ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಜಿ.ಪಂ.-ಶಾಸಕರ ಮಧ್ಯೆ ಬಿಇಒ ದರ್ಬಾರ್!

Vishwanath S
Updated On : 24 Feb 2014, 11:20 am

ಮಂಗಳೂರು: ಜಿಲ್ಲಾ ಪಂಚಾಯ್ತಿಯ ಸದನ ಸಮಿತಿ ವರದಿಯನ್ನೇ ಪ್ರಶ್ನಿಸಿ ಅದನ್ನು ತಿರಸ್ಕರಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಸರ್ಕಾರದ ಮೇಲೆ ಒತ್ತಡ ತಂದು ಅಧಿಕಾರಶಾಹಿ ದರ್ಬಾರ್ ಮಾಡಿದ್ದಾರೆ. ಈ ಮೂಲಕ ಜಿಲ್ಲಾ ಪಂಚಾಯ್ತಿ ವ್ಯವಸ್ಥೆಯನ್ನೇ ಅಧಿಕಾರಿಯೊಬ್ಬರು ಹೈಜಾಕ್ ಮಾಡುವ ತಂತ್ರ ನಡೆಯುತ್ತಿದೆ.
ಈ ದರ್ಬಾರ್ ನಡೆಸುತ್ತಿರುವುದು ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ(ಬಿಇಒ). ಈಗ ಇವರ ನೆರವಿಗೆ ಮುಂದಾಗಿರುವುದು ಬೆಳ್ತಂಗಡಿ ಶಾಸಕರು. ಬೆಳ್ತಂಗಡಿ ವಸತಿ ಶಾಲೆ ವಿಚಾರ ಈ ಪ್ರಕರಣದ ಸುತ್ತ ಸುತ್ತುತ್ತಿದೆ.
ಈಗ ವಿಧಾನಸಭಾ ಅಧಿವೇಶನ ನಡೆಯುತ್ತಿದ್ದು, ಇದೇ ಸಮಯ ಸಾಧಿಸಿ ತನ್ನ ಬೇಳೆ ಬೇಯಿಸಿಕೊಳ್ಳುವುದು ಈ ಸರ್ಕಾರಿ ಅಧಿಕಾರಿಯ ಹವಣಿಕೆ. ಇದಕ್ಕಾಗಿ ಜಿಲ್ಲಾ ಪಂಚಾಯ್ತಿ ವ್ಯವಸ್ಥೆಯನ್ನೇ ಎದುರು ಹಾಕಿಕೊಂಡಿದ್ದಾರೆ. ಇದರ ಪರಿಣಾಮ ಜಿಲ್ಲಾ ಪಂಚಾಯ್ತಿ ಮತ್ತು ಶಾಸಕರ ಮಧ್ಯೆ ವೈಮನಸ್ಸಿಗೆ ಕಾರಣವಾಗಿದ್ದು, ಇದರ ನೇತೃತ್ವ ಬಿಇಒ ವಹಿಸಿದಂತಾಗಿದೆ.
ಘಟನೆ ಏನು?: ಬೆಳ್ತಂಗಡಿ ವಸತಿ ಶಾಲೆಯಲ್ಲಿ ಅವ್ಯವಹಾರವಾಗಿದೆ ಎಂದು ಬಿಇಒ ಆರೋಪಿಸಿ ಸ್ವತಃ ವರದಿ ತಯಾರಿಸಿದ್ದರು. ಆ ವರದಿಯನ್ನು ಜಿಲ್ಲಾ ಪಂಚಾಯ್ತಿಗೆ ಸಲ್ಲಿಸಿದ್ದರು. ವರದಿ ಬಗ್ಗೆ ಕೆಡಿಪಿ ಸಭೆಯಲ್ಲಿ ಚರ್ಚೆ ನಡೆದಿತ್ತು. ಬಿಇಒ ವರದಿ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ನೇತೃತ್ವದಲ್ಲಿ 9 ಮಂದಿಯ ಸದನ ಸಮಿತಿ ನೇಮಿಸಲಾಗಿತ್ತು. ಈ ಸಮಿತಿ ಜ.30ರಂದು ಸ್ಥಳಕ್ಕೆ ಭೇಟಿ ನೀಡಿ ಬಿಇಒ ವರದಿ ಆಧಾರದಲ್ಲಿ ತನಿಖೆ ನಡೆಸಿದಾಗ, ಎಲ್ಲ ಆರೋಪವೂ ಆಧಾರ ರಹಿತ, ವಸತಿ ಶಾಲೆಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ ಎಂದು ಕಂಡುಕೊಂಡಿತ್ತು.
