ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆ
ಅಜೆಕಾರು: ಇಲ್ಲಿನ ಶಿರ್ಲಾಲು ಗ್ರಾಮದ ಮಲ್ಲಿಗೆಮನೆ ಎಂಬಲ್ಲಿ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಮಾಲಿನಿ (26) ಮೃತರು. ಈಕೆ ಕುಕ್ಕುಜೆ ಗ್ರಾಮದ ಗಿಡ್ಡಿ ಪೂಜಾರಿ ಎಂಬವರ ಮಗಳು. ಗುರುವಾರ ಬೆಳಿಗ್ಗೆ ಸುಮಾರು 6ರಿಂದ 7 ಗಂಟೆಯ ನಡುವೆ ತನ್ನ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿದ್ದಾರೆ. ಆತ್ಮಹತ್ಯೆಗೆ ಗಂಡ ಹಾಗೂ ಅವರ ಮನೆಯವರ ಚಿತ್ರಹಿಂಸೆಯೇ ಕಾರಣ ಎಂದು ತಾಯಿ ಗಿಡ್ಡಿ ನೀಡಿದ ದೂರಿನಂತೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲಗಿದ್ದ ಮಹಿಳೆ ಸರ ಕಳವು
ಮಲ್ಪೆ: ಇಲ್ಲಿನ ಪಡುತೋನ್ಸೆ ಗ್ರಾಮದ ಹೂಡೆ ಎಂಬಲ್ಲಿ ರಾತ್ರಿ ಮನೆಯಲ್ಲಿ ಮಲಗಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಅಪಹರಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ. ಮೂಲತಃ ಶಿವಮೊಗ್ಗ ಜಿಲ್ಲೆಸಾಗರದ ಜನತಾ ನಗರದ ನಿವಾಸಿ ಯಾಸಿನ್ ಹೂಡೆಯಲ್ಲಿರುವ ಮಾವನ ಮನೆಗೆ ಬಂದಿದ್ದು ಪತ್ನಿಯೊಂದಿಗೆ ಮಲಗಿದ್ದರು. ರಾತ್ರಿ ಕಳ್ಳರು ಕಿಟಕಿಯಿಂದ ಕೈ ಹಾಕಿ ಹೆಂಡತಿಯ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ ಕಳವು ಮಾಡಿದ್ದರು. ಸುಮಾರು 3.5 ಪವನ್ನ ಸರದ ಅಂದಾಜು ಮೌಲ್ಯ ರು. 35000 ಎಂದು ಯಾಸಿನ್ ನೀಡಿದ ದೂರಿನಂತೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
30 ಚೀಲ ಅಡಕೆ ಕಳವು
ಹೆಬ್ರಿ: ಗೋಡಾನ್ನನಲ್ಲಿ ದಾಸ್ತಾನು ಮಾಡಿ ಇರಿಸಿದ್ದ ಸುಮಾರು ರು. 46 ಸಾವಿರ ಮೌಲ್ಯದ ಸುಮಾರು 30 ಚೀಲ ಅಡಕೆ ಕಳವಾದ ಘಟನೆ ವರಂಗ ಗ್ರಾಮದ ಓಲಿಕಲ್ ಎಂಬಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ. ಜೋನಿ ಮ್ಯಾಥ್ಯೂ ಎಂಬವರು ಅಡಕೆ ಶೇಖರಿಸಿ ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದು, ಫೆ.10ರಂದು ಅಡಕೆಯನ್ನು ಸುಲಿಯುವ ಸಲುವಾಗಿ ಸುಮಾರು 350 ಗೋಣಿ ಚೀಲಗಳಲ್ಲಿ ತುಂಬಿಸಿ ತೆರೆದ ಗೋಡಾನ್ನಲ್ಲಿ ಇರಿಸಿ ಅದಕ್ಕೆ ಭದ್ರತೆ ಮಾಡಿ, ಕೆಲಸಗಾರರಿಗೆ ರಜೆ ನೀಡಿ, ತನ್ನ ಸ್ವಂತ ಊರಾದ ಕೇರಳದ ಎರ್ನಾಕುಲಂಗೆ ಹಬ್ಬದ ಸಲುವಾಗಿ ಹೋಗಿದ್ದರು. ಮಂಗಳವಾರ ವಾಪಾಸು ಗೋಡಾನ್ಗೆ ಬಂದು ನೋಡುವಾಗ, ಕಳವು ಬೆಳಕಿಗೆ ಬಂದಿದ್ದು, ಜೋನಿ ಮ್ಯಾಥ್ಯೂ ಹೆಬ್ರಿ ಠಾಣೆಗೆ ದೂರು ನೀಡಿದ್ದಾರೆ.
ಆಸಿಡ್ ಸೇವಿಸಿ ಯುವಕ ಆತ್ಮಹತ್ಯೆ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕೋಣಾಜೆ ಗ್ರಾಮದ ಮೇಲಿನಕಲ್ಲೂರು ಮನೆ ನಿವಾಸಿ ಚಂದ್ರ (32) ರಬ್ಬರ್ ಶೀಟ್ಗೆ ಬಳಸುವ ಆಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಸಂಭವಿಸಿದೆ. ಚಂದ್ರ ನೂತನ ಮನೆ ನಿರ್ಮಿಸುತ್ತಿದ್ದು, ಈ ಬಗ್ಗೆ ಎದುರಾದ ಆರ್ಥಿಕ ಅಡಚಣೆಯಿಂದ ನೊಂದು, ಈ ಕೃತ್ಯ ನಡೆಸಿದ್ದಾಗಿ ಮೃತನ ಅಣ್ಣ ಶಿವಪ್ಪ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಆಸಿಡ್ ಸೇವಿಸಿ ಅಸ್ವಸ್ಥರಾಗಿದ್ದ ಚಂದ್ರ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿಯೇ ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಂತ್ರದಡಿ ಸಿಲುಕಿ ಚಾಲಕ ಸಾವು
ಸುಳ್ಯ: ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಕಲ್ಲು ತುಂಡರಿಸುವ ಯಂತ್ರ ಹಿಂದಕ್ಕೆ ಚಲಿಸಿ, ಬಿದ್ದಿದ್ದು, ಅದರಡಿಗೆ ಸಿಕ್ಕಿ ಚಾಲಕ ಮೃತಪಟ್ಟ ಗುರುವಾರ ಸಂಜೆ ಮಂಡೆಕೋಲು ಬಳಿ ನಡೆದಿದೆ. ಅಮರಮುಡ್ನೂರು ಗ್ರಾಮದ ಕೊರತ್ಯಡ್ಕ ಗೋಪಾಲಕೃಷ್ಣ (30) ಮೃತರು. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.