ಕಾಂಗ್ರೆಸ್ ವಿರುದ್ಧ ಬಿಜೆಪಿ ವೃಥಾರೋಪ: ತಮ್ಮಯ್ಯ
ಮಡಿಕೇರಿ: ಕಾಂಗ್ರೆಸ್ ನೇತೃತ್ವದ ಸರ್ಕಾರದ ಕಳೆದ ಎಂಟು ತಿಂಗಳ ಅಧಿಕಾರದ ಅವಧಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿದ್ದರೂ ವೃಥಾರೋಪ ಮಾಡಿರುವ ಜಿಲ್ಲಾ ಬಿಜೆಪಿ ಅಧ್ಯಕ್ಷರು ತಮ್ಮ ಬೆನ್ನನ್ನೊಮ್ಮೆ ನೋಡಿಕೊಳ್ಳಲಿ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿ.ಎಸ್. ತಮ್ಮಯ್ಯ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ದಾಖಲೆಗಳನ್ನು ಬಿಡುಗಡೆಗೊಳಿಸಿದರು.
ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ದೂಷಿಸಿರುವ ಬಿಜೆಪಿಯ ಅಧಿಕಾರದ ಅವಧಿಯ ಸಾಧನೆಯೆಂದರೆ 1500 ಎಕರೆ ಜಾಗವನ್ನು ಅಕ್ರಮ ಸಕ್ರಮದಡಿ ತರಾತುರಿಯಿಂದ ನೀಡಿರುವುದೇ ಆಗಿದೆ ಎಂದೂ ತಮ್ಮಯ್ಯ ವ್ಯಂಗ್ಯವಾಡಿದರು.
ಪ್ರಭಾವಿ ಸ್ಥಾನದಲ್ಲಿದ್ದ ಈಗಿನ ಶಾಸಕ ಕೆ.ಜಿ. ಬೋಪಯ್ಯ ಅವರ ಕಾಲೂರಿಗೆ ಅಧಿಕಾರದ ಅವಧಿಯಲ್ಲಿ ಸಾಧ್ಯವಾಗದ ರಸ್ತೆ ಅಭಿವೃದ್ಧಿಗೆ ಇದೀಗ ಕಾಂಗ್ರೆಸ್ ಅವಧಿಯಲ್ಲಿ 457.29 ಲಕ್ಷ ಒದಗಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಮಾಹಿತಿಗಳಿಲ್ಲದೆ ಬಿಜೆಪಿ ಅಧ್ಯಕ್ಷರು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸಿದ್ದಾರೆ. ಅವರ ಅವಧಿಯಲ್ಲಿ ಜಿಪಂನಲ್ಲಿ ನಡೆದ ಕಾಮಗಾರಿಗಳ ಸಂಬಂಧ 6 ಕೋಟಿ ಮತ್ತು ಲೋಕೋಪಯೋಗಿ ಇಲಾಖೆಯಲ್ಲಿ 30 ಕೋಟಿ ಗುತ್ತಿಗೆದಾರರಿಗೆ ಕೊಡಲು ಬಾಕಿ ಇದೆ. ಇದರ ಬಗ್ಗೆ ಶಾಸಕರು ವಿಧಾನಸಭೆಯಲ್ಲಿ ಯಾಕೆ ಪ್ರಸ್ತಾಪಿಸುವುದಿಲ್ಲ ಎಂದು ಪ್ರಶ್ನಿಸಿದರು.
ಶಿಷ್ಟಾಚಾರ ಉಲ್ಲಂಘನೆ: ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಲ್ಯದ ಗಿರೀಶ್ ಮಾತನಾಡಿ, ಸಂಪಾಜೆ ವಿಭಾಗದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರಕ್ಕೂ ಸಂಸದರು, ವಿಧಾನಪರಿಷತ್ ಸದಸ್ಯರ ಹೆಸರನ್ನೇ ಹಾಕದೆ, ಕೇವಲ ಶಾಸಕ ಕೆ.ಜಿ. ಬೋಪಯ್ಯ ಹೆಸರನ್ನು ಮಾತ್ರ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸುವ ಮೂಲಕ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು.
ಪಕ್ಷದ ಪ್ರಮುಖರಾದ ಅಬ್ದುಲ್ ರೆಹಮಾನ್, ಅಜೀಜ್, ಗಣೇಶ್ ಮೊದಲಿಯಾರ್ ಇದ್ದರು.