ಶೈಕ್ಷಣಿಕ ವ್ಯವಸ್ಥೆ ಹಾಳುಗೆಡವಲು, ದುರುದ್ದೇಶದಿಂದ ಬಿಇಒ ವರದಿ ತಯಾರಿಸಿರುವುದನ್ನು ಸದನ ಸಮಿತಿ ಪತ್ತೆಮಾಡಿತ್ತು. ಇದಕ್ಕಾಗಿ ಬಿಇಒಗೆ ನೋಟಿಸ್ ನೀಡುವಂತೆ ಸದನ ಸಮಿತಿ ವರದಿ ಶಿಫಾರಸ್ಸು ಮಾಡಿತ್ತು. ಅದರಂತೆ ನೋಟಿಸ್ ನೀಡಲು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಿಗೆ ಸೂಚಿಸಿದ್ದರು. ಅಲ್ಲದೆ ಬಿಇಒ ವಿರುದ್ಧ ಏಳು ಆರೋಪಗಳನ್ನು ಪಟ್ಟಿಮಾಡಿದ ಸದನ ಸಮಿತಿ ಶಿಸ್ತು ಕ್ರಮಕ್ಕೆ ಅವಕಾಶ ಕೋರಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.
ಕಿವಿಯೂದಿದ ಬಿಇಒ: ಈ ವಿಚಾರ ಗೊತ್ತಾದ್ದೇ ತಡ ಬಿಇಒ ಶಾಸಕ ರಲ್ಲಿಗೆ ಓಡಿದ್ದಾರೆ. ತಾನು ನೀಡಿದ ವರದಿಯನ್ನು ಜಿ.ಪಂ. ಸದನ ಸಮಿತಿ ತಿರಸ್ಕರಿಸಿದೆ. ಏಕಪಕ್ಷೀಯವಾಗಿ ಸದನ ಸಮಿತಿ ವರದಿ ನೀಡಿದ್ದು, ಅದನ್ನು ತಿರಸ್ಕರಿಸಬೇಕು. ಮತ್ತೆ ತನ್ನ ವರದಿ ಪರಿಗಣಿಸುವಂತೆ ಡಿಡಿಪಿಐಗೆ ಸೂಚನೆ ನೀಡಬೇಕು ಎಂದು ಹೇಳಿದ್ದಾರೆ.
  ಇದನ್ನೇ  ನಂಬಿದ ಶಾಸಕರು ಪಕ್ಷಾತೀತವಾಗಿ ಸಲ್ಲಿಕೆಯಾದ ಸದನ ಸಮಿತಿ ವರದಿ ಬದಲು ನಿಮ್ಮ ವರದಿಯನ್ನು ಪರಿಗಣಿಸಿ ಶಾಲೆಯ ವಿರುದ್ಧವೇ ಕ್ರಮ ಜರುಗಿಸುವುದಾಗಿ ತಲೆ ಆಡಿಸಿದ್ದಾರೆ. ಪ್ರಕರಣವೀಗ ಸರ್ಕಾರದ ಮುಂದಿದೆ.
ಈ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ ಹೇಳುವುದಿಷ್ಟು, 'ಬೆಳ್ತಂಗಡಿ ಬಿಇಒ ವಿಚಾರದಲ್ಲಿ ಸದನ ಸಮಿತಿ ತನಿಖೆ ನಡೆಸಿದೆ. ಅವರ ವಿರುದ್ಧ ಕ್ರಮಕೈಗೊಳ್ಳವ ಬಗ್ಗೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಆಯುಕ್ತರಿಗೆ ವರದಿ ಸಲ್ಲಿಸಲಾಗಿದೆ.'
'ಬಿಇಒ ಸಿದ್ಧಪಡಿಸಿದ ವರದಿ ಆಧಾರದಲ್ಲಿ ಜಿಲ್ಲಾ ಪಂಚಾಯ್ತಿ ಸದನ ಸಮಿತಿ ತನಿಖೆ ನಡೆಸಿದ್ದು, ಅದರಲ್ಲಿ ಸತ್ಯಾಂಶ ಕಂಡುಬಂದಿಲ್ಲ. ಅಲ್ಲದೆ ಬಿಇಒ ವಿರುದ್ಧ ಕೆಲವು ಲೋಪಗಳನ್ನು ಪಟ್ಟಿ ಮಾಡಿದ್ದು, ಅವರಿಗೆ ನೋಟಿಸ್ ನೀಡುವಂತೆ ತಿಳಿಸಲಾಗಿದೆ. ಇಷ್ಟಾದ ಮೇಲೂ ಅವರು ಸದನ ಸಮಿತಿ ವಿರುದ್ಧವೇ ಸವಾರಿ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಅವರ ವಿರುದ್ಧ ಕ್ರಮ ಜರುಗಿಸಲು ಅನುಮತಿ ನೀಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.
- ಕೊರಗಪ್ಪ ನೈಕ, ಅಧ್ಯಕ್ಷ, ದ.ಕ.ಜಿ.ಪಂ.


-ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement