100 ಮಂದಿ ಕೊಂದ ಚಂಬಲ್ ಡಕಾಯಿತ ಈಗ ಪರಮ ಸಾತ್ವಿಕ!
ಮಂಗಳೂರು: ಮನುಷ್ಯರನ್ನೇ ಕೊಂದು ಅವರ ಬೆರಳುಗಳನ್ನು ಮಾಲೆಯಾಗಿ ಹಾಕಿಕೊಂಡ ಅಂಗುಲಿಮಾಲ ಕೊನೆಗೆ ಬುದ್ಧನ ಪ್ರೇರಣೆಯಿಂದ ಉತ್ತಮ ಮನುಷ್ಯನಾಗಿ ಬದಲಾದ ಕಥೆ ಕೇಳಿರಬಹುದು.
ಇದೇ ರೀತಿ ಕ್ರೂರಿಯೊಬ್ಬ ಸಾತ್ವಿಕನಾದ ಬೆಳವಣಿಗೆಯಿದು. 1958ರಲ್ಲಿ ಸುಮಾರು 100 ಜನರನ್ನು ಕೊಂದ ಚಂಬಲ್ ಕಣಿವೆ ಡಕಾಯಿತ ಪಂಚಮ ಸಿಂಗ್ ಜೀವಾವಧಿ ಶಿಕ್ಷೆ ಅನುಭವಿಸಿ, ಬಿಡುಗಡೆಗೊಂಡಿದ್ದಾನೆ. ಬದಲಾವಣೆಗಾಗಿ ಬ್ರಹ್ಮಕುಮಾರಿ ಪ್ರಜಾಪಿತ ಸಂಸ್ಥೆಯಲ್ಲಿ ಸೇರಿಕೊಂಡು ಸತ್ಸಂಗದಲ್ಲಿ ತೊಡಗಿದ್ದು, ಇದೀಗ, 90ರ ಹರೆಯದ ಪಂಚಮ ಸಿಂಗ್ ಶಾಲೆ-ಕಾಲೇಜು, ಜೈಲಿಗೆ ತೆರಳಿ ಉಪನ್ಯಾಸ ನೀಡುತ್ತಿದ್ದಾನೆ.
ಭಾನುವಾರ ನಗರದ ಉರ್ವ ಬ್ರಹ್ಮಕುಮಾರಿ ಪ್ರಜಾಪಿತ ಸಂಸ್ಥೆಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಪಂಚಮ ಸಿಂಗ್ ಮಾತನಾಡಿದರು.
ಕ್ರೂರಿಯಾಗಿದ್ದು ಯಾಕೆ?: ಮಧ್ಯಪ್ರದೇಶದ ಸಿಂಗ್‌ಪುರದಲ್ಲಿ 1958ರಲ್ಲಿ ನಡೆದ ಪಂಚಾಯ್ತಿ ಚುನಾವಣೆಯಲ್ಲಿ ಎರಡು ಗುಂಪು ರಚನೆಯಾಗಿತ್ತು. ಒಂದು ಗುಂಪಿನ ವರ್ಗದವರು ಪಂಚಮ್ ಸಿಂಗ್‌ಗೆ ವಿನಾ ಕಾರಣ ಪ್ರಜ್ಞೆ ತಪ್ಪಿಸುವಂತೆ ಹೊಡೆದಿತ್ತು. ಇದರ ಪ್ರತೀಕಾರಕ್ಕಾಗಿ ಆಸ್ಪತ್ರೆಯಿಂದ ಗುಣಮುಖನಾದ ನಂತರ ಸಿಂಗ್ ಚಂಬಲ್ ಕಣಿವೆಯ ಡಕಾಯಿತ ಗುಂಪಿಗೆ ಸೇರಿಕೊಂಡು, ನಂತರ ಸಂಗಡಿಗರೊಂದಿಗೆ ಸೇರಿ, ತನಗೆ ಹೊಡೆದ 12 ಮಂದಿಯನ್ನು ಕೊಲೆ ಮಾಡುತ್ತಾನೆ.
1972ರಲ್ಲಿ ಇಂದಿರಾಗಾಂಧಿ ಪ್ರಧಾನಿಯಾದ ಸಂದರ್ಭ ಸಮಾಜವಾದಿ ಚಿಂತಕ ಜಯಪ್ರಕಾಶ್ ನಾರಾಯಣ್ ಮಾತಿಗೆ ಪ್ರಭಾವಿತಗೊಂಡ ಪಂಚಮ್ ಸಿಂಗ್ ಮತ್ತು 550 ಮಂದಿ ಡಕಾಯಿತರು ಸರ್ಕಾರಕ್ಕೆ ಶರಣಾದರು. ನ್ಯಾಯಾಲಯ ಇವರಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಆದರೆ ಜಯಪ್ರಕಾಶ್ ನಾರಾಯಣ್ ರಾಷ್ಟ್ರಪತಿಗೆ ಮನವಿ ಮಾಡಿ ಜೀವಾವಧಿ ಶಿಕ್ಷೆಗೆ ಇಳಿಯುವಂತೆ ಮಾಡುವಲ್ಲಿ ಯಶಸ್ವಿಯಾದರು.
ಶರಣಾಗುವ ಮೊದಲು ಪಂಚಮ್ ಸಿಂಗ್ ತಲೆಗೆ ರು. 2 ಕೋಟಿ ಬಹುಮಾನ ಘೋಷಿಸಲಾಗಿತ್ತು. ಪಂಚಮ್ ಸಿಂಗ್ ಕಿಡ್ನಾಪ್, ದರೋಡೆ, ಲೂಟಿ, ಕೊಲೆ ಮುಂತಾದ ಕೃತ್ಯವೆಸಗಿದ್ದನು.
ಶಿಕ್ಷೆಯ ಸಂದರ್ಭ ಒಟ್ಟು 9 ಜೈಲುಗಳಿಗೆ ವರ್ಗಾವಣೆಗೊಂಡಿದ್ದರು. ಇಂದಿರಾಗಾಂಧಿ ಅವರು ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆಗೆ ಡಕಾಯಿತರ ಮನಃಪರಿವರ್ತನೆ ಮಾಡುವಂತೆ ಸೂಚನೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಸ್ಥೆ ಕೇವಲ 3 ವರ್ಷದಲ್ಲಿ ಪಂಚಮ್ ಸಿಂಗ್ ಜೀವನ ಶೈಲಿಯನ್ನು ಬದಲಾಯಿಸಿತ್ತು ಎನ್ನುತ್ತಾರೆ ಮಂಗಳೂರು ಬ್ರಹ್ಮಕುಮಾರಿ ಸಂಸ್ಥೆ ಮುಖ್ಯಸ್ಥೆ ಬಿ.ಕೆ. ವಿಶ್ವೇಶ್ವರಿ.
ಚಂಬಲ್ ಕಣಿವೆ ಪರಿಸರದ ನಿವಾಸಿ ಬಿ.ಕೆ. ಸುರೇಶ್ ಇದ್ದರು.