ಬೊಜ್ಜು ಕರಗಿಸಿದ ಬೈಪಾಸ್ ಶಸ್ತ್ರಚಿಕಿತ್ಸೆ!
ಮಂಗಳೂರು: ಬೊಜ್ಜು ಹೊಂದಿದ ವ್ಯಕ್ತಿಗೆ ತೂಕ ಕಡಿಮೆ ಮಾಡಿಕೊಳ್ಳಲು ಮಂಗಳೂರಿನ ಕೆಎಂಸಿ ಆಸ್ಪತ್ರೆ ವೈದ್ಯರು ನಡೆಸಿದ ಬೇರಿಯಾಟ್ರಿಕ್ ಬೈಪಾಸ್ ಸರ್ಜರಿ ಚಿಕಿತ್ಸೆ ಯಶಸ್ವಿಯಾಗಿದ್ದು, ಆ ವ್ಯಕ್ತಿ ಈಗ 92 ಕಿಲೊ ತೂಕ ಕಳೆದುಕೊಂಡು ಸಾಮಾನ್ಯರಂತೆ ಜೀವನ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. 35 ವರ್ಷದ ಸುನಿಲ್ ಡಿಮೆಲ್ಲೊ 2 ವರ್ಷ ಹಿಂದಿನ ವರೆಗೆ 181 ಕಿಲೊ ತೂಕ ಇದ್ದರು. ಈ ಅತಿಯಾದ ತೂಕದಿಂದ ಆರೋಗ್ಯ ಸ್ಥಿತಿ ಹಾಳಾಗಿತ್ತು. ಆ ಬಳಿಕ ಶಸ್ತ್ರಚಿಕಿತ್ಸೆ ನಂತರ 92 ಕಿಲೊ ತೂಕ ಕಡಿಮೆಯಾಗಿದ್ದು, ಈಗ ಅವರ ತೂಕ 89 ಕಿಲೊ. ಇವರಿಗೆ ಬಾಲ್ಯದಿಂದಲೇ ಅತಿಯಾದ ತೂಕದ ತೊಂದರೆ ಇತ್ತು. 15 ವರ್ಷದಲ್ಲಿ 102 ಕಿಲೊ ಇದ್ದರು. 2005ರಲ್ಲಿ ತೀವ್ರ ಬೆನ್ನು ನೋವು ಕಾಣಿಸಿತ್ತು. ತೂಕ ಕಡಿಮೆ ಮಾಡುವ ಕೇಂದ್ರಕ್ಕೆ ಹೋಗಿ ಬಂದ ಬಳಿಕ ಮತ್ತೆ 30 ಕೇಜಿ ಜಾಸ್ತಿಯಾಗಿತ್ತು. ಆನ್‌ಲೈನ್ ಆಹಾರ ಕ್ರಮಗಳ ಪಟ್ಟಿಯನ್ನು ಅನುಸರಿಸಿದರೂ ಪ್ರಯೋಜನವಾಗಲಿಲ್ಲ. 2011ರಲ್ಲಿ ಕೆಎಂಸಿ ಆಸ್ಪತ್ರೆಗೆ ಬಂದ ಅವರನ್ನು ತಪಾಸಣೆ ನಡೆಸಿ ಜೂ.30ರಂದು ಬೇರಿಯಾಟ್ರಿಕ್ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಮೂರು ದಿನ ಆಸ್ಪತ್ರೆಯಲ್ಲಿದ್ದು, ನಂತರ ಅನುಸರಿಸಬೇಕಾದ ಆಹಾರ ಕ್ರಮ ಮತ್ತು ವ್ಯಾಯಾಮ ವಿಧಾನ ಪಾಲಿಸುವಂತೆ ತಿಳಿಸಲಾಗಿತ್ತು. ಈಗ ಬೊಜ್ಜುಕರಗಿ ಆರೋಗ್ಯದಲ್ಲಿ ಪ್ರಗತಿಯಾಗಿ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.