ರಾಜ್ಯ, ಕೇಂದ್ರ ಬಜೆಟ್ ಕೊಡಗಿಗೆ ನಿರಾಶದಾಯಕ: ಸುಜಾಕುಶಾಲಪ್ಪ
ಮಡಿಕೇರಿ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಂಡಿಸಿದ ಬಜೆಟ್ಗಳು ಕೊಡಗಿನ ಜನತೆಗೆ ನಿರಾಶದಾಯಕವಾಗಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಜಾಕುಶಾಲಪ್ಪ ಟೀಕಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ರಸ್ತೆಗಳ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ಟೀಕಿಸಿದರು.
ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ತನ್ನೆಲ್ಲ ವೈಫಲ್ಯ ಮುಚ್ಚಿಡುವ ಯುಪಿಎ ಸರ್ಕಾರದ ವಿದಾಯ ಬಜೆಟ್ ಆಗಿದೆ. ಕೊಡಗಿಗೆ ರೈಲು ಸಂಪರ್ಕ ಕಲ್ಪಿಸಲು ಬದ್ಧ ಎಂದು ಹೇಳಿಕೆ ನೀಡಿದ್ದ ಸಂಸದ ವಿಶ್ವನಾಥ್ ರೇಲ್ವೆ ಯೋಜನೆಗೆ ಪ್ರಯತ್ನಿಸದೆ ರೈಲು ಬಿಟ್ಟಿದ್ದಾರೆ ಎಂದು ಸುಜಾ ವ್ಯಂಗ್ಯವಾಡಿದರು.
ಕೊಡಗು ಜಿಲ್ಲೆಯಲ್ಲಿ ರಸ್ತೆಗಳ ಗುಂಡಿಮುಚ್ಚುವಲ್ಲಿ ಮತ್ತು ಡಾಂಬರೀಕರಣ ಕೆಲಸವೂ ನಿರೀಕ್ಷಿತ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ಸುಜಾ ಆರೋಪಿಸಿದರು.
ಅತಿವೃಷ್ಟಿಯಿಂದ ನೆಲಕಚ್ಚಿರುವ ಕಾಫಿ ಬೆಳೆಗಾರರಿಗೆ ಪರಿಹಾರ ಪ್ಯಾಕೇಜ್ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ದೂರಿದ ಸುಜಾ, ಕ್ರೀಡಾ ಕ್ಷೇತ್ರದ ತವರೂರಿಗೂ ಬಜೆಟ್ನಲ್ಲಿ ಯಾವುದೇ ಯೋಜನೆಗಳನ್ನು ನೀಡದಿರುವುದು ದುರಂತ ಎಂದು ವಿಷಾದಿಸಿದರು.
ಕೊಡಗಿನ ರಸ್ತೆ, ಸೇತುವೆಗಳಿಗೆ 50 ಕೋಟಿ ನೀಡಲಾಗಿದ್ದರೂ ಕಳೆದ ವರ್ಷ ಪ್ರಕಟಿಸಿದ್ದ 50 ಕೋಟಿಯನ್ನೇ ಇನ್ನೂ ನೀಡಿಲ್ಲ. ಲೋಕಸಭೆ ಚುನಾವಣೆ ಪ್ರಕಟವಾದಲ್ಲಿ ಆ ಅನುದಾನ ಬಿಡುಗಡೆಯೂ ವಿಳಂಬವಾಗುತ್ತದೆ ಎಂದು ಸುಜಾ ಕುಶಾಲಪ್ಪ ಹೇಳಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮನುಮುತ್ತಪ್ಪ ಮಾತನಾಡಿ, ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳು ಬಿಜೆಪಿ ಸರ್ಕಾರದ ಯೋಜನೆಗಳಾಗಿದ್ದು ಕಾಂಗ್ರೆಸ್ ಮುಖಂಡರು ಇದೇ ಯೋಜನೆಗಳನ್ನು ತಮ್ಮದೆಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ರವಿಕಾಳಪ್ಪ, ಅಚ್ಚಪಂಡ ಮಹೇಶ್, ರತ್ನಾಕರ ಶೆಟ್ಟಿ ಇದ್ದರು.