿಟ್ ಲಸಿಕಾ ಘಟಕ ರೂಪಿಸಲಾಗಿದೆ.
3824 ಲಸಿಕೆ ನೀಡುವವರು ಹಾಗೂ 191 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಮೊದಲನೇ ಸುತ್ತಿನಲ್ಲಿ 1,68,479 ಮಕ್ಕಳಿಗೆ ಲಸಿಕೆ ನೀಡಲಾಗಿದ್ದು, ಶೇ.ನೂರು ಸಾಧನೆ ಮಾಡಲಾಗಿತ್ತು. ಆಗ 964 ಕಾರ್ಮಿಕ ಮಕ್ಕಳಿಗೆ ಲಸಿಕೆ ಹಾಕಲಾಗಿತ್ತು.
ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ ಡಾ.ರುಕ್ಮಿಣಿ ಎಂ. ಇದ್ದರು.