26ರಂದು ತ್ರಿಭಾಷಾ ಕೊಂಕಣಿ ಅರ್ಥಕೋಶ ಲೋಕಾರ್ಪಣೆ
ಮಂಗಳೂರು: ಇಂಗ್ಲಿಷ್-ಕನ್ನಡ-ಕೊಂಕಣಿ ಭಾಷಾ ಸಂವಹನ ಸಂಪರ್ಕದಲ್ಲಿ ದೂರಗಾಮಿ ಕ್ರಾಂತಿ ತರಬಲ್ಲ ಪಠದರ್ಶಿನಿ ತ್ರಿಭಾಷಾ ಅರ್ಥಕೋಶ ಫೆ.26ರಂದು ಶಕ್ತಿನಗರದ ಕಲಾಂಗಣ್ನಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರ್ಯಕಾರಿ ಸಮಿತಿ ಸಂಚಾಲಕ ರೊಯ್ ಕ್ಯಾಸ್ಟಲಿನೊ, ಸಂಜೆ 6ಕ್ಕೆ ಮಂಗಳೂರು ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಅಧ್ಯಕ್ಷತೆಯಲ್ಲಿ ಮಂಗಳೂರು ದಕ್ಷಿಣ ಶಾಸಕ ಜೆ.ಆರ್.ಲೋಬೋ ಅತಿಥಿಯಾಗಿ ಪಾಲ್ಗೊಳ್ಳುವರು. ಕನ್ನಡ ಭಾಷಾ ತಜ್ಞ ಡಾ.ಕೆ.ವಿ.ನಾರಾಯಣ, ಸಾಹಿತಿ ಡಾ.ನಾ.ಡಿಸೋಜ, ಡಾ.ಸಾರಾ ಅಬೂಬಕ್ಕರ್, ಗೋವಾ ವಿಶ್ವವಿದ್ಯಾಲಯ ಕೊಂಕಣಿ ವಿಭಾಗ ಮುಖ್ಯಸ್ಥ ಪ್ರೊ.ಪ್ರಿಯಾದರ್ಶಿ ತಾಡ್ಕೋಡ್ಕರ್ ಆಗಮಿಸುವರು.
ನಾಡಿನ ವಿದ್ವಾಂಸ, ಪ್ರವಚನಕಾರ ಫಾ.ಬೇಸಿಲ್ ವಾಸ್ ಹಾಗೂ ಪ್ರಾಧ್ಯಾಪಕ ಸ್ಟೀಫನ್ ಕ್ವಾಡ್ರಸ್ ಪೆರ್ಮುದೆ ಈ ಅರ್ಥಕೋಶ ಸಿದ್ಧಪಡಿಸುತ್ತಿದ್ದು, ಸುಮಾರು 50 ಸಾವಿರ ಇಂಗ್ಲಿಷ್ ಶಬ್ದಗಳಿಗೆ ಕನ್ನಡ ಹಾಗೂ ಕೊಂಕಣಿಯಲ್ಲಿ ಹಲವು ಸಮಾನಾರ್ಥಕ ಮತ್ತು ಅರ್ಥಸಾಮ್ಯ ಪದಗಳನ್ನು ನೀಡಲಿದೆ. ಸುಮಾರು 1500 ಪುಟಗಳಲ್ಲಿ ಈ ಪುಸ್ತಕ ಬರಲಿದೆ. ಒಂದೇ ಸಂಪುಟದಲ್ಲಿ ಮೂರು ಪುಸ್ತಕ ಇರಲಿದೆ. ಈ ಗ್ರಂಥಕ್ಕೆ ರು. 14 ಲಕ್ಷ ವೆಚ್ಚವಾಗಲಿದೆ. ಗ್ರಂಥವನ್ನು ಶಿಕ್ಷಣ ಸಂಸ್ಥೆಗಳಿಗೆ, ಗ್ರಂಥಾಲಯಗಳಿಗೆ ಕೊಡುಗೆಯಾಗಿ ನೀಡಲಾಗುವುದು.
ಮುಂದೆ ಕೇಂದ್ರ ನೆರವಿನಲ್ಲಿ ಇಂಗ್ಲಿಷ್, ಹಿಂದಿ, ಕನ್ನಡ, ಕೊಂಕಣಿ ಭಾಷೆಯಲ್ಲಿ ಸಮಗ್ರವಾಗಿ ಅರ್ಥಕೋಶ ಹೊರತರಲಾಗುವುದು ಎಂದರು.
ಕೈ ನರಗಳೆಲ್ಲ ತುಂಡಾದರೂ ಮೊದಲಿನಂತಾದ
ಮಂಗಳೂರು: ಅಪಘಾತದಲ್ಲಿ ತುಂಡರಿಸಲ್ಪಟ್ಟ ಯುವಕನ ಬಲಗೈಯ ಎಲ್ಲ ನರವನ್ನು ಮಂಗಳೂರಿನ ಫಾದರ್ ಮುಲ್ಲರ್ಸ್ ಮೆಡಿಕಲ್ ಆಸ್ಪತ್ರೆ ವೈದ್ಯರು ಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 29 ವರ್ಷದ ಗೋವಾದ ಎಂಜಿನಿಯರ್ರೊಬ್ಬರ ಬಲಗೈ ಬೈಕ್ ಅಪಘಾತದಲ್ಲಿ ಮುರಿತಕ್ಕೊಳಗಾಗಿತ್ತು. ಕೈ ಚಲನೆಗೆ ಬೇಕಾದ ಎಲ್ಲ ನರಗಳೂ ತುಂಡರಿಸಲ್ಪಟ್ಟಿದ್ದವು. ಎರಡು ತಿಂಗಳ ಹಿಂದೆ ಬೇರೆ ಕಡೆ ಸರ್ಜರಿಯಾಗಿದ್ದರೂ ಕೈ ಮಾತ್ರ ಮೊದಲಿನಂತೆ ಆಗಿರಲಿಲ್ಲ. ಇದನ್ನು ಸವಾಲಾಗಿ ಸ್ವೀಕರಿಸಿದ ಫಾದರ್ ಮುಲ್ಲರ್ಸ್ ಮೆಡಿಕಲ್ ಆಸ್ಪತ್ರೆ ವೈದ್ಯ ಡಾ.ಲತೀಶ್ ಲತೀಫ್ ನೇತೃತ್ವದ ತಂಡ ಸತತ 8 ಗಂಟೆಗಳ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿತು. ಮೂಗು ಹಾಗೂ ಎದೆಭಾಗದ ನರಗಳನ್ನು ಜೋಡಿಸಿ ಕೈ ಚಲನೆಗೆ ನೆರವಾಗುವಂತೆ ಮಾಡಿತು. ಈಗ ರೋಗಿ ಚೇತರಿಸುತ್ತಿದ್ದು, ಕೈ ಚಲನೆ ಸಾಧ್ಯವಾಗಿದೆ. ಡಾ.ಕೃಷ್ಣ ಶೆಟ್ಟಿ, ಡಾ.ಹಿಲ್ಡಾ ಮತ್ತಿತರ ವೈದ್ಯರು ಶಸ್ತ್ರಚಿಕಿತ್ಸೆಯಲ್ಲಿ ಸಹಕರಿಸಿದ್ದರು.
ಬಿಜೆಪಿ ರಾ.ಭದ್ರತಾ ಕೋಶಕ್ಕೆ ಪಿ.ಪಿ.ಹೆಗ್ಡೆ ಆಹ್ವಾನಿತ
ಮಂಗಳೂರು: ಬಿಜೆಪಿ ರಾಷ್ಟ್ರೀಯ ಭದ್ರತಾ ಕೋಶದ ಕಾರ್ಯಕಾರಿ ಸಮಿತಿಯ ವಿಶೇಷ ಆಹ್ವಾನಿತ ಸದಸ್ಯರಾಗಿ ಮಂಗಳೂರಿನ ನ್ಯಾಯವಾದಿ ಪದ್ಮಪ್ರಸಾದ್ ಹೆಗ್ಡೆ (ಪಿ.ಪಿ.ಹೆಗ್ಡೆ)ನಾಮ ನಿರ್ದೇಶನಗೊಂಡಿದ್ದಾರೆ. ಅಲ್ಲದೆ ಬಿಜೆಪಿ ರಾಷ್ಟ್ರೀಯ ಭದ್ರತಾ ಕೋಶದ ಪ್ರಭಾರಿಯಾಗಿಯೂ ನೇಮಕಗೊಂಡಿದ್ದಾರೆ. ಕರ್ನಾಟಕವಲ್ಲದೆ ಗೋವಾ, ಕೇರಳ ಮತ್ತು ಲಕ್ಷದ್ವೀಪ ಕಾರ್ಯವ್ಯಾಪ್ತಿ ಹೊಂದಿದ್ದಾರೆ.
ಕಾನೂನು ಕ್ಷೇತ್ರ ಹಾಗೂ ಸಮಾಜಕ್ಕೆ ನೀಡಿದ ಗಮನಾರ್ಹ ಸೇವೆಗಾಗಿ ಪಿ.ಪಿ. ಹೆಗ್ಡೆಯವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ನೇಮಕ ಮಾಡಿದ್ದಾರೆ. ಯೂತ್ ಫಾರ್ ನ್ಯಾಷನ್ನ ರಾಷ್ಟ್ರೀಯ ಅಧ್ಯಕ್ಷರಾಗಿರುವ ಇವರು, ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಸದಸ್ಯ ಹಾಗೂ ಮಾಜಿ ಉಪಾಧ್ಯಕ್ಷ. ದೇಶದ ಭದ್ರತೆ ವಿಚಾರ ಹಾಗೂ ಬದಲಾಗಬೇಕಾದ ಕಾನೂನು, ನಿಯಮಗಳನ್ನು ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಅಳವಡಿಸಲು ಬಿಜೆಪಿ ರಾಷ್ಟ್ರೀಯ ಭದ್ರತಾ ಕೋಶ ಶಿಫಾರಸು ಮಾಡಲಿದೆ.
ನದಿ ತಿರುವು ವಿರೋಧಿಸಿ ಇಂದು ಕಾಲೇಜ್ ಬಂದ್, ಪ್ರತಿಭಟನೆ
ಮಂಗಳೂರು: ನೇತ್ರಾವತಿ ನದಿ ತಿರುವು ಯೋಜನೆ ವಿರುದ್ಧ ಕರಾವಳಿ ಜೀವನದಿ ನೇತ್ರಾವತಿ ರಕ್ಷಣಾ ಸಮಿತಿ ಫೆ. 22ರಂದು ಕಾಲೇಜ್ ಬಂದ್ಗೆ ಕರೆ ನೀಡಿದೆ.
ದ.ಕ. ಜಿಲ್ಲೆಯ ಪ್ರತಿ ಕಾಲೇಜುಗಳಿಂದ ಬೆಂಬಲ ದೊರಕಲಿದ್ದು, ಬೆಳಗ್ಗೆ 10ರಿಂದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ರ್ಯಾಲಿ ನಡೆಯಲಿದೆ. ರ್ಯಾಲಿಯನ್ನು ಮೂಳೆತಜ್ಞ ಡಾ.ಶಾಂತರಾಮ ಶೆಟ್ಟಿ ಉದ್ಘಾಟಿಸಲಿದ್ದಾರೆ.
ಈ ಯೋಜನೆ ಕೈಬಿಡುವಂತೆ ಜಿಲ್ಲಾಧಿಕಾರಿ ಮುಖೇನ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಈ ಹೋರಾಟಕ್ಕೆ ಜಿಲ್ಲೆಯ ಎಲ್ಲ ಸಚಿವರು, ಶಾಸಕರು ಬೆಂಬಲ ನೀಡಬೇಕು ಎಂದು ಸಮಿತಿ ಅಧ್ಯಕ್ಷ, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ಮತ್ತು ಸಾಮಾಜಿಕ ಹೋರಾಟಗಾರ ಎಂ.ಜಿ. ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿಭಟನಾ ರ್ಯಾಲಿ
ದ.ಕ. ಜಿಲ್ಲೆಯ ಪ್ರತಿ ಕಾಲೇಜುಗಳಿಂದ ಬೆಂಬಲ ದೊರಕಲಿದ್ದು, ಬೆಳಗ್ಗೆ 10ರಿಂದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ರ್ಯಾಲಿ ನಡೆಯಲಿದೆ. ರ್ಯಾಲಿಯನ್ನು ಮೂಳೆತಜ್ಞ ಡಾ.ಶಾಂತರಾಮ ಶೆಟ್ಟಿ ಉದ್ಘಾಟಿಸಲಿದ್ದಾರೆ.
ವಿಜಯ ಕುಮಾರ್ ಶೆಟ್ಟಿ, ಎಂ.ಜಿ. ಹೆಗಡೆ
ಬೀದಿಬದಿ ವ್ಯಾಪಾರ ನಿಲ್ಲಿಸದಿದ್ದರೆ ಸೂಕ್ತ ಕ್ರಮ: ಮಾರುಕಟ್ಟೆ ಸಂಘ
ಮಂಗಳೂರು: ಜಿಲ್ಲಾಧಿಕಾರಿ ಸೂಚನೆಯ ನಂತರವೂ ಬೀದಿಬದಿ ವ್ಯಾಪಾರಸ್ಥರು ವ್ಯಾಪಾರವನ್ನು ಪೂರ್ಣವಾಗಿ ನಿಲ್ಲಿಸುವಲ್ಲಿ ಮನಪಾ ವಿಫಲಗೊಂಡಿದ್ದು, ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ವ್ಯಾಪಾರಿಗಳೇ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲು ಮುಂದಾಗುತ್ತದೆ ಎಂದು ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘ ಎಚ್ಚರಿಸಿದೆ.
ಇತ್ತೀಚೆಗೆ ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ 12ನೇ ವಾರ್ಷಿಕ ಸಭೆ ನಡೆಯಿತು. ಈ ಸಂದರ್ಭ 40 ವರ್ಷಕ್ಕೂ ಅಧಿಕ ಕೂಲಿ ಕಾರ್ಮಿಕರಾಗಿ ದುಡಿದ ಅನಂದಣ್ಣ, ಬದ್ರುದ್ದೀನ್ ಮತ್ತು 50 ವರ್ಷಗಳಿಂದ ತರಕಾರಿ ವ್ಯಾಪಾರ ನಡೆಸುತ್ತಿರುವ ಫಿಲೋಮಿನಾ ಹಾಗೂ ದ.ಕ. ಜಿಲ್ಲಾಮಟ್ಟದ ದೇಹಧಾರ್ಡ್ಯ ಸ್ಪರ್ಧೆಯಲ್ಲಿ 2ನೇ ಸ್ಥಾನ ಗಳಿಸಿದ ಶ್ಯಾಮ್ರಾಮ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಭೆಯಲ್ಲಿ ಸಂಘದ ಅಧ್ಯಕ್ಷ ಎಂ.ಎಂ.ಕೆ. ಮುಸ್ತಾಫ, ಪ್ರಧಾನ ಕಾರ್ಯದರ್ಶಿ ಹಮೀದ್ ಕಂದಕ್, ವ್ಯಾಪಾರಿಗಳಾದ ಎ.ಜೆ. ಶೇಖರ್, ಇಸಾಕ್, ಸಿ.ಆರ್. ಅಬೂಬಕ್ಕರ್, ಎಂ.ಸಿ. ಹುಸೈನ್ ಇದ್ದರು.
ನಕಲಿ ಜೋತಿಷಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಮಂಗಳೂರು: ದ.ಕ.ಜಿಲ್ಲೆಯಾದ್ಯಂತ ನಕಲಿ ಜೋತಿಷ್ಯರ ಹಾವಳಿ ದಿನೇ ದಿನೇ ಅಧಿಕವಾಗುತ್ತಿದ್ದು, ಅಮಾಯಕರನ್ನು ವಂಚಿಸಿ ಪರಿಹಾರಕ್ಕೆಂದು ಹಣ ಕೀಳುತ್ತಾರೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಘಟಕ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ನಗರದ ನಾನಾ ಕಡೆ ಕೇರಳ ಜೋತಿಷಿ, ಪೊದುವಾಳ್, ಶಾಸ್ತ್ರಿಗಳು ಎಂದೆಲ್ಲ ನಾಮಫಲಕ ಹಾಕಿಸಿ ಸಂಜೆ ಪತ್ರಿಕೆಗಳಲ್ಲಿ ವಶೀಕರಣ, ಸ್ತ್ರೀ ಪ್ರೇಮ, ದಾಂಪತ್ಯ ಕಿರಿಕಿರಿ ಇತ್ಯಾದಿ ಸಮಸ್ಯೆಗೆ ಪರಿಹಾರ ಕೊಡುವುದಾಗಿ ಜಾಹಿರಾತು ನೀಡಿ ವಂಚಿಸುತ್ತಿದ್ದಾರೆ. ಒಂಟಿಯಾಗಿ ಭೇಟಿ ಮಾಡುವ ಮಹಿಳೆಯರನ್ನು ಬ್ಲ್ಯಾಕ್ಮೇಲ್ ಮಾಡುವ ಪ್ರಸಂಗ ನಡೆಯುತ್ತಿದೆ. ಆದ್ದರಿಂದ ಹೊಟೇಲ್, ಲಾಡ್ಜ್ಗಳಲ್ಲಿ ನೆಲೆಸಿ ಜೋತಿಷ್ಯ ಹೆಸರಲ್ಲಿ ವಂಚಿಸುವ ನಕಲಿ ಜೋತಿಷಿಗಳನ್ನು ಕೂಡಲೇ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಹಿಂದೂ ಮಹಾಸಭಾ ತೆರವುಗೊಳಿಸಲಿದೆ ಎಂದು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದೆ.
ಇಂಥ ನಕಲಿ ಜೋತಿಷಿಗಳಿಂದ ಹಿಂದೂ ಸಮಾಜ ಜೋತಿಷ್ಯದ ಮೇಲೆ ನಂಬಿಕೆ ಇಲ್ಲದಾಗಿದೆ. ಇದರಿಂದಲೇ ಸರ್ಕಾರ ಮೂಢನಂಬಿಕೆ, ಅಂಧಶ್ರದ್ಧೆ ಕಾಯ್ದೆ ಜಾರಿಗೆ ಮುಂದಾಗಿರುವುದನ್ನು ಮನಗಾಣಬೇಕು ಎಂದು ಸಭಾದ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಸುವರ್ಣ ತಿಳಿಸಿದ್ದಾರೆ.
ಅಪಘಾತ: ಓರ್ವ ಸಾವು
ಕುಂದಾಪುರ: ಕಾರು ಹಾಗೂ ಬೈಕ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ಇಲ್ಲಿನ ತಲ್ಲೂರು ಜಂಕ್ಷನ್ ಬಳಿ ಗುರುವಾರ ನಡೆದಿದೆ. ರಮೇಶ್ ಮೃತರು. ಆರೋಪಿ ಕಾರು ಚಾಲಕ ಕೆ. ಅಭಿಶೇಖರನ್ ಎಂಬವರು ತಮ್ಮ ಕಾರನ್ನು ಹೆಮ್ಮಾಡಿ ಕಡೆಯಿಂದ ತಲ್ಲೂರು ಕಡೆಗೆ ಅತೀ ವೇಗದಿಂದ ಚಲಾಯಿಸಿಕೊಂಡು ಬಂದು ಮುಂಭಾಗದಲ್ಲಿ ಹೋಗುತ್ತಿದ್ದ ವಾಹನವನ್ನು ಓವರ್ ಟೇಕ್ ಮಾಡುವ ಬರದಲ್ಲಿ ರಸ್ತೆ ತೀರ ಬಲಬದಿಗೆ ಚಲಾಯಿಸಿದಾಗ ಎದುರುಗಡೆಯಿಂದ ರಮೇಶ್ ಅವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ರಮೇಶ್ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಪರೀಕ್ಷಿಸಿ ಆತ ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಿದ್ಯುತ್ತಂತಿ ಸ್ಪರ್ಶ: ಆಲದ ಮರ ನಾಶ
ವಿಟ್ಲ: ಆಲದ ಮರಕ್ಕೆ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಮರ ಸಂಪೂರ್ಣ ಭಸ್ಮವಾದ ಘಟನೆ ಮಾಣಿ ಜಂಕ್ಷನ್ನಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಜಂಕ್ಷನ್ನಲ್ಲಿರುವ ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಕಂಬದಲ್ಲಿ ಬೆಂಕಿ ಉಂಟಾಗಿ, ಪಕ್ಕದಲ್ಲಿದ್ದ ಆಲದ ಮರಕ್ಕೂ ಆವರಿಸಿತು. ಬೆಂಕಿಯ ತೀವ್ರತೆಗೆ ಮರದ ರಂಬೆ ಕೊಂಬೆಗಳು ಉರಿದು ಬೀಳ ತೊಡಗಿದವು. ಕೂಡಲೇ ಸ್ಥಳೀಯರು ಬಂಟ್ವಾಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅವರು ಬಂದು ಬೆಂಕಿ ಇತರೆಡೆಗೆ ಪಸರಿಸದಂತ ನಂದಿಸಿದರು. ಮರದ ಸುತ್ತಮುತ್ತ ಹಲವು ಅಂಗಡಿಗಳಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.
ಕೊಲೆ ಆರೋಪಿ ಪೊಲೀಸರಿಗೆ ಶರಣು
ಮಂಗಳೂರು: ಎನ್ಐಟಿಕೆ ಕಾಲೇಜ್ ಬಳಿ ಪ್ರಕಾಶ್ ಎಂಬ ಯುವಕನನ್ನು ಬರ್ಬರವಾಗಿ ಕಡಿದು ಕೊಲೆ ಮಾಡಿದ ಪ್ರಧಾನ ಆರೋಪಿ ನಾಗ ಯಾನೆ ನಾಗರಾಜ (32) ಸುರತ್ಕಲ್ ಪೊಲೀಸರಿಗೆ ಶರಣಾಗಿದ್ದಾನೆ.
ಪ್ರಕಾಶ್ನನ್ನು ಕಡಿಯಲು ಬಳಸಿದ ತಳವಾರ್ನನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ. ಎನ್ಐಟಿಕೆ ಬಳಿ ಪ್ರಕಾಶ್ನನ್ನು ಕೊಲೆ ಮಾಡಿದ ಬಳಿಕ ಪಡುಬಿದ್ರಿಗೆ ತೆರಳಿದ್ದು, ಅಲ್ಲಿಂದ ಮುಂಬಯಿಗೆ ಹೋಗಿದ್ದೆ. ಅಲ್ಲಿಂದ ತಿರುಪತಿ ಇನ್ನಿತರ ಕಡೆಗೆ ಹೋಗಿ ತಲೆ ಮರೆಸಿಕೊಂಡಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.
ನಾಗರಾಜ್ ವಿರುದ್ಧ ಅನೇಕ ಕ್ರಿಮಿನಲ್ ಪ್ರಕರಣಗಳು ಬಜ್ಪೆ, ಸುರತ್ಕಲ್ ಠಾಣೆಯಲ್ಲಿ ಈ ಹಿಂದೆಯೇ ದಾಖಲಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿ ಮೂರು ಮಂದಿ ಆರೋಪಿಗಳು ಈ ಹಿಂದೆಯೇ ಪೊಲೀಸರಿಗೆ ಶರಣಾಗಿದ್ದಾರೆ.