ಧರ್ಮದ ಉದ್ದೇಶ ಶುದ್ಧೀಕರಣ: ಡಾ. ಹೆಗ್ಗಡೆ
ಬೆಳ್ತಂಗಡಿ: ಎಲ್ಲ ದೋಷಗಳನ್ನು ಸ್ವೀಕರಿಸಿ ಶುದ್ಧಗೊಳಿಸುವ ಶಕ್ತಿ, ಸಾಮರ್ಥ್ಯ ಧರ್ಮಕ್ಕೆ ಇದೆ. ಧರ್ಮದ ಮೂಲ ಉದ್ದೇಶವೇ ಶುದ್ಧೀಕರಣ. ಸಂಘ ಸಂಸ್ಥೆಗಳಲ್ಲಿ ನಿರಂತರತೆ ಇದ್ದು ಧರ್ಮದ ರಕ್ಷಣೆಯೊಂದಿಗೆ ಸಮಾಜದ ಸಂಘಟನೆಯಾಗಬೇಕು, ಧರ್ಮದ ಲಾಭವಾಗಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಧರ್ಮಸ್ಥಳದ ಮಹೋತ್ಸವ ಸಭಾ ಭವನದಲ್ಲಿ ಭಾನುವಾರ ರಾಜ್ಯ ಜೈನ ಸ್ವಯಂ ಸೇವಕರ ತಂಡದ ಸಮಾಲೋಚನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ 400 ತಂಡಗಳ 10,000 ಸದಸ್ಯರ ಪದಗ್ರಹಣ ಮಾಡುವ ಜವಾಬ್ದಾರಿಯನ್ನು ಆಯಾ ಜಿಲ್ಲಾ ಸಂಚಾಲಕರಿಗೆ ವಹಿಸಿಕೊಡಲಾಗಿದೆ. ಯಾವುದೇ ಕಾರ್ಯಕ್ರಮದಲ್ಲಿ ನಮ್ಮ ಮೂಲಭೂತವಾದ ಧರ್ಮ ಮತ್ತು ಸಂಸ್ಕಾರವನ್ನು ಮರೆಯಬಾರದು. ಜೈನ ಸ್ವಯಂ ಸೇವಕರ ತಂಡದ ಸದಸ್ಯರು ಯಾರೂ ನಾಯಕರಲ್ಲ, ಸೇವಕರು. ಆಚಾರ್ಯರಲ್ಲ, ಶ್ರಾವಕರು. ಪ್ರವಚನಕಾರರಲ್ಲ, ಶ್ರೋತೃಗಳು ಎಂದು ಡಾ. ಹೆಗ್ಗಡೆ ವಿಶ್ಲೇಷಿಸಿದರು.
ರಾಜ್ಯ ಸಂಚಾಲಕ ಕಾರ್ಕಳದ ನೇಮಿರಾಜ ಆರಿಗ ಮಾತನಾಡಿ, ರಾಜ್ಯದ 14 ಜಿಲ್ಲೆಗಳಲ್ಲಿ 100 ಸಂಚಾಲಕರನ್ನು ಆಯ್ಕೆ ಮಾಡಿದ್ದು, 400 ಸ್ವಸಹಾಯ ಸಂಘಗಳನ್ನು ರಚಿಸಲಾಗಿದೆ. ಒಂದು ಲಕ್ಷ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ ಎಂದರು.
ರಾಜ್ಯ ಸಹ ಸಂಚಾಲಕ ಎ.ವಿ. ಶೆಟ್ಟಿ, ಧರ್ಮಸ್ಥಳ, ಶೀತಲ್ ಪಾಟೀಲ್ ಬೆಳಗಾವಿ ಮತ್ತು ವಿಜಯ ಕುಮಾರ್ ಜೈನ್ ಬೀದರ್ ಇದ್ದರು.