ನಪಂನಲ್ಲಿ ಮೀನು ಮಾರಿ ಪ್ರತಿಭಟನೆ: ಕರವೇ ಎಚ್ಚರಿಕೆ
ಸುಳ್ಯ: ಪಟ್ಟಣದಲ್ಲಿ ಮುಕ್ತ ಮೀನು ಮಾರುಕಟ್ಟೆ ವ್ಯವಸ್ಥೆ ಮಾಡಬೇಕೆಂಬ ಮನವಿಗೆ ಬೆಲೆ ಕೊಡದೆ ಟೆಂಡರ್ ಪ್ರಕ್ರಿಯೆಗೆ ಸುಳ್ಯ ನಗರ ಪಂಚಾಯಿತಿ ಮುಂದಾಗಿದ್ದು, ಒಂದು ವೇಳೆ ಏಲಂ ನಡೆದರೆ ಅದೇ ದಿನ ನ.ಪಂ. ಎದುರು ಮೀನು ತಂದು ಮಾರುವ ಮೂಲಕ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಹೇಳಿದೆ.
ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ವಕ್ತಾರ ಮುರಳಿ ಮಾವಂಜಿ, ದೊಡ್ಡ ಮೊತ್ತಕ್ಕೆ ಏಲಂ ಮಾಡುವ ಮೂಲಕ ಮೀನನ್ನು ಜನಸಾಮಾನ್ಯರ ಕೈಗೆಟುಕದಂತೆ ಮಾಡಲಾಗಿತ್ತು. ಇದನ್ನು ಖಂಡಿಸಿ ಮುಕ್ತ ಮಾರುಕಟ್ಟೆ ಮಾಡಬೇಕೆಂದು ಒತ್ತಾಯಿಸಿದ್ದೆವು. ಮಾಡುವುದಾಗಿ ನಪಂ ಭರವಸೆಯನ್ನೂ ನೀಡಿತ್ತು. ಆದರೆ, ಇದೀಗ ಮಾ.17ರಂದು ಏಲಂ ನಡೆಸಲು ನೋಟಿಸ್ ಮಾಡಲಾಗಿದೆ. ರು. 14 ಲಕ್ಷದಷ್ಟು ಕನಿಷ್ಠ ಮೊತ್ತ ಏಲಂಗೆ ನಿಗದಿಪಡಿಸಲಾಗಿದೆ. ಹೀಗಾದರೆ ಈ ಬಾರಿಯೂ ದೊಡ್ಡ ಮೊತ್ತಕ್ಕೆ ಏಲಂ ನಡೆಯಬಹುದು. ಇದನ್ನು ಹಿಂದಕ್ಕೆ ಪಡೆದು ಮುಕ್ತ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ಅಂದು ನಪಂ ಆವರಣದಲ್ಲಿ ಮೀನು ತಂದು ಮಾರಾಟ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟಿಸುವುದಾಗಿ ಹೇಳಿದರು. ಕರ್ನಾಟಕ ರಕ್ಷಣಾ ವೇದಿಕೆಯ ಗುತ್ತಿಗಾರು ಘಟಕದ ಪ್ರವೀಣ್ ಮುಂಡೋಡಿ ಹಾಗೂ ಗುರುಪ್ರಸಾದ್ ಪಂಜ ಮಾತನಾಡಿ, ಜಾಲ್ಸೂರು- ಸುಬ್ರಹ್ಮಣ್ಯ ರಸ್ತೆಯ ಎರಡನೇ ಹಂತದ ಕಾಮಗಾರಿ ಎಲಿಮಲೆಯಿಂದ ನಡೆಯುತ್ತಿದ್ದು ತೀರ ಕಳಪೆಯಾಗಿದೆ. ಈಗಾಗಲೇ ಜಿಲ್ಲಾಧಿಕಾರಿ ಇದನ್ನು ಪರಿಶೀಲಿಸಿದ್ದಾರೆ. ಇದನ್ನು ಸರಿಪಡಿಸಿ ಗುಣಮಟ್ಟದ ಕಾಮಗಾರಿ ನಡೆಸದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು. ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಮಿತಿಮೀರಿದ್ದು, ಆಗಾಗ ಕೈಕೊಡುವುದರಿಂದ ಕೃಷಿಕರು, ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಇದರ ವಿರುದ್ಧ ಕೂಡ ಪ್ರತಿಭಟನೆ ನಡೆಸುವುದಾಗಿ ಅವರು ಹೇಳಿದರು. ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಪದ್ಮನಾಭ ಹರ್ಲಡ್ಕ, ಗುತ್ತಿಗಾರು ಘಟಕ ಅಧ್ಯಕ್ಷ ಮಾಧವ ಎರ್ದಡ್ಕ ಇದ್ದರು.