ಸುರತ್ಕಲ್ನಲ್ಲಿ ಮತ್ತೆ ನೈತಿಕ ಪೊಲೀಸ್ಗಿರಿ: ನಾಲ್ವರು ಯುವಕರ ಸೆರೆ
ಮಂಗಳೂರು: ಸುರತ್ಕಲ್ ಕಡಲ ತೀರದಲ್ಲಿ ಗೆಳತಿಯ ಜತೆ ಹರಟುತ್ತಿದ್ದ ಭಿನ್ನ ಕೋಮಿನ ಯುವಕನ ಮೇಲೆ ಸ್ಥಳೀಯರ ತಂಡ ಗಂಭೀರವಾಗಿ ಹಲ್ಲೆ ನಡೆಸಿದೆ. ಹಲ್ಲೆ ನಡೆಸಿದ ನಾಲ್ವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಹಲ್ಲೆಯಿಂದ ಅಸ್ವಸ್ಥನಾದ ಕುಳಾಯಿಯ ನಿಸಾರ್ (24)ನನ್ನು ಸುರತ್ಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಳಾಯಿಯ ನಿಸಾರ್ ನೆರೆಮನೆಯ 17 ವರ್ಷದ ಯುವತಿ ಜತೆ ಗೆಳೆತನ ಹೊಂದಿದ್ದ. ಮೊಬೈಲ್ ಮೂಲಕ ಮಾತುಕತೆ ನಡೆಸುತ್ತಿದ್ದು, ಪ್ರೀತಿಸುವ ಮಟ್ಟಕ್ಕೆ ಮಾತ್ರ ಹೋಗಿರಲಿಲ್ಲ.
'ನಾನು ವಿದೇಶಕ್ಕೆ ಹೋಗುತ್ತೇನೆ, ಇನ್ನು ಮುಂದೆ ನಿನ್ನನ್ನು ನೋಡಲು ಸಾಧ್ಯವಿಲ್ಲ, ನಿನ್ನನ್ನು ನೋಡಿ ಮಾತನಾಡಬೇಕು' ಎಂದು ಗೆಳತಿಗೆ ಹೇಳಿದ್ದ ನಿಸಾರ್, ಎನ್ಐಟಿಕೆ ಬಳಿಯ ಬೀಚ್ನಲ್ಲಿ ಭೇಟಿಯಾಗಲು ತಿಳಿಸಿದ್ದ. ಅಲ್ಲಿ ಅಕ್ಕಪಕ್ಕ ಕುಳಿತುಕೊಂಡು ಹರಟುತ್ತಿರುವುದನ್ನು ಬೀಚ್ನಲ್ಲಿದ್ದ ಸ್ಥಳೀಯರು ನೋಡಿದ್ದಾರೆ.
ಭಿನ್ನ ಕೋಮಿನ ಜೋಡಿ ಆಗಿರಬೇಕು ಎಂಬ ಸಂಶಯ ಬಂದಿದೆ. ಮಧ್ಯಾಹ್ನ 12 ಗಂಟೆ ವೇಳೆಗೆ ನಾಲ್ಕು ಯುವಕರ ತಂಡ ನಿಸಾರ್ಮೇಲೆ ಕೊತ್ತಳಿಗೆ (ತೆಂಗಿನ ಮಡಲು)ಯಿಂದ ತೀವ್ರ ಹಲ್ಲೆ ನಡೆಸಿದೆ. ಇದನ್ನು ನೋಡಿದ ಯುವತಿ ಬೆದರಿ ಅತ್ತಿದ್ದಾಳೆ. ಕೊನೆಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ವಿಚಾರಣೆ ನಡೆಸಿದ್ದಾರೆ.
ಮನೆಯಿಂದ ಕಂಪ್ಯೂಟರ್ ಕ್ಲಾಸ್ಗೆ ಹೋಗುವುದಾಗಿ ಹೇಳಿದ್ದ ನಿಸಾರ್ ವಾಪಸ್ ಬಂದಿರಲಿಲ್ಲ. ಬೀಚ್ನಲ್ಲಿ ಗಾಯಗೊಂಡಿದ್ದ ನಿಸಾರ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದಾಗಲೇ ಹಲ್ಲೆ ವಿಚಾರ ತಿಳಿದುಬಂತು ಎಂದು ನಿಸಾರ್ ಮನೆಯವರು ಪ್ರತಿಕ್ರಿಯಿಸಿದ್ದಾರೆ.