ನದಿ ತಿರುವು ಮತ ಗಳಿಕೆ ಉದ್ದೇಶ: ದಿನೇಶ್ ಹೊಳ್ಳ
ಮಂಗಳೂರು: ಮತಗಳಿಕೆಯ ಏಕೈಕ ಉದ್ದೇಶದಿಂದ ದ.ಕ. ಜಿಲ್ಲೆಯ ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಾ ರಾಜಕೀಯ ಕುತಂತ್ರ ನಡೆಸಲಾಗುತ್ತಿದೆ ಎಂದು ಸಹ್ಯಾದ್ರಿ ಸಂರಕ್ಷಣಾ ಸಂಚಯದ ಸಂಚಾಲಕ ದಿನೇಶ್ ಹೊಳ್ಳ ಆರೋಪಿಸಿದ್ದಾರೆ.
ಚಿಲಿಂಬಿ ಆದರ್ಶ ಫ್ರೆಂಡ್ಸ್ ಅಸೋಸಿಯೇಶನ್ ವತಿಯಿಂದ ನಡೆದ 'ನೇತ್ರಾವತಿ ಉಳಿಸಿ' ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ಮಾತೃ ಸಮಾನವಾಗಿರುವ ನೇತ್ರಾವತಿ ನದಿಗೆ ನೀಚ ರಾಜಕಾರಣಿಗಳು ಮಾರಣಾಂತಿಕ ಏಟು ನೀಡುವುದನ್ನು ತಪ್ಪಿಸಲು ಜಾತಿಮತ ಬೇಧ ಮರೆತು ಒಟ್ಟಾಗಿ ತೀವ್ರತರ ಹೋರಾಟ ನಡೆಸಬೇಕು ಎಂದರು.
ಪರಿಸರ ಹೋರಾಟಗಾರ ದಿನೇಶ್ ಕೊಡಿಯಾಲ್ಬೈಲ್ ಮಾತನಾಡಿ, ಪಶ್ಚಿಮಘಟ್ಟ ಸೂಕ್ಷ್ಮ ಜೀವ ವೈವಿಧ್ಯತೆಯನ್ನು ಉಳಿಸಲು ಅಶಕ್ತರಾದರೆ ಮಳೆ ಹಾಗೂ ಹೊಳೆಯ ನಡುವಿನ ಸಂಬಂಧ ಕಡಿದು ಹೋಗಿ ಪ್ರಾಕೃತಿಕ ಅಸಮತೋಲನವಾದೀತು ಎಂದರು.
ಅಸೋಸಿಯೇಶನ್ ಮಾಜಿ ಅಧ್ಯಕ್ಷ ರಾಜೇಂದ್ರ, ಅಧ್ಯಕ್ಷ ಅಶೋಕ್ ಕೋಟ್ಯಾನ್, ಮಹಿಳಾ ಉಪಾಧ್ಯಕ್ಷೆ ಶಾಲಿನಿ ರವಿಕುಮಾರ್, ಸಂಚಯನದ ಪ್ರಮುಖರಾದ ಪವನ್ ಜೈನ್, ರಾಜೇಶ್ ದೇವಾಡಿಗ ಇದ್ದರು.
ಚುನಾವಣಾ ಬಹಿಷ್ಕಾರ: ಎಚ್ಚರಿಕೆ
ಮಂಗಳೂರು: ನೇತ್ರಾವತಿ ನದಿ ತಿರುವು ಯೋಜನೆಗೆ ಬೆಂಬಲ ನೀಡಿದರೆ ದ.ಕ.ಜಿಲ್ಲೆಯಲ್ಲಿ ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡುವುದಾಗಿ ಸಹ್ಯಾದ್ರಿ ಸಂರಕ್ಷಣಾ ಸಂಚಯ ಎಚ್ಚರಿಸಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಚಯ ಅಧ್ಯಕ್ಷ ದಿನೇಶ್ ಹೊಳ್ಳ, ಸಂಸತ್ ಚುನಾವಣೆ ಗೆಲ್ಲುವ ಹಠದಿಂದ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಯೋಜನೆಗೆ ಶಿಲಾನ್ಯಾಸ ನೆರವೇರಿಸುತ್ತಾರೆ. ಜಿಲ್ಲೆಯಲ್ಲಿ ನೇತ್ರಾವತಿ ತಿರುವಿಗೆ ಸಾಕಷ್ಟು ವಿರೋಧ, ಪ್ರತಿಭಟನೆ ವ್ಯಕ್ತವಾಗುತ್ತಿದ್ದರೂ ಅದನ್ನು ಕಡೆಗಣಿಸಲಾಗುತ್ತಿದೆ.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಿ ಕರಾವಳಿ ಜನರಿಗೇ ಮೋಸ ಮಾಡಿ ಜಿಲ್ಲೆಯಲ್ಲಿ ಚುನಾವಣೆಗೆ ನಿಲ್ಲಲು ಹಿಂದೇಟು ಹಾಕುತ್ತಿದ್ದಾರೆ. ಅರಣ್ಯ ಖಾತೆ ಹೊಂದಿರುವ ಜಿಲ್ಲಾ ಉಸ್ತುವಾರಿ ಸಚಿವರು ನದಿ ತಿರುವು ಯೋಜನೆ ಬೆಂಬಲಿಸಿದ್ದಾರೆ. ಮುಖ್ಯಮಂತ್ರಿ ಜಿಲ್ಲೆಗೆ ಭೇಟಿ ನೀಡಿದಾಗ ಹೋರಾಟಗಾರರ ಜತೆ ಮಾತುಕತೆ ನಡೆಸುವುದಾಗಿ ಹೇಳಿ ಇದೀಗ ಏಕಪಕ್ಷೀಯವಾಗಿ ಯೋಜನೆಗೆ ಉತ್ಸುಕರಾಗಿದ್ದಾರೆ. ಜಿಲ್ಲೆಯ ಶಾಸಕರು, ಸಚಿವರು, ಮುಖ್ಯಮಂತ್ರಿ, ಕೇಂದ್ರ ಪರಿಸರ ಸಚಿವರು, ಜಿಲ್ಲೆಯ ಮಾಜಿ ಮುಖ್ಯಮಂತ್ರಿಗಳು ನೇತ್ರಾವತಿ ತಿರುವು ಯೋಜನೆಯಲ್ಲಿ ಇಲ್ಲಿನ ಜನರಿಗೆ ವಂಚಿಸಿದ್ದಾರೆ. ಈ ದ್ರೋಹದ ಬಗ್ಗೆ ಯೋಜನೆ ಕೈಬಿಡುವ ಬಗ್ಗೆ ಭರವಸೆ ನೀಡಬೇಕು, ಇಲ್ಲದಿದ್ದರೆ ಜಿಲ್ಲೆಗೆ ವಂಚಿಸಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಿಗೆ ಲೋಕಸಭಾ ಚುನಾವಣೆಯಲ್ಲಿ ಮತ ನೀಡದಂತೆ ಅಥವಾ ಚುನಾವಣಾ ಬಹಿಷ್ಕಾರಕ್ಕೆ ಕರೆ ನೀಡುವುದಾಗಿ ಹೇಳಿದರು.
ಅನೇಕ ಸಂಘಟನೆಗಳ ಸಹಕಾರದಲ್ಲಿ ಜಿಲ್ಲೆಯಾದ್ಯಂತ ಮನೆ, ಮನೆಗೆ ತೆರಳಿ, ಜನತೆಗೆ ಮನವರಿಕೆ ಮಾಡುವ ಕಾರ್ಯ ಮಾಡುತ್ತೇವೆ. ಹಾಸನ, ತುಮಕೂರು, ಬೆಂಗಳೂರಿನ ಹೋರಾಟಗಾರರು ಸೇರಿ ನೇತ್ರಾವತಿ ಯೋಜನೆ ತಡೆಗಾಗಿ ಹೈಕೋರ್ಟ್ನಲ್ಲಿ ರಿಟ್ ದಾಖಲಿಸುವುದಾಗಿ ಹೇಳಿದರು.