ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಎತ್ತಿನಹೊಳೆ ಅನುಷ್ಠಾನದಿಂದ ರಾಜ್ಯಕ್ಕೆ ಒಳಿತು: ಹರ್ಷ ಮೈಲಿ

Vishwanath S
Updated On : 22 Feb 2014, 11:07 am

ಉಪ್ಪಿನಂಗಡಿ: ರಾಜ್ಯದ ಬರಪೀಡಿತ ಪ್ರದೇಶಕ್ಕೆ ನೀರುಣಿಸುವ ಎತ್ತಿನಹೊಳೆ ಯೋಜನೆ ಅನುಷ್ಠಾನದಿಂದ ಇಡೀ ರಾಜ್ಯಕ್ಕೆ ಒಳಿತಾಗಲಿದೆ. ಯೋಜನೆಯಿಂದ ದ.ಕ. ಜಿಲ್ಲೆಗೆ ತೊಂದರೆಯಾಗಲಿದೆ ಎನ್ನುವುದು ಮಿಥ್ಯ ಧ್ವನಿ ಎಂದು ಮಂಗಳೂರುಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಹರ್ಷ ಮೈಲಿ ಅಭಿಪ್ರಾಯಪಟ್ಟಿದ್ದಾರೆ.
ಅವರು ಶುಕ್ರವಾರ ತನ್ನ ತೃತೀಯ ಸುತ್ತಿನ ಕ್ಷೇತ್ರ ಪರ್ಯಟನೆಯಲ್ಲಿ ಕಡಬಕ್ಕೆ ಭೇಟಿ ನೀಡಿ, ಅಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡರಲ್ಲಿ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಎತ್ತಿನಹೊಳೆ ಯೋಜನೆಯನ್ನು ವಿರೋಧಿಸುವುದರಲ್ಲಿ ಕೆಲವರ ರಾಜಕೀಯ ಹಿತಾಸಕ್ತಿ ಅಡಕವಾಗಿದೆ. ಒಂದು ಉತ್ತಮ ಯೋಜನೆಯನ್ನು ಅಪಾಯದ ಭೀತಿ ಮೂಡಿಸಿ ತಡೆಗಟ್ಟಲು ಅನಗತ್ಯ ಅಪಪ್ರಚಾರ ಮಾಡಲಾಗುತ್ತಿದೆ. ಎತ್ತಿನಹೊಳೆ ಯೋಜನೆ ಅನುಷ್ಠಾನದಲ್ಲಿ ಕೇಂದ್ರ ಸಚಿವ ವೀರಪ್ಪ ಮೈಲಿಯವರ ಚಿಂತನೆ ಅಡಗಿದೆ ಎಂದು ಹೇಳಿದರು.
ದ.ಕ. ಜಿಲ್ಲೆಯ ಜನ ಬುದ್ಧಿವಂತರು. ಯಾವುದು ಕೆಟ್ಟದು, ಯಾವುದು ಒಳ್ಳೆಯದು ಎನ್ನುವುದನ್ನು ಅರ್ಥೈಸಲು ಶಕ್ತರಾಗಿದ್ದಾರೆ. ಈ ಹಿನ್ನೆಲೆಯಿಂದ ಚುನಾವಣೆಯಲ್ಲಿ ಯಾವುದೇ ಪ್ರತಿಕೂಲ ಪರಿಸ್ಥಿತಿ ನಮಗೆ ಉದ್ಭವಿಸದು. ಎತ್ತಿನಹೊಳೆ ಯೋಜನೆಯಿಂದ ಇಡೀ ರಾಜ್ಯಕ್ಕಾಗುವ ಒಳಿತಿನ ಬಗ್ಗೆ ಯಾರೂ ಧ್ವನಿಸುವುದಿಲ್ಲ. ಸುಖಾಸುಮ್ಮನೆ ಬಾಧಕತೆಯನ್ನು ಸೃಷ್ಟಿಸಿ ಜನತೆಯಲ್ಲಿ ಭೀತಿ ಮೂಡಿಸಲಾಗುತ್ತಿದೆ. ರಾಜಕೀಯ ಕಾರಣಕ್ಕಾಗಿ ಯೋಜನೆಯನ್ನು ವಿರೋಧಿಸವವರ ಬಗ್ಗೆ ನಾನು ಏನನ್ನೂ ಹೇಳಲಾರೆ ಎಂದರು.
ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲವಿಲ್ಲ: ದ.ಕ. ಲೋಕ ಸಭಾ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲವೂ ಅಂತರಿಕ ಚುನಾವಣೆಯ ಮೂಲಕ ನಡೆಯಲಿದೆ. ನಾನೊಬ್ಬ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ನನಗೆ ಟಿಕೆಟ್ ದೊರೆಯುತ್ತದೆ ಎನ್ನುವ ಭರವಸೆ ಇದೆ ಎಂದು ತಿಳಿಸಿದರು.
ಪಕ್ಷದ ಹಿರಿಯ ನಾಯಕ ಜನಾರ್ದನ ಪೂಜಾರಿಯವರಿಗೆ ಟಿಕೆಟ್ ನೀಡಬೇಕು ಎಂದು ಜಿಲ್ಲೆಯ ಮುಖಂಡರ ನಿಯೋಗ ವರಿಷ್ಠರಿಗೆ ಒತ್ತಡ ಹಾಕಿದೆಯಲ್ಲವೆ ಎಂಬ ಪ್ರಶ್ನೆಗೆ ಉತ್ತರಿಸಿದ ಹರ್ಷ ಮೈಲಿ, ಈ ವಿಚಾರ ನನಗೆ ತಿಳಿದಿಲ್ಲ ಎಂದು ಹೇಳಿದರು.
ನಾನು ಈಗಾಗಲೇ ಕ್ಷೇತ್ರ ವ್ಯಾಪ್ತಿ ಎರಡು ಬಾರಿ ಪ್ರವಾಸ ಮಾಡಿ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರನ್ನು ಭೇಟಿಯಾಗಿ ಮಾತಕತೆ ನಡೆಸಿದ್ದೇನೆ. ಇದೀಗ ಮೂರನೇ ಸುತ್ತಿನ ಓಡಾಟವಾಗಿದೆ. ಎಲ್ಲೆಡೆ ಅಭೂತಪೂರ್ವ ಸ್ವಾಗತ ದೊರಯುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಅಧಿಪತ್ಯ ಸ್ಥಾಪನೆಗೆ ಸಜ್ಜು: ಮಂಗಳೂರು, ದ.ಕ. ಲೋಕಸಭಾ ಕ್ಷೇತ್ರದಲ್ಲಿ ಸತತ ಸೋಲಿನಿಂದ ಕಾಂಗ್ರೆಸ್ ಕಂಗೆಟ್ಟಿದೆ. ಸುಳ್ಯದಲ್ಲಿ ಕೂಡಾ ನಮ್ಮ ಶಾಸಕರಿಲ್ಲ. ಇದರಿಂದಾಗಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅನಾಥ ಪ್ರಜ್ಞೆ ಮೂಡಿದೆ. ಇದನ್ನು ಹೋಗಲಾಡಿಸಲು ಈ ಬಾರಿ ಕಾರ್ಯಕರ್ತರು ಪಣತೊಟ್ಟಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿಯನ್ನು ಕಿತ್ತೊಗೆದು ಕಾಂಗ್ರೆಸ್ ಅಧಿಪತ್ಯ ಸ್ಥಾಪಿಸಲು ಎಲ್ಲಾ ರೀತಿಯಲ್ಲಿ ಪಕ್ಷದ ಕಾರ್ಯಕರ್ತರು ಸಜ್ಜಾಗಿದ್ದಾರೆ. ಅಭ್ಯರ್ಥಿ ಯಾರೇ ಆಗಲಿ ಕಾಂಗ್ರೆಸ್ ಗೆಲ್ಲಿಸುವುದು ನಮ್ಮೆಲ್ಲರ ಗುರಿ. ಅದಕ್ಕಾಗಿ ನಾನು ಸ್ಪರ್ಧಿಸಲು ಮುಂದಾಗಿರುವುದು ಎಂದರು.
ಸುಳ್ಯ ಕಾಂಗ್ರೆಸ್ ಮುಖಂಡ ಭರತ್ ಮುಂಡೋಡಿ, ಕಾಂಗ್ರೆಸ್ ಮುಖಂಡರಾದ ಬಾಲಕೃಷ್ಣ ಬಳ್ಳೇರಿ, ಎಚ್.ಕೆ. ಇಲ್ಯಾಸ್, ಸುಧೀರ್ ಕುಮಾರ್ ಶೆಟ್ಟಿ, ಯತೀಶ್ ಬಾನಡ್ಕ, ಕೆ.ಎಂ. ಹನೀಫ್, ಅಶ್ರಫ್ ಎಸ್., ಗುರುವಪ್ಪ ಕಲ್ಲುಗುಡ್ಡೆ, ವರ್ಗಿಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